ಕರ್ನಾಟಕ

karnataka

ETV Bharat / state

ಮದ್ಯ ಸೇವಿಸಿ ಪ್ರಯಾಣಿಕರೊಂದಿಗೆ ದುರ್ನಡತೆ: ನಿರ್ವಾಹಕನ ವೇತನ ಕಡಿತ ಕ್ರಮ ಎತ್ತಿ ಹಿಡಿದ ಹೈಕೋರ್ಟ್ - ಕೈಗಾರಿಕಾ ವಿವಾದಗಳ ನ್ಯಾಯಮಂಡಳಿ

ಕುಡಿದು ಬಿಎಂಟಿಸಿ ಬಸ್​​ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ್ದ ನಿರ್ವಾಹಕ ಸಿದ್ಧರಾಜಯ್ಯ ಎಂಬವರ ವೇತನ ಕಡಿತಗೊಳಿಸಿದ್ದ ಬಿಎಂಟಿಸಿ ಕ್ರಮವನ್ನು ಹೈಕೋರ್ಟ್‌ ಮಾನ್ಯ ಮಾಡಿದೆ.

high court
ಹೈಕೋರ್ಟ್​

By ETV Bharat Karnataka Team

Published : Oct 12, 2023, 9:11 PM IST

ಬೆಂಗಳೂರು: ಮದ್ಯಪಾನ ಮಾಡಿ ಪ್ರಯಾಣಿಕರೊಂದಿಗೆ ದುರ್ನಡತೆ ತೋರಿದ್ದ ನಿರ್ವಾಹಕನ ವೇತನ ಕಡಿತ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಕೈಗಾರಿಕಾ ವಿವಾದಗಳ ನ್ಯಾಯಮಂಡಳಿಯ ಆದೇಶ ಪ್ರಶ್ನಿಸಿ ಬಿಎಂಟಿಸಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ಏಕಸದಸ್ಯಪೀಠ, ಬಿಎಂಟಿಸಿ ಕ್ರಮವನ್ನು ಎತ್ತಿ ಹಿಡಿಯಿತು. ಅಲ್ಲದೇ ನಿರ್ವಾಹಕನಿಗೆ ದಂಡದ ರೂಪದಲ್ಲಿ ವೇತನ ಕಡಿತ ಮಾಡಿ ಸಾರಿಗೆ ಸಂಸ್ಥೆ ಹೊರಡಿಸಿದ್ದ ಆದೇಶವನ್ನು ಮಾರ್ಪಾಡುಗೊಳಿಸಿ ಆದೇಶಿಸಿರುವ ಕೈಗಾರಿಕಾ ವಿವಾದಗಳ ನ್ಯಾಯಮಂಡಳಿ ಆದೇಶ ರದ್ದುಪಡಿಸಿತು.

ಸಾರ್ವಜನಿಕ ಸಾರಿಗೆ ನಿಗಮದ ಸಿಬ್ಬಂದಿಯಾಗಿರುವ ನಿರ್ವಾಹಕನ ಜವಾಬ್ದಾರಿ ಬಸ್ ಸೇವೆಯನ್ನು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸುವುದು ಆಗಿದೆ. ಟಿಕೆಟ್ ನೀಡುವುದು, ಹಣ ಪಡೆಯುವುದು, ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದು, ಇಳಿಸುವುದು, ಪ್ರಯಾಣಿಕರಿಗೆ ಸಹಕಾರ ಮಾಡುವುದು, ಅವರಿಗೆ ಸೂಕ್ತ ಮಾಹಿತಿ ನೀಡುವುದು ನಿರ್ವಾಹಕರ ಆದ್ಯ ಕೆಲಸ. ಉತ್ತಮ ನಿರ್ವಾಹಕನಾಗಿದ್ದರೆ ಎಲ್ಲರೊಂದಿಗೆ ಮಿತೃತ್ವ ಹೊಂದಿರುತ್ತಾರೆ. ಸಹಾಯಕರಾಗಿರುತ್ತಾರೆ. ಉತ್ತಮ ಸಂವಹನವನ್ನು ಸಹ ಹೊಂದಿರುತ್ತಾರೆ ಎಂದು ನ್ಯಾಯಪೀಠ ಹೇಳಿದೆ.

ಆದರೆ ಈ ಪ್ರಕರಣದಲ್ಲಿ ನಿರ್ವಾಹಕರ ಪ್ರಯಾಣಿಕರಿಗೆ ದುಸ್ವಪ್ನದಂತೆ ವರ್ತಿಸಿದ್ದಾರೆ. ಕೆಲಸದಲ್ಲಿದ್ದಾಗಲೇ ಮದ್ಯ ಸೇವಿಸಿ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿರುವುದು ಸರಿಯಲ್ಲ. ಹಾಗಾಗಿ ಆತನ ಮೂಲ ವೇತನದಲ್ಲಿ ಕಡಿತಗೊಳಿಸಿರುವ ಆದೇಶ ಸರಿಯಾಗಿಯೇ ಇದೆ. ಆದರೆ ಕೈಗಾರಿಕಾ ನ್ಯಾಯಮಂಡಳಿ ತನಗೆ ಅಕಾರವಿಲ್ಲದಿದ್ದರೂ ಸಹ ದಂಡನಾ ಆದೇಶ ಮಾರ್ಪಾಡು ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ:ನಿರ್ವಾಹಕ ಸಿದ್ಧರಾಜಯ್ಯ ಎಂಬವರು 2006 ರ ಜು.11ರಂದು ಬಿಎಂಟಿಸಿ ಬಸ್‌​ನಲ್ಲಿದ್ದ ಪ್ರಯಾಣಿಕರ ಜತೆ ಅನುಚಿತವಾಗಿ ವರ್ತಿಸಿದ್ದರಲ್ಲದೆ, ಮದ್ಯಪಾನ ಸೇವನೆ ಮಾಡಿದ್ದರು ಎಂದು ಪ್ರಯಾಣಿಕರು ದೂರು ಸಲ್ಲಿಸಿದ್ದರು. ಆ ನಂತರ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅವರು ಮದ್ಯಪಾನ ಮಾಡಿದ್ದು ದೃಢಪಟ್ಟಿತ್ತು. ಆ ಕುರಿತು ಡಿಪೋ ಮ್ಯಾನೇಜರ್ ವರದಿಯನ್ನು ಸಲ್ಲಿಸಿದ್ದರು. ವರದಿ ಆಧರಿಸಿ ಅವರ ವಿರುದ್ಧ ಆರೋಪಗಳನ್ನು ನಿಗದಿ ಮಾಡಲಾಗಿತ್ತು. ಶಿಸ್ತು ಪ್ರಾಧಿಕಾರ ತನಿಖಾ ಅಧಿಕಾರಿಯನ್ನು ನೇಮಕ ಮಾಡಿತ್ತು. ತನಿಖಾಧಿಕಾರಿ ಎಲ್ಲ ಅಂಶಗಳನ್ನು ಪರಿಶಿಲಿಸಿ ವಿವರವಾದ ತನಿಖೆ ನಡೆಸಿ ಆರೋಪಗಳು ದೃಢಪಟ್ಟಿವೆ. ಹಾಗಾಗಿ ದಂಡ ವಿಸಲು ಶಿಫಾರಸು ಮಾಡಿದ್ದರು. ಶಿಸ್ತು ಪ್ರಕಾರ ಆ ಶಿಫಾರಸು ಅಂಗೀಕರಿಸಿ ನಿರ್ವಾಹಕನಿಗೆ ದಂಡದ ರೂಪದಲ್ಲಿ ಮೂಲ ವೇತನದಲ್ಲಿ ಕಡಿತಗೊಳಿಸಿ ಆದೇಶ ಹೊರಡಿಸಿತ್ತು.

ಈ ಆದೇಶ ಪ್ರಶ್ನಿಸಿ ಅರ್ಜಿದಾರರು ಕೈಗಾರಿಕಾ ವಿವಾದಗಳ ನ್ಯಾಯಮಂಡಳಿ ಮೊರೆ ಹೋಗಿದ್ದರು. ನ್ಯಾಯಮಂಡಳಿ, ಸಾರಿಗೆ ಸಂಸ್ಥೆ ನಡೆಸಿದ ಆಂತರಿಕ ತನಿಖೆ ನ್ಯಾಯಯುತವಾಗಿ ನಡೆದಿದೆ ಎಂದು ಒಪ್ಪಿದ್ದರೂ ಸಹ ವೇತನ ಕಡಿತ ಆದೇಶವನ್ನು ಮಾರ್ಪಾಡು ಮಾಡಿತ್ತು. ಹಾಗಾಗಿ ಬಿಎಂಟಿಸಿ ಕೈಗಾರಿಕಾ ನ್ಯಾಯಮಂಡಳಿಯ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

ಇದನ್ನೂಓದಿ:ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಜೆ.ಪಿ.ನಡ್ಡಾ ಪ್ರಕರಣಕ್ಕೆ ಹೈಕೋರ್ಟ್ ತಡೆ

ABOUT THE AUTHOR

...view details