ಕರ್ನಾಟಕ

karnataka

ETV Bharat / state

ನವೆಂಬರ್​​ನಲ್ಲಿ ಸಿಗಲಿದೆ ರಾಜ್ಯದ 60 ಸಾವಿರ ಜನರಿಗೆ ಸರ್ಕಾರದ ಬಂಪರ್ ಕೊಡುಗೆ!? - ಈಟಿವಿ ಭಾರತ ಕನ್ನಡ

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಭೂಮಿಯಲ್ಲಿ ಮನೆ ಕಟ್ಟಿಕೊಂಡ ಮೂವತ್ತು ಸಾವಿರ ಜನರಿಗೆ 94(ಸಿ) ಮತ್ತು 94(ಸಿಸಿ)ಅಡಿ ಸಕ್ರಮಾತಿ ಆದೇಶ ನೀಡಲು ಸರ್ಕಾರ ತಯಾರಿ ನಡೆಸಿದೆ. ಈ ಪೈಕಿ ಬೆಂಗಳೂರಿನ ಹತ್ತು ಸಾವಿರ ಜನರಿಗೆ ಡಿಸೆಂಬರ್ ತಿಂಗಳಲ್ಲಿ ಸಕ್ರಮ ಆದೇಶ ನೀಡಲು ಸರ್ಕಾರ ನಿರ್ಧರಿಸಿದೆ.

bumper-for-people-by-karnataka-government
ನವೆಂಬರ್​​ನಲ್ಲಿ ಸಿಗಲಿದೆ ರಾಜ್ಯದ 60 ಸಾವಿರ ಜನರಿಗೆ ಸರ್ಕಾರದ ಬಂಪರ್ ಕೊಡುಗೆ!?

By

Published : Oct 13, 2022, 10:29 PM IST

ಬೆಂಗಳೂರು:ರಾಜ್ಯದ ರೈತರು, ಬಡವರಿಗೆ ಅನುಕೂಲ ಕಲ್ಪಿಸಲು ಹಲವು ಯೋಜನೆಗಳನ್ನು ರೂಪಿಸುವ ಮೂಲಕ ಕಂದಾಯ ಇಲಾಖೆ ದಾಪುಗಾಲು ಇಡುತ್ತಿದೆ. ಅದೇ ರೀತಿ ರಾಜ್ಯದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ 60 ಸಾವಿರ ಜನರಿಗೆ ನೆಲೆ ಕಲ್ಪಿಸಿಕೊಟ್ಟು ಊರು, ವಿಳಾಸ ದೊರಕಿಸಿಕೊಡುವ ಕ್ರಾಂತಿಕಾರಿ ಕೆಲಸಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.

ಲಂಬಾಣಿ ತಾಂಡಾ, ಗೊಲ್ಲರಹಟ್ಟಿ ಸೇರಿದಂತೆ ರಾಜ್ಯದ ಅಲೆಮಾರಿ ಜನಾಂಗದ ಜನರಿಗೆ ನವೆಂಬರ್ ತಿಂಗಳ ಅಂತ್ಯದಲ್ಲಿ ಈ ಬಂಪರ್ ಕೊಡುಗೆ ಸಿಗಲಿದೆ. ರಾಜ್ಯದಲ್ಲಿ 3,300 ಲಂಬಾಣಿ ತಾಂಡಾಗಳಿದ್ದು, ಉಳಿದಂತೆ ಗೊಲ್ಲರಹಟ್ಟಿ, ಕುರುಬರ ಹಟ್ಟಿ ಸೇರಿದಂತೆ ಅಲೆಮಾರಿಗಳ 500 ವಾಸ ಸ್ಥಳಗಳಿವೆ.

ಈ ಸ್ಥಳಗಳಿಗೆ ಹೆಸರೂ ಇಲ್ಲ, ಅಲ್ಲಿರುವವರಿಗೆ ವಿಳಾಸವೂ ಇಲ್ಲ. ಹೀಗಾಗಿ, ಅವರಿರುವ ತಾಂಡಾ, ಹಟ್ಟಿಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಲು ಬಹು ಹಿಂದಿನಿಂದ ಬೇಡಿಕೆ ಇತ್ತು. ಆದರೆ, ಹಲವು ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಆದರೆ, ಈಗ ಸರ್ಕಾರ ಇದನ್ನು ಕಾರ್ಯಗತಗೊಳಿಸಲು ಮುಂದಾಗಿದೆ.

ಕ್ರಯಪತ್ರ ವಿತರಣೆ ಎಲ್ಲೆಲ್ಲಿ?: ಕ್ರಯಪತ್ರ ನೀಡುವ ಕಾರ್ಯಕ್ರಮವನ್ನು ಕಲಬುರಗಿ ಇಲ್ಲವೇ ಯಾದಗಿರಿ ಜಿಲ್ಲೆಯಲ್ಲಿ ಏರ್ಪಡಿಸಲು ಸರ್ಕಾರ ಉದ್ದೇಶಿಸಿದೆ. ಕಲಬುರಗಿ ಜಿಲ್ಲೆಯ 29 ಸಾವಿರ, ಯಾದಗಿರಿಯಲ್ಲಿ 9 ಸಾವಿರ, ರಾಯಚೂರಿನಲ್ಲಿ 6 ಸಾವಿರ, ಬೀದರ್​​​ನಲ್ಲಿ 3 ಸಾವಿರ ಜನರಿದ್ದು, ಈ ಜಿಲ್ಲೆಗಳ ಜೊತೆ ಬಿಜಾಪುರ ಜಿಲ್ಲೆಯಲ್ಲಿರುವವರೂ ಸೇರಿದಂತೆ ಒಟ್ಟು 60 ಸಾವಿರ ಮಂದಿಗೆ ಕ್ರಯಪತ್ರ ನೀಡಲಾಗುತ್ತದೆ.

ಇದುವರೆಗೆ ಇವರಿರುವ ಜಾಗಗಳಿಗೆ ಹೆಸರಿರಲಿಲ್ಲ. ಹೀಗಾಗಿ ಅವರಿಗೆ ವಿಳಾಸವೂ ಇರಲಿಲ್ಲ. ಪರಿಣಾಮವಾಗಿ ಅವರಿಗೆ ಸರ್ಕಾರದ ಸವಲತ್ತುಗಳೂ ದೊರೆಯುತ್ತಿರಲಿಲ್ಲ. ಆದರೆ, ಈಗಿನ ತೀರ್ಮಾನದಿಂದ ಅವರಿರುವ ಪ್ರದೇಶಗಳಿಗೆ ಹೆಸರೂ ಸಿಗುತ್ತದೆ, ಜನರಿಗೆ ವಿಳಾಸವೂ ಸಿಗುತ್ತದೆ.

ಎರಡನೇ ಹಂತದಲ್ಲಿ ದಾವಣಗೆರೆ ಜಿಲ್ಲೆ, ಶಿವಮೊಗ್ಗ ಜಿಲ್ಲೆಯ ಹಲವು ಪ್ರದೇಶಗಳಲ್ಲಿರುವ ಲಂಬಾಣಿ ತಾಂಡಾಗಳು, ಗೊಲ್ಲರ ಹಟ್ಟಿಗಳ ಜನರಿಗೆ ಕ್ರಯಪತ್ರ ನೀಡಲು ಸರ್ಕಾರದ ಯೋಜನೆ ಹಾಕಿಕೊಂಡಿದೆ. ಈಗ ಬಹುತೇಕ ಕಡೆ ಇವರು ಸರ್ಕಾರಿ ಭೂಮಿಯಲ್ಲಿ ಸೂರು ಕಟ್ಟಿಕೊಂಡು ವಾಸಿಸುತ್ತಿದ್ದು, ಒಂದಷ್ಟು ಪ್ರಮಾಣದಲ್ಲಿ ಖಾಸಗಿ ಭೂಮಿಯಲ್ಲೂ ಮನೆ ಕಟ್ಟಿಕೊಂಡಿದ್ದಾರೆ. ಹೀಗಾಗಿ ಸರ್ಕಾರಿ ಭೂಮಿಯಲ್ಲಿ ಕೊಡುವುದರ ಜೊತೆ ಮಾರ್ಗಸೂಚಿ ಮೌಲ್ಯ ನೀಡಿ ಖಾಸಗಿಯವರಿಂದ ಭೂಮಿ ಖರೀದಿಸಿ ಅವರಿಗೆ ನೀಡಲು ಉದ್ದೇಶಿಸಲಾಗಿದೆ.

ಸಕ್ರಮ ಆದೇಶ: ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಭೂಮಿಯಲ್ಲಿ ಮನೆ ಕಟ್ಟಿಕೊಂಡ ಮೂವತ್ತು ಸಾವಿರ ಜನರಿಗೆ 94(ಸಿ) ಮತ್ತು 94(ಸಿಸಿ)ಅಡಿ ಸಕ್ರಮಾತಿ ಆದೇಶ ನೀಡಲು ಸರ್ಕಾರ ತಯಾರಿ ನಡೆಸಿದ್ದು, ಈ ಪೈಕಿ ಬೆಂಗಳೂರಿನ ಹತ್ತು ಸಾವಿರ ಜನರಿಗೆ ಡಿಸೆಂಬರ್ ತಿಂಗಳಲ್ಲಿ ಸಕ್ರಮಾತಿ ಆದೇಶ ನೀಡಲು ಸರ್ಕಾರ ನಿರ್ಧರಿಸಿದೆ.

ರಾಜ್ಯಾದ್ಯಂತ ಕಂದಾಯ ನಿವೇಶನಗಳ ಭೂ ಪರಿವರ್ತನೆ ಮಾಡಿಕೊಡಲು ಸಮಸ್ಯೆ ಇಲ್ಲ ಎಂದು ಕಾನೂನು ಇಲಾಖೆ ತಿಳಿಸಿದ್ದು, ಮುಖ್ಯಮಂತ್ರಿಗಳು ಕೂಡಾ ಇದಕ್ಕೆ ಒಪ್ಪಿಗೆ ನೀಡಿದ್ದಾರೆ. ಆ ಮೂಲಕ ರಾಜ್ಯದ ಲಕ್ಷಾಂತರ ಮಂದಿಗೆ ಅನುಕೂಲವಾಗಲಿದೆ. ರೆವಿನ್ಯೂ ನಿವೇಶನಗಳ ಭೂ ಪರಿವರ್ತನೆಗೆ ಅವಕಾಶ ನೀಡಿದರೆ, ಅಲ್ಲಿ ಮನೆ ಕಟ್ಟಿಕೊಂಡವರಿಗೆ, ಮನೆ ಕಟ್ಟಿಕೊಳ್ಳಲು ಬಯಸುವವರಿಗೆ ಸಾಲದ ಸೌಲಭ್ಯ ದೊರೆಯುತ್ತದೆ.

ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಕಾಫಿ ತೋಟಗಳ ಭೂಮಿ ಒತ್ತುವರಿ ಮಾಡಿದವರಿಗೇ ಉಳುಮೆ ಮಾಡಲು ಅವಕಾಶ ನೀಡಿದಂತೆ ಕಾರವಾರ, ಉಡುಪಿ ಜಿಲ್ಲೆಗಳಲ್ಲಿ ಗೇರು ಬೆಳೆ ಬೆಳೆಯುತ್ತಿರುವವರಿಗೂ ಅಂತಹ ಭೂಮಿಯನ್ನು ಗುತ್ತಿಗೆಗೆ ನೀಡಲು ಸರ್ಕಾರ ಸಜ್ಜಾಗಿದೆ.

'ಈ ಪ್ರಮಾಣದ ಜನರಿಗೆ ಒಂದೇ ಕಂತಿನಲ್ಲಿ ಕ್ರಯ ಪತ್ರ ದೊರಕಿಸಿಕೊಡುವ ಕೆಲಸ ಯಾವ ಸರ್ಕಾರಗಳಿಂದಲೂ ಆಗಿಲ್ಲ. ಆದರೆ, ಈಗ ಅಂತಹ 60 ಸಾವಿರ ಕುಟುಂಬಗಳಿಗೆ ಒಂದೇ ಕಂತಿನಲ್ಲಿ ಕ್ರಯಪತ್ರ ಒದಗಿಸಿಕೊಡಲು ತೀರ್ಮಾನಿಸಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳ ಜತೆ ಚರ್ಚೆ ಪೂರ್ಣಗೊಳಿಸಿದ್ದು, ಸಂಪೂರ್ಣ ವಿವರ ಪಡೆದು ಅಂತಹ ಜನರಿರುವ ಜಾಗದ ಸರ್ವೇ ಮಾಡಿಸುವುದಲ್ಲದೇ ಸದರಿ ಜಾಗದ ವಿವರ ಪಡೆದು ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಸಿ ಕ್ರಯಪತ್ರ ನೀಡಲಾಗುವುದು' ಎಂದು ಕಂದಾಯ ಇಲಾಖೆ ಸಚಿವ ಆರ್.‌‌ಅಶೋಕ್ ತಿಳಿಸಿದ್ದಾರೆ.

ಇದನ್ನೂ ಓದಿ:ಮೊದಲ ತರಗತಿಗೆ ಮಗು ಪ್ರವೇಶಕ್ಕೆ ಆರು ವರ್ಷ ವಯೋಮಿತಿ ನಿಗದಿ: 2025 - 26 ರಿಂದ ಜಾರಿಗೆ ಚಿಂತನೆ: ನಾಗೇಶ್

ABOUT THE AUTHOR

...view details