ಬೆಂಗಳೂರು: ಬಿಬಿಎಂಪಿಯಲ್ಲಿ ಇಂದು ಹಲವಾರು ವಿಷಯಗಳ ಕುರಿತು ಸಭೆ ನಡೆಯಿತು. ಪಾಲಿಕೆ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿದ್ದು, ಆದಾಯ ಸಂಗ್ರಹದ ಬಗ್ಗೆ ಗಮನಕೊಡುತ್ತಿಲ್ಲ. 1650 ಬಸ್ ಶೆಲ್ಟರ್ ಪ್ಯಾಕೇಜ್ ಕೇವಲ ಇಬ್ಬರಿಗೆ ಗುತ್ತಿಗೆ ಆಗಿದೆ. ಆದರೆ ಒಂದು ವರ್ಷಕ್ಕೆ 642 ಮಾತ್ರ ಬಸ್ ಶೆಲ್ಟರ್ ನಿರ್ಮಾಣ ಮಾಡಿದ್ದಾರೆ, ಉಳಿದ ಟೆಂಡರ್ ರದ್ದು ಮಾಡಬೇಕು ಎಂದು ಪ್ರತಿಪಕ್ಷದ ನಾಯಕ ವಾಜಿದ್ ಆಗ್ರಹಿಸಿದರು.
ನಗರದಲ್ಲಿ ಎರಡು ಸಾವಿರಕ್ಕಿಂತ ಹೆಚ್ಚು ಬಸ್ ಶೆಲ್ಟರ್ ಇದ್ದು, ಹೆಚ್ಚಿನವು ಕಾನೂನುಬಾಹಿರವಾಗಿದೆ. ಯಾರೂ ಜಾಹೀರಾತು ತೆರಿಗೆ ಕಟ್ಟುತ್ತಿಲ್ಲ. ಗುತ್ತಿಗೆ ನೀಡಿದ ಸಂಸ್ಥೆಗಳಿಂದ 26 ಕೋಟಿ ರೂ. ಜಾಹೀರಾತು ತೆರಿಗೆ ಬರಬೇಕಿತ್ತು. ಆದರೆ ಕೇವಲ 6 ಕೋಟಿ ಜಾಹೀರಾತು ತೆರಿಗೆ ಬಂದಿದೆ. ಒಂದು ವರ್ಷದ ಬಳಿಕ ಈ ಸಂಸ್ಥೆಗಳು ಪಾಲಿಕೆಗೆ ಬಿಟ್ಟುಕೊಡಬೇಕಿತ್ತು. ಪಾಲಿಕೆ ಯಾರಿಗೆ ಬೇಕಾದ್ರು ಜಾಹೀರಾತಿಗೆ ನೀಡಬಹುದು. ಆದ್ರೆ ಇದ್ಯಾವುದೂ ನಡೆದಿಲ್ಲ. ಪಾಲಿಕೆ ಆದಾಯಕ್ಕೆ ಖೋತಾ ಆಗಿದೆ. ಕಾನೂನು ಬಾಹಿರ ಬಸ್ ಶೆಲ್ಟರ್ಗಳನ್ನು ತೆರವು ಮಾಡಬೇಕು, 1650 ರ ಪೈಕಿ ಸಾವಿರ ಬಸ್ ಶೆಲ್ಟರ್ ನಿರ್ಮಾಣದ ಗುತ್ತಿಗೆ ಕೈಬಿಡಬೇಕು. ಟೈಮ್ಸ್ ಹಾಗೂ ಸೈನೇಜ್ ಸಂಸ್ಥೆಗಳನ್ನು ಬ್ಲಾಕ್ ಲಿಸ್ಟ್ಗೆ ಹಾಕಬೇಕು ಎಂದು ವಾಜಿದ್ ಒತ್ತಾಯಿಸಿದರು. ಈ ವೇಳೆ ಬಿಜೆಪಿ ಪಾಲಿಕೆ ಸದಸ್ಯರು, ಹಾಗೂ ಮೇಯರ್ ಈ ಅವ್ಯವಹಾರಗಳು ನಡೆದಿದ್ದು, ಕಾಂಗ್ರೆಸ್ ಅವಧಿಯಲ್ಲೇ ಎಂದು ಟೀಕಿಸಿದರು.
ಬಿಜೆಪಿ ಆಡಳಿತಕ್ಕೆ ಬಂದ ಮೇಲೆ ಬಿ ಖಾತಾಗಳನ್ನು, ಎ ಖಾತಾ ಮಾಡುವ ಬಗ್ಗೆ ಜೋರಾಗಿ ಸದ್ದಾಗಿತ್ತು. ಆದ್ರೆ ನಂತರ ಏನಾಯ್ತು. ಪಾಲಿಕೆಗೆ ಕೋಟ್ಯಾಂತರ ರುಪಾಯಿ ನಷ್ಟವಾಗುತ್ತಿದ್ದು, ಈ ಎ ಖಾತಾ, ಬಿ ಖಾತಾದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಮನವಿ ಮಾಡಿದ್ರು. ಇದಕ್ಕೆ ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಕೂಡ ಸಾಥ್ ನೀಡಿ, ಐದು ವರ್ಷದಿಂದಲೂ ಈ ಕೆಲಸ ಮಾಡಿಲ್ಲ ಎಂದರು. ಮಹಾರಾಜ ಕಾಂಪ್ಲೆಕ್ಸ್ 2005 ರಲ್ಲಿ ನಿರ್ಮಾಣವಾಗಿದ್ದು, ವರ್ಷಕ್ಕೆ ಕೇವಲ 70 ಲಕ್ಷ ಪಾಲಿಕೆಗೆ ಕೊಡುತ್ತಿದ್ದಾರೆ. ಆದ್ರೆ ಆ ಸಂಸ್ಥೆಯ ಮಾಲೀಕ, ಮೂವತ್ತು ವರ್ಷಕ್ಕೆ ಲೀಸ್ ಪಡೆದು ಕೋಟ್ಯಾಂತರ ರೂಪಾಯಿ ಕಬಳಿಸುತ್ತಿದ್ದಾರೆ ಎಂದರು.
ಕನ್ನಡ ಸಂಘ ಸಂಸ್ಥೆಗಳ ಕಟ್ಟಡ, ಜಾಗ ಮಾರಾಟ ಮಾಡುವುದು ಸರಿಯಲ್ಲ:
ಉದಯಬಾನು ಕಲಾಸಂಘ ಸೇರಿದಂತೆ, ಕನ್ನಡ ಸಂಘ ಸಂಸ್ಥೆಗಳು, ಶಾಲೆಗಳ ಜಾಗಗಳನ್ನು ಗುತ್ತಿಗೆ ನವೀಕರಿಸದೆ. ಮಾರುಕಟ್ಟೆ ದರ ಕೊಟ್ಟು ಖರೀದಿಸಿ ಎಂದು ಸರ್ಕಾರ ಆದೇಶ ಹೊರಡಿಸಿರುವುದು ಖಂಡನಾರ್ಹ ಎಂದು ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಆಗ್ರಹಿಸಿದರು. ಕೋವಿಡ್ ನೆಪದಲ್ಲಿ , ಆದಾಯ ಸಂಗ್ರಹಕ್ಕೆ ನಿವೇಶನಗಳನ್ನು ಮಾರಾಟ ಮಾಡುವುದು ಬೇಡ. ಕನ್ನಡ ಸಂಘಗಳಿಗೆ ಕೊಂಡುಕೊಳ್ಳುವ ಶಕ್ತಿ ಇಲ್ಲ. ಕೋವಿಡ್ ನೆಪದಲ್ಲಿ ಪಾಲಿಕೆ ಆಸ್ತಿಗಳನ್ನು ಮಾರಾಟ ಮಾಡುವುದು ಬೇಡ ಎಂದು ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ್ ತಿಳಿಸಿದರು. ಬಿಡಿಎ ಗುತ್ತಿಗೆ ಕೊಟ್ಟಿರುವ ದೊಡ್ಡ ದೊಡ್ಡ ಪೆಟ್ರೋಲ್ ಬಂಕ್, ಕಟ್ಟಡಗಳಿರುವ ಜಾಗದ ಮಾರಾಟಕ್ಕೆ ಹೊರಟಿರುವುದು ಹೊರತು ಬಿಬಿಎಂಪಿಯ ನಿವೇಶನಗಳನ್ನು ಅಲ್ಲ ಎಂದು ಪದ್ಮನಾಭ ರೆಡ್ಡಿ ತಿಳಿಸಿದರು. ಆದರೆ ಪಾಲಿಕೆಯ ಜಾಗವನ್ನು ಬೌರಿಂಗ್ ಕ್ಲಬ್ ಸೇರಿದಂತೆ, ವಿವಿಧ ಸಂಸ್ಥೆಗಳಿಗೆ ಅತ್ಯಂತ ಕಡಿಮೆ ಬಾಡಿಗೆಗೆ, ಗುತ್ತಿಗೆಗೆ ನೀಡಲಾಗಿದೆ ಎಂದರು.
ಇದಕ್ಕೆ ಉತ್ತರಿಸಿದ ಆಯುಕ್ತರು, ಕೋವಿಡ್ ಸಮಯದಲ್ಲಿ ಆರ್ಥಿಕ ಚಟುವಟಿಕೆ ಕಡಿಮೆ ಆದಾಗ, ಸಂಪನ್ಮೂಲ ಕ್ರೂಡೀಕರಣಕ್ಕೆ ಹಲವು ಸಭೆ ನಡೆಸಲಾಗಿದೆ. ರಾಜ್ಯ ಸರ್ಕಾರದ ವತಿಯಿಂದ 115 ಸಂಘ ಸಂಸ್ಥೆಗಳಿಗೆ 921 ಎಕರೆ ಜಮೀನನ್ನು ಗುತ್ತಿಗೆಗೆ ನೀಡಲಾಗಿದೆ. ಇದರಿಂದ 20-30 ವರ್ಷಕ್ಕೆ ಅತ್ಯಂತ ಕಡಿಮೆ ಆದಾಯ ಬರುತ್ತಿದೆ. ಒಂದು ಎಕರೆ ಜಾಗವನ್ನು ಕೇವಲ ಸಾವಿರ ರುಪಾಯಿ ಲೀಸ್ ನೀಡಲಾಗಿದೆ. ಹೀಗಾಗಿ ಈ ಸಮಯದಲ್ಲಿ ಯಾರಾದ್ರು ಕೊಂಡುಕೊಳ್ಳಲು ಮುಂದೆ ಬಂದರೆ, ಮಾರಾಟ ಮಾಡಲು ಸರ್ಕಾರ ಸೂಚಿಸಿತ್ತು. ಈ ಪ್ರಕಾರ ಕಂದಾಯ ಇಲಾಖೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಯಿತು. ಆದ್ರೆ ಪಾಲಿಕೆ ವ್ಯಾಪ್ತಿಯಲ್ಲಿರುವ ಸಂಘ ಸಂಸ್ಥೆ, ಶಾಲೆಗಳನ್ನು ಈ ನಿರ್ಧಾರದಿಂದ ಹೊರಗಿಡಲು ಪಾಲಿಕೆಯಿಂದ ನಿರ್ಣಯ ಮಾಡಲಾಗುವುದು ಎಂದು ಆಯುಕ್ತರು ಉತ್ತರಿಸಿದರು. ಎರಡುವರೇ ಎಕರೆಗೆ ಕೇವಲ ಎರಡುವರೇ ರೂಪಾಯಿಗೆ ಕ್ಲಾರೆನ್ಸ್ ಶಾಲೆಗೆ ಗ್ರೌಂಡ್ ಲೀಸ್ ನೀಡಲಾಗಿದೆ. ಆದರೆ ಸಾರ್ವಜನಿಕರಿಗೆ ಇದನ್ನು ಬಳಕೆಗೆ ಬಿಡುತ್ತಿಲ್ಲ, ಲೀಸ್ ಅವಧಿ ಮುಗಿದಿದ್ದು, ವಾಪಸ್ ಪಡೆಯಬೇಕು ಎಂದು ಕಾಕ್ಸ್ ಟೌನ್ ಪಾಲಿಕೆ ಸದಸ್ಯರು ಆಗ್ರಹಿಸಿದರು.