ಬೆಂಗಳೂರು: ಬಮೂಲ್ ವ್ಯಾಪ್ತಿಯ ಹಾಲು ಉತ್ಪಾದಕರಿಗೆ ಹಾಲು ಒಕ್ಕೂಟ ಭರ್ಜರಿ ಗಿಫ್ಟ್ ನೀಡಿದೆ. ನಾಳೆಯಿಂದ ರೈತರಿಗೆ ಹೆಚ್ಚುವರಿ ಒಂದು ರೂ. ನೀಡುವುದಾಗಿ ಪ್ರಕಟಿಸಿದೆ.
ಬಮೂಲ್ ನಿಂದ ಸಿಎಂ ಪರಿಹಾರ ನಿಧಿಗೆ 1.16 ಕೋಟಿ ರೂ. ಗಳ ಚೆಕ್ ವಿತರಿಸಲಾಯಿತು. ಗೃಹ ಕಚೇರಿ ಕೃಷ್ಣಾಗೆ ತೆರಳಿದ ಬಮೂಲ್ ನಿಯೋಗ ಹಾಲು ಒಕ್ಕೂಟದ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಚೆಕ್ ನೀಡಿತು.
ಹಾಲು ಉತ್ಪಾದಕರಿಗೆ ಭರ್ಜರಿ ಗಿಫ್ಟ್ ಸುದ್ದಿಗಾರರಿಂದಿಗೆ ಮಾತನಾಡಿದ ಬಮೂಲ್ ನಿರ್ದೇಶಕ ಮಂಜುನಾಥ್, ರೈತರಿಗೆ ನೀಡುತ್ತಿರುವ ಹಾಲಿನ ದರವನ್ನು ಒಂದು ರೂ. ಹೆಚ್ಚಿಸಲು ಬೆಂಗಳೂರು ಹಾಲು ಒಕ್ಕೂಟ ನಿರ್ಧರಿಸಿದೆ. ಪ್ರಸಕ್ತ ರೈತರಿಗೆ ಪ್ರತಿ ಲೀಟರ್ಗೆ 25 ರೂ. ಹಾಗೂ ಸರ್ಕಾರದ 6 ರೂ. ಪ್ರೋತ್ಸಾಹ ಧನ ಸೇರಿ 31 ರೂ. ನೀಡಲಾಗುತ್ತಿತ್ತು. ಪಶು ಆಹಾರದ ದರ ಹೆಚ್ಚಾದ ಹಿನ್ನೆಲೆಯಲ್ಲಿ ಹಾಲು ಉತ್ಪಾದಕರಿಗೆ ನೀಡುತ್ತಿರುವ ದರವನ್ನು ಪ್ರತಿ ಲೀಟರ್ ಗೆ 25 ರಿಂದ 26ರೂ.ಗಳಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದರು.
ರೈತರಿಗೆ ನೀಡುವ ಹೆಚ್ಚುವರಿ ಹಣ ಒಕ್ಕೂಟ ಲಾಭಾಂಶದ ಹಣದಲ್ಲಿ ನೀಡಲಾಗುತ್ತದೆ ಗ್ರಾಹಕರಿಗೆ ವಿತರಿಸಲಾಗುತ್ತಿರುವ ಹಾಲಿನ ದರದಲ್ಲಿ ಯಾವುದೇ ವ್ಯತ್ಯಾಸ ಮಾಡುವುದಿಲ್ಲ ಎಂದು ಅವರು ತಿಳಿಸಿದರು.
ಬೆಂಗಳೂರು ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಬರುವ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯ 12 ತಾಲೂಕುಗಳ ಹಾಲು ಉತ್ಪಾದಕ ರೈತರಿಗೆ ಈ ಕೊಡುಗೆ ಅನ್ವಯವಾಗಲಿದೆ.