ಬೆಂಗಳೂರು: ಉದ್ಯಮಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರೋಸ್ ಗಾರ್ಡನ್‌ನಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಬಾಲ ಸುಬ್ರಮಣಿಯನ್ (67) ಎಂದು ಗುರುತಿಸಲಾಗಿದೆ. ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.
ಟ್ರಾನ್ಸ್‌ಪೋರ್ಟ್ ಉದ್ಯಮಿಯಾಗಿದ್ದ ಸುಬ್ರಮಣಿಯನ್ ಬುಧವಾರ ಸಂಜೆ ತಮ್ಮ ಮೊಮ್ಮಗನನ್ನು ಬ್ಯಾಡ್ಮಿಂಟನ್ ತರಗತಿಗೆ ಕರೆದುಕೊಂಡು ಹೋಗಿ ಮತ್ತೆ ಸಂಜೆ 4.55 ರ ವೇಳೆಗೆ ತಮ್ಮ ಸೊಸೆ ಧನಲಕ್ಷ್ಮಿ ಅವರಿಗೆ ಕರೆ ಮಾಡಿ, 'ನನಗೆ ಹೊರಗಡೆ ಕೆಲಸವಿದೆ ಸಂಜೆ 7 ಗಂಟೆಗೆ ಬರುತ್ತೇನೆಂದು' ಹೇಳಿದ್ದರಂತೆ. ನಂತರ ಅವರ ಕುಟುಂಬಸ್ಥರು ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿದೆ. ಇದರಿಂದ ಗಾಬರಿಗೊಂಡ ಸುಬ್ರಮಣಿಯನ್ ಅವರ ಪುತ್ರ ಸೋಮಸುಂದರ್ ತಂದೆ ಕಾಣೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.