ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಪೊಲೀಸರ ಸೋಗಿನಲ್ಲಿ ಉದ್ಯಮಿ ಸೇರಿದಂತೆ ಶ್ರೀಮಂತ ವ್ಯಕ್ತಿಗಳನ್ನು ಹೆದರಿಸಿ ಸುಲಿಗೆ ಮಾಡುವ ಉಪಟಳ ಹೆಚ್ಚಾಗಿದೆ. ಉದ್ಯಮಿಗಳ ವೀಕ್ನೆಸ್ ತಿಳಿದುಕೊಂಡು ಅವರನ್ನು ಬೆದರಿಸಿ ಹಣ ಮಾಡುವ ಗ್ಯಾಂಗ್ ರಾಜಧಾನಿಯಲ್ಲಿ ಸಕ್ರಿಯವಾಗಿದೆ.
ಪೊಲೀಸರ ಹೆಸರಿನಲ್ಲಿ ವ್ಯಾಪಾರಿಯನ್ನು ಅಪಹರಿಸಿ ಹಲ್ಲೆ ಮಾಡಿ ಲಕ್ಷಾಂತರ ರೂಪಾಯಿಗೆ ಬೇಡಿಕೆಯಿಟ್ಟಿದ್ದ ಮೂವರು ಅಪಹರಣಕಾರರನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರ ಪ್ರದೇಶ ಮೂಲದ ಚಾರ್ಟೆಡ್ ಅಕೌಂಟೆಂಟ್ ಅಗಿರುವ ದಿವಾಕರ್ ರೆಡ್ಡಿ, ಸ್ನೇಹಿತ ಅರವಿಂದ ಮೆಹ್ತಾ ಎಂಬುವರನ್ನು ಅಪಹರಿಸಿದ ಆರೋಪದ ಮೇರೆಗೆ ಅಪಹರಣಕಾರರಾದ ನದೀಂ ಷರೀಫ್, ಸಂತೋಷ್ ಹಾಗೂ ಅಜರ್ ಎಂಬುವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ನಗರ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ತಿಳಿಸಿದ್ದಾರೆ.
ಅರವಿಂದ ಮೆಹ್ತಾ ಚಿನ್ನದ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದ. ಈತನ ವಿರುದ್ಧ ದೆಹಲಿ ಸೇರಿದಂತೆ ಮುಂತಾದ ಕಡೆಗಳಲ್ಲಿ ವಂಚನೆ ಪ್ರಕರಣ ದಾಖಲಾಗಿವೆ. ಬೆಂಗಳೂರಿನಲ್ಲಿ ಈತನ ವ್ಯವಹಾರವನ್ನು ಚಾರ್ಟೆಡ್ ಅಕೌಂಟ್ಟೆಂಟ್ ಆಗಿದ್ದ ದಿವಾಕರ್ ರೆಡ್ಡಿ ನೋಡಿಕೊಳ್ಳುತ್ತಿದ್ದ. ಮತ್ತೊಂದೆಡೆ ಕಳ್ಳತನ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ನದೀಂ ಷರೀಫ್ ಜಾಮೀನಿನ ಮೇಲೆ ಹೊರಬಂದಿದ್ದ.
ಐಷರಾಮಿ ಜೀವನ ನಡೆಸಲು ಮುಂದಾಗಿದ್ದ ನದೀಂ ಷರೀಫ್, ತನ್ನ ಸಹಚರರೊಂದಿಗೆ ಗ್ಯಾಂಗ್ ಕಟ್ಟಿಕೊಂಡಿದ್ದ. ವ್ಯಾಪಾರಿ ಅರವಿಂದ ಮೆಹ್ತಾ ಅವ್ಯವಹಾರ ನಡೆಸುತ್ತಿರುವ ಬಗ್ಗೆ ಮಾಹಿತಿ ಅರಿತ ಗ್ಯಾಂಗ್ ದಿನ ಪತ್ರಿಕೆಗಳಲ್ಲಿ ಬಂದಿದ್ದಂತಹ ಮಾಹಿತಿ ಆಧರಿಸಿ ಬ್ಯುಸಿನೆಸ್ ಬಗ್ಗೆ ಮಾತನಾಡಬೇಕೆಂದು ಹೇಳಿ ಎಂ.ಜಿ.ರಸ್ತೆಯಲ್ಲಿರುವ ಖಾಸಗಿ ಹೊಟೇಲ್ಗೆ ಕರೆಯಿಸಿಕೊಂಡಿದ್ದರು.