ಬೆಂಗಳೂರು: ದುಬಾರಿ ಟೋಲ್ನಿಂದ ಈಗಾಗಲೇ ವಾಹನ ಸವಾರರಿಗೆ ಶಾಕ್ ನೀಡಿರುವ ಬೆಂಗಳೂರು - ಮೈಸೂರು ದಶಪಥ ಎಕ್ಸ್‌ಪ್ರೆಸ್ ಹೈವೇ ಇದೀಗ ಗಾಯದ ಮೇಲೆ ಬರೆ ಎಂಬಂತೆ ಕೆಎಸ್ಆರ್ಟಿಸಿ ಬಸ್ ಪ್ರಯಾಣಿಕರಿಗೂ ಬರೆ ಎಳೆದಿದೆ. ದುಬಾರಿ ಟೋಲ್ ಹಿನ್ನೆಲೆ ಕೆಎಸ್ಆರ್ಟಿಸಿ ತನ್ನ ಟಿಕೆಟ್ ದರವನ್ನು ಹೆಚ್ಚಿಸಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-275 ಬೆಂಗಳೂರು-ಮೈಸೂರು ಮಾರ್ಗದಲ್ಲಿ ಹೊಸದಾಗಿ ನಿರ್ಮಿಸಿರುವ ಎಕ್ಸ್‌ಪ್ರೆಸ್ ಹೈವೇಯ ಮೊದಲನೇ ಹಂತದ ಬೆಂಗಳೂರು - ನಿಡಘಟ್ಟ ಮಧ್ಯದಲ್ಲಿನ ಕಣಿಮಿಣಿಕ ಟೋಲ್ ಮುಖಾಂತರ ಕಾರ್ಯಾಚರಣೆಯಾಗುವ ಬಸ್ಸುಗಳಿಗೆ ಮಂಗಳವಾರದಿಂದ ಟೋಲ್ ಸಂಗ್ರಹಿಸಲು ಪ್ರಾರಂಭಿಸಿದೆ.
ಈ ವೆಚ್ಚವನ್ನು ಸರಿದೂಗಿಸಲು ಎಕ್ಸ್‌ಪ್ರೆಸ್ ಹೈವೇಯ ಮೂಲಕ ಕಾರ್ಯಾಚರಣೆಯಾಗುವ ನಿಗಮದ ಕರ್ನಾಟಕ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಹೆಚ್ಚುವರಿ ಟಿಕೆಟ್ ದರ ವಿಧಿಸಲು ನಿರ್ಧರಿಸಲಾಗಿದೆ. ಅದರಂತೆ ಸಾರಿಗೆ ಬಸ್ಗಳಲ್ಲಿ ಪ್ರತಿ ಪ್ರಯಾಣಿಕರಿಗೆ 15 ರೂ, ರಾಜಹಂಸ ಬಸ್ ಗಳಲ್ಲಿ 18 ರೂ, ಹಾಗೂ ಇತರ ಬಸ್ಗಳು/ಮಲ್ಟಿ ಆಕ್ಸಲ್ ಬಸ್ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಂದ 20 ರೂ. ಅನ್ನು ಬಳಕೆದಾರ ಶುಲ್ಕವನ್ನಾಗಿ ವಸೂಲು ಮಾಡಲು ನಿರ್ಧರಿಸಿದೆ.
ಇದನ್ನೂ ಓದಿ :ಹೊರ ದೇಶದಲ್ಲಿ ಚಿಕ್ಕಮಕ್ಕಳಂತೆ ದೇಶದ ವಿರುದ್ಧ ಹೇಳಿಕೆ ನೀಡುವುದು ಸರಿಯಲ್ಲ: ಬಿಎಸ್ವೈ
ಎಲ್ಲ ಟೋಲ್ ರಸ್ತೆಗಳಲ್ಲಿ ನಿಯಮ ಅನ್ವಯ: ಈ ಬಳಕೆದಾರ ಶುಲ್ಕವು ಸಂಪೂರ್ಣವಾಗಿ ಎಕ್ಸ್‌ಪ್ರೆಸ್ ಹೈವೇ ಮೂಲಕ ಕಾರ್ಯಾಚರಣೆಯಾಗುವ ಬಸ್ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಮಾತ್ರ ಅನ್ವಯವಾಗಲಿದೆ. ಇನ್ನುಳಿದ ಸಾರಿಗೆ ಬಸ್ಗಳಿಗೆ ಇದು ಅನ್ವಯಿಸುವುದಿಲ್ಲ. ಎಲ್ಲ ಟೋಲ್ ರಸ್ತೆಗಳಲ್ಲಿ ಈ ಪದ್ಧತಿಯನ್ನು ಅನುಸರಿಸಲಾಗುತ್ತಿದೆ ಎಂದು ಸಾರಿಗೆ ನಿಗಮ ತಿಳಿಸಿದೆ. ಈಗಾಗಲೇ ದುಬಾರಿ ಟೋಲ್ ಸಂಗ್ರಹಕ್ಕೆ ವಾಹನ ಸವಾರರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ ಕೆಎಸ್ಆರ್ಟಿಸಿ ಬಸ್‍ಗಳ ಟಿಕೆಟ್ ದರವನ್ನು ಹೆಚ್ಚಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಟೋಲ್ ಬಾರವನ್ನು ಕೆಎಸ್ಆರ್ಟಿಸಿ ಪ್ರಯಾಣಿಕರ ಮೇಲೆ ಹಾಕಿರುವುದು ಇನ್ನಷ್ಟು ಆಕ್ರೋಶಕ್ಕೆ ಕಾರಣವಾಗುವ ಸಾಧ್ಯತೆ ಇದೆ.