ಬೆಂಗಳೂರು: ನಗರದ ಹಲವೆಡೆ ತಂಗುದಾಣಗಳನ್ನು ನಿರ್ಮಿಸಲು ಬಿಬಿಎಂಪಿ ಕ್ರಮಕೈಗೊಂಡಿದೆ. 4 ವರ್ಷಗಳ ಹಿಂದೆಯೇ ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ 2 ಸಾವಿರಕ್ಕೂ ಹೆಚ್ಚು ಬಸ್ ಶೆಲ್ಟರ್‌ಗಳ ನಿರ್ಮಾಣಕ್ಕೆ ಟೆಂಡರ್ ಕರೆದಿತ್ತು. ಇದರ ಜೊತೆಗೆ ಇಪ್ಪತ್ತು ವರ್ಷಗಳ ನಿರ್ವಹಣೆ ಹೊಣೆಯೂ ಗುತ್ತಿಗೆದಾರರದ್ದು ಆಗಿರುತ್ತೆ. ಆದ್ರೆ ನಾಲ್ಕೇ ವರ್ಷದಲ್ಲೇ ಬಸ್ ತಂಗುದಾಣಗಳು ಅಧೋಗತಿಗೆ ತಲುಪಿವೆ.
ಉದ್ಯಾನ ನಗರಿಯಲ್ಲಿ 4 ವರ್ಷ ಕಳೆದರೂ ಬಸ್ ತಂಗುದಾಣಗಳ ಅಪೂರ್ಣ; ಹಲವೆಡೆ ನಿರ್ವಹಣೆ ಮರೀಚಿಕೆ! ಮಳೆ ಬಿಸಿಲಿನಿಂದ ಪ್ರಯಾಣಿಕರು ಆಶ್ರಯ ಪಡೆಯಲು ಬಸ್ ನಿಲ್ದಾಣದ ಶೆಲ್ಟರ್‌ಗಳನ್ನು ನಿರ್ಮಿಸಲಾಗುತ್ತದೆ. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವ(ಪಿಪಿಪಿ)ದಲ್ಲಿ ನಿರ್ಮಾಣ ಆಗಿರುವ ಬಸ್ ತಂಗುದಾಣಗಳು ಅಧೋಗತಿಗೆ ತಲುಪಿವೆ. ಗುತ್ತಿಗೆದಾರರಿಗೆ ತಂಗುದಾಣಗಳಲ್ಲಿ ಜಾಹಿರಾತು ಹಾಕಲು ಅನುಮತಿ ಇದೆ. ಜೊತೆಗೆ ಬಾಡಿಗೆಯನ್ನು ಬಿಬಿಎಂಪಿಗೆ ಪಾವತಿಸುವುದರೊಂದಿಗೆ ನಿರ್ವಹಣೆಯನ್ನೂ ನೋಡಿಕೊಳ್ಳುವ ಹೊಣೆ ಇರುತ್ತದೆ. ಆದ್ರೆ ಒಂದು ಬಾರಿ ನಿರ್ಮಾಣ ಮಾಡಿ ಕೈತೊಳೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಮುಖ್ಯರಸ್ತೆ ಮತ್ತು ಅಡ್ಡ ರಸ್ತೆಗಳ ಬಳಿ 2,212 ಬಸ್ ನಿಲ್ದಾಣದ ಶೆಲ್ಟರ್ ನಿರ್ಮಾಣಕ್ಕೆ ನಾಲ್ಕು ಗುತ್ತಿಗೆ ಸಂಸ್ಥೆಗಳಿಗೆ ಟೆಂಡರ್ ನೀಡಲಾಗಿತ್ತು. ಅದರಲ್ಲಿ 902 ಶೆಲ್ಟರ್‌ಗಳು ಪೂರ್ಣವಾಗಿವೆ. 298 ಕಾಮಗಾರಿ ಪ್ರಗತಿಯಲ್ಲಿ ಇದೆ. ಸರ್ಕಾರಿ ಜಾಗ ಒತ್ತುವರಿ ಮಾಡಿ ಅಂಗಡಿ, ಮನೆ, ಕಾಂಪ್ಲೆಕ್ಸ್ ಗಳನ್ನ ನಿರ್ಮಾಣ ಮಾಡಲಾಗಿದೆ. 1,047 ಸ್ಥಳಗಳನ್ನ ಬಸ್ ನಿಲ್ದಾಣ ಎಂದು ಕೇವಲ ಬೋರ್ಡ್ ಹಾಕಲಾಗಿದೆ. ಆದ್ರೆ ಇದು ಜನರಿಗೆ ಉಪಯೋಗವಾಗುತ್ತಿಲ್ಲ.
ಗುತ್ತಿಗೆ ನೀಡಿ ನಾಲ್ಕು ವರ್ಷ ಕಳೆದರೂ ಬಸ್ ಶೆಲ್ಟರ್‌ಗಳ ನಿರ್ಮಾಣ ಪೂರ್ಣಗೊಂಡಿಲ್ಲ. ಈ ಬಗ್ಗೆ ಗುತ್ತಿಗೆದಾರರನ್ನು ಕೇಳಿದ್ರೆ, ಶುಚಿತ್ವಗೊಳಿಸುವುದು, ಮಳೆ ಬರುವ ಮುನ್ನ ರಿಪೇರಿ ಮಾಡುವ ಕಾರ್ಯವನ್ನ ಮಾಡಿದ್ದೇವೆ. ಬಿಎಂಟಿಸಿ ಎಲ್ಲೆಲ್ಲಿ ಬಸ್ಸು ನಿಲ್ದಾಣಗಳು ಬೇಕೆಂದು ಹೇಳಿದ್ದಾರೋ ಅಲ್ಲೆಲ್ಲಾ ಟೆಂಡರ್ ತೆಗೆದುಕೊಂಡು ಶೆಲ್ಟರ್ ನಿರ್ಮಾಣ ಮಾಡಿದ್ದೇವೆ ಎನ್ನುತ್ತಾರೆ ಗುತ್ತಿಗೆದಾರ ರವಿ ರೆಡ್ಡಿ.
ಕೆಲ ಸ್ಲಂ ಹುಡುಗರು ಬಸ್ ತಂಗುದಾಣದ ಡಿಸ್‌ಪ್ಲೇ, ಲೈಟ್ ಕೀಳುವಂತಹ ಕೆಲಸ ಮಾಡ್ತಾರೆ. ಇದು ನಮಗೆ ಸಮಸ್ಯೆ ಆಗಿದೆ ಎನ್ನುತ್ತಾರೆ ಗುತ್ತಿಗೆದಾರರು. ಕೆಲವೊಂದೆಡೆ ಈಟಿವಿ ಭಾರತ ಗ್ರೌಂಡ್ ರಿಪೋರ್ಟ್‌ಗೆ ಇಳಿದಾಗ ಬಸ್ಸು ಸ್ಟಾಂಡ್‌ಗಳ ಬಳಿ ರಸ್ತೆ ಅಗೆದು ಜಲಮಂಡಳಿ ಅರ್ಧಕ್ಕೆ ಕಾಮಗಾರಿ ನಿಲ್ಲಿಸಿದೆ. ಮಳೆ ಬಂದರೆ ಜನರು ಬಸ್ ನಿಲ್ದಾಣ ಬಳಿ ನಿಲ್ಲಲು ಸಮಸ್ಯೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಇನ್ನಾದ್ರೂ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.