ಬೆಂಗಳೂರು :ನಗರದ ರಾಮಮೂರ್ತಿನಗರ ಸಮೀಪದ ಹೊರಮಾವು ಮುಖ್ಯರಸ್ತೆಯ ರೈಲ್ವೆ ಅಂಡರ್ ಪಾಸ್ ಬಳಿ ಹುಕುಂ ಸಿಂಗ್ ಎಂಬಾತ ಮನೆ ನಿರ್ಮಾಣ ಮಾಡಿದ್ದು, ಪಕ್ಕದಲ್ಲಿ ಕುಮರೇಶ್ ಎಂಬಾತ ಹೊಸ ಮನೆ ನಿರ್ಮಾಣ ಮಾಡಲು ಹೋದಾಗ ಹುಕುಂ ಸಿಂಗ್ ಮನೆಯ ಗೋಡೆಗಳು ಬಿರುಕು ಬಿಟ್ಟು ಜನರಲ್ಲಿ ಆತಂಕ ಸೃಷ್ಟಿಯಾಗಿದ್ದು, ನಂತರ ಬಿಬಿಎಂಪಿ ಆ ಕಟ್ಟಡವನ್ನು ತೆರವುಗೊಳಿಸಿದೆ.
ನಿನ್ನೆ ರೈಲ್ವೆ ಅಂಡರ್ ಪಾಸ್ ಬಳಿ ಕುಮರೇಶ್ ಎಂಬಾತ ಮನೆ ಕಟ್ಟಲು ಫೌಂಡೇಶನ್ ತೆಗೆಯಲು ಹೋಗಿದ್ದಾರೆ. ಆ ವೇಳೆ ಹುಕುಂ ಸಿಂಗ್ಗೆ ಸೇರಿದ ಮೂರಂತಸ್ಥಿನ ಕಟ್ಟಡ ಸಂಪೂರ್ಣವಾಗಿ ಬಿರುಕು ಬಿಟ್ಟು ವಾಲಿಕೊಂಡಿದೆ. ಕೂಡಲೇ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದಾರೆ. ನಂತರ ಮನೆಯಲ್ಲಿದ್ದವರನ್ನು ಮತ್ತು ಅಕ್ಕಪಕ್ಕದ ಮನೆಯವರನ್ನ ಮನೆ ಖಾಲಿ ಮಾಡಿಸಿ ರಕ್ಷಣಾ ಕಾರ್ಯಾಚರಣೆ ಮಾಡಿದ್ದಾರೆ.
ಹುಕುಂ ಸಿಂಗ್ ಒಡೆತನದಲ್ಲಿರುವ ಆ ಬಿರುಕು ಬಿಟ್ಟಿರುವ ಕಟ್ಟಡ ಹದಿನಾರು ವರ್ಷಗಳ ಹಿಂದಿನ ಕಟ್ಟಡ ಎನ್ನಲಾಗಿದೆ . ಹುಕುಂ ಸಿಂಗ್ ಕಟ್ಟಡಕ್ಕೆ ಅಡಿಪಾಯ ಹಾಕುವ ಸಮಯದಲ್ಲಿ ಸರಿಯಾಗಿ ಹಾಕದೇ ಇರುವುದು ಈ ಕಟ್ಟಡ ಬಿರುಕು ಬಿಡಲು ಕಾರಣ ಎನ್ನಲಾಗಿದೆ. ಇನ್ನು ಈ ಕಟ್ಟಡವನ್ನು ಬಿಬಿಎಂಬಿ ಅಧಿಕಾರಿಗಳು ಡೆಮಾಲಿಷ್ ಮಾಡಲು ಮುಂದಾಗಿದ್ದು ಸ್ಥಳೀಯರ ಆತಂಕವನ್ನು ಕಡಿಮೆ ಮಾಡಿದ್ದಾರೆ.
ಬೆಳಗ್ಗೆಯಿಂದ ಕಟ್ಟಡವನ್ನು ತೆರವು ಮಾಡಲು ನಾನಾ ಕಸರತ್ತುಗಳನ್ನು ಮಾಡಿ, ಮೊದಲಿಗೆ ಮೂರು ಮತ್ತು ಎರಡನೇ ಅಂತಸ್ಥಿನ ಗೋಡೆಗಳನ್ನು ಕೆಡವಲಾಯಿತು. ನಂತರ ಕಟ್ಟಡಕ್ಕೆ ರೂಪ್ ಅಳವಡಿಸಿ ಹಿಟಾಚಿ ಯಂತ್ರದಿಂದ ಎಳೆದು ಎರಡು ಅಂತಸ್ಥುಗಳನ್ನು ತೆರವುಗೊಳಿಸಲಾಗಿದೆ.