ಬೆಂಗಳೂರು:ಬ್ರಾಂಡ್ ಬೆಂಗಳೂರಿಗೆ ಧಕ್ಕೆಯಾಗುತ್ತಿದೆ ಎಂದು ಸರಣಿ ಟ್ವೀಟ್ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದ ಉದ್ಯಮಿ ಮೋಹನ್ ದಾಸ್ ಪೈ, ಭಾನುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಬೆಂಗಳೂರು ಸಮಸ್ಯೆಗಳ ಬಗ್ಗೆ ಚರ್ಚೆ: ರೇಸ್ ಕೋರ್ಸ್ ರಸ್ತೆಯಲ್ಲಿರುವ ಸಿಎಂ ಅಧಿಕೃತ ನಿವಾಸ ರೇಸ್ ವ್ಯೂ ಕಾಟೇಜ್ಗೆ ಉದ್ಯಮಿ ಮೋಹನ್ ದಾಸ್ ಪೈ ಭೇಟಿ ನೀಡಿದ್ದರು. ಪ್ರಸ್ತುತ ಬೆಂಗಳೂರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅವುಗಳನ್ನು ಪರಿಹರಿಸುವ ಕುರಿತು ಸರ್ಕಾರ ಮಾಡಬೇಕಿರುವ ಕೆಲಸಗಳ ಕುರಿತು ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗ್ತಿದೆ. ವಿಶೇಷವಾಗಿ ಐಟಿ ಕಂಪನಿಗಳಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ಮಾಡಲಾಗಿದೆ. ಐಟಿ ಕಂಪನಿಗಳಿಂದಲೂ ರಾಜಕಾಲುವೆ ಒತ್ತುವರಿಯಾಗಿದೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಸಿಎಂ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗ್ತಿದೆ.
ಸಿಎಂ ಭೇಟಿ ಮಾಡಿದ ಉದ್ಯಮಿ ಮೋಹನ್ ದಾಸ್ ಪೈ ಮೋದಿ, ಶಾ ಪ್ರಶ್ನಿಸಿದ್ದ ಉದ್ಯಮಿ:ಬ್ರಾಂಡ್ ಬೆಂಗಳೂರು ಬಗ್ಗೆ ಅನೇಕ ಬಾರಿ ಟ್ವೀಟ್ ಮಾಡಿದ್ದ ಮೋಹನ್ ದಾಸ್ ಪೈ, ಬೆಂಗಳೂರಿನ ರಸ್ತೆಗಳಲ್ಲಿನ ಗುಂಡಿ, ಮಳೆಹಾನಿ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದರು. ಬೆಂಗಳೂರು ನಗರದ ರಾಜಕಾಲುವೆಗಳು ಹೂಳಿನಿಂದ ತುಂಬಿವೆ. ಬೆಂಗಳೂರನ್ನು ಭ್ರಷ್ಟಾಚಾರ ಮುಕ್ತ ನಗರವನ್ನಾಗಿಸಿ, ರಾಷ್ಟ್ರ ರಾಜಧಾನಿ ದೆಹಲಿಯನ್ನು ಭ್ರಷ್ಟಾಚಾರ ಮುಕ್ತ ಮಾಡುವುದಾದರೇ ಕರ್ನಾಟಕವನ್ನು ಯಾಕೆ ಭ್ರಷ್ಟಾಚಾರ ಮುಕ್ತ ಮಾಡುತ್ತಿಲ್ಲ ಎಂದು ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಟ್ಯಾಗ್ ಮಾಡಿ ಪ್ರಶ್ನಿಸಿದ್ದರು.
ಇದನ್ನೂ ಓದಿ: ಬೆಂಗಳೂರು ಸಮಸ್ಯೆ ಬಗ್ಗೆ ಉದ್ಯಮಿ ಮೋಹನ್ ದಾಸ್ ಪೈ ಟ್ವೀಟ್.. ಸಲಹೆ ಪರಿಗಣನೆ, ನಾಳೆ ಸಿಎಂ ಸಿಟಿ ರೌಂಡ್ಸ್
ಬೆಂಗಳೂರಿನ ಯೋಜನೆಗಳು ಪೂರ್ಣಗೊಳ್ಳಲು, ಇಲ್ಲಿನ ಜನಜೀವನ ಸುಧಾರಿಸಲು ಹೆಚ್ಚು ಹಣ ಬೇಕೇ? ಅಥವಾ ಉತ್ತಮ ಆಡಳಿತ ಬೇಕೇ? ನಮ್ಮ ಮೆಟ್ರೋ ಯೋಜನೆಗಳು ಕಾಲಮಿತಿಯನ್ನು ಮೀರಿವೆ. ಇದು ಸಂಪೂರ್ಣವಾಗಿ ಆಡಳಿತದ ವೈಫಲ್ಯ. ನಮ್ಮ ಪ್ರಮುಖ ಯೋಜನೆಗಳ ಸ್ಥಿತಿಗತಿಯನ್ನು ದಯವಿಟ್ಟು ಪರಿಶೀಲಿಸಿ ಎಂದು ಮೋದಿ ಮಂಗಳೂರಿಗೆ ಆಗಮಿಸುವ ಮುನ್ನ ಟ್ವೀಟ್ ಮಾಡಿದ್ದರು. ಮೋಹನ್ ದಾಸ್ ಪೈ ಟ್ವೀಟ್ ಬೆನ್ನಲ್ಲೇ ಸಿಎಂ ನಗರ ಪ್ರದಕ್ಷಿಣೆ ಮಾಡಿದ್ದರು. ಅಧಿಕಾರಿಗಳ ಸಭೆ ನಡೆಸಿದ್ದರು. ಆದ್ರೆ ಇಂದು ಪೈ ಖುದ್ದಾಗಿ ಸಿಎಂ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.