ಬೆಂಗಳೂರು: ಬಜೆಟ್ ಅಧಿವೇಶನವನ್ನು ನಾಳೆ ಸಂಜೆವರೆಗೂ ನಡೆಸಿ ನಂತರ ಅನಿರ್ದಿಷ್ಟಾವಧಿವರೆಗೆ ಮುಂದೂಡಿಕೆ ಮಾಡುವ ನಿರ್ಧಾರವನ್ನು ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಕೈಗೊಳ್ಳಲಾಯಿತು. ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಕಲಾಪ ಸಲಹಾ ಸಮಿತಿ ಸಭೆ ನಡೆಯಿತು.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಮೂರೂ ಪಕ್ಷಗಳ ಸದಸ್ಯರು ಉಪಸ್ಥಿತರಿದ್ದರು. ಕೊರೊನಾ ಮುಂಜಾಗ್ರತಾ ಕ್ರಮವಾಗಿ ಲೋಕಸಭಾ ಕಲಾಪ ಮುಂದೂಡಿಕೆ ಮಾಡಲಾಗಿದೆ. ಅದರಂತೆ ವಿಧಾನಸಭಾ ಕಲಾಪ ಮುಂದೂಡಿಕೆ ಮಾಡುವ ಕುರಿತು ಚರ್ಚೆ ನಡೆಸಲಾಯಿತು. ಹಣಕಾಸು ವಿಧೇಯಕಕ್ಕೆ ನಾಳೆ ಒಪ್ಪಿಗೆ ಪಡೆದು ಕಲಾಪ ಮುಂದೂಡುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಯಿತು.
ಸಭೆ ನಂತರ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸ್ಪೀಕರ್ ಮಾರ್ಚ್ 26-27ಕ್ಕೆ ಅಧಿವೇಶನ ಮುಕ್ತಾಯದ ಪ್ರಸ್ತಾಪ ಮಾಡಿದರು. ಆದರೆ ಕೊರೊನಾ ಗಂಭೀರತೆಯ ಕಾರಣಕ್ಕೆ ನಾಳೆಗೆ ಅಧಿವೇಶನ ಮುಗಿಸಲು ನಿರ್ಧರಿಸಲಾಗಿದೆ. ನಾವು ಇಂದೇ ಬಜೆಟ್ ಬಿಲ್ ಪಾಸ್ ಮಾಡಿಕೊಡಲು ಸಿದ್ಧವಿದ್ದೇವೆ ಎಂದರು. ಅವರೇ ನಾಳೆ ಮಂಡಿಸುವ ಪ್ರಸ್ತಾಪ ಮಾಡಿದರು. ಅದಕ್ಕೆ ನಾವು ಸಮ್ಮತಿಸಿದ್ದೇವೆ. ಇಂದೇ ಪಾಸ್ ಮಾಡಿಕೊಡಲಿದ್ದೇವೆ ಎಂದರೂ ಅವರು ಸಿದ್ಧವಿಲ್ಲ. ನಾಳೆ ಮಧ್ಯಾಹ್ನ ಮುಂದೂಡುವ ಸಲಹೆಯನ್ನು ಆಡಳಿತ ಪಕ್ಷದವರು ಕೊಟ್ಟಿದ್ದಾರೆ. ನಾವು ಫೈನಾನ್ಸ್ ಬಿಲ್ ಮಾತ್ರ ಪಾಸ್ ಮಾಡುತ್ತೇವೆ, ಬೇರೆ ಬಿಲ್ ಪಾಸ್ ಮಾಡುವುದಿಲ್ಲ ಎಂದಿದ್ದೇವೆ.
ನಾಳೆ ಮಧ್ಯಾಹ್ನದ ವೇಳೆಗೆ ಕಲಾಪ ಮುಗಿಯಬೇಕು. ಕೊರೊನಾ ಚರ್ಚೆಗೆ ಅವಕಾಶ ಕೇಳಿದ್ದೇವೆ. ಇಂದೇ ಕೊಡುವ ನಿರೀಕ್ಷೆ ಇದೆ. ಸ್ಪೀಕರ್ ತಮ್ಮ ಅಧಿಕಾರ ಬಳಸಿಕೊಂಡು ಕೊಡಬಹುದು, ಅವರಿಗೆ ಆ ಅಧಿಕಾರ ಇದೆ ಎಂದರು.
ಜೆಡಿಎಸ್ ನಾಯಕ ಬಂಡೆಪ್ಪ ಕಾಶೆಂಪೂರ್ ಮಾತನಾಡಿ, ಇಂದು ಕಲಾಪ ಮುಗಿಸಲು ನಾವೆ ಆಗ್ರಹ ಮಾಡಿದ್ದೆವು. ಆದರೆ ಇಂದು ಮತ್ತು ನಾಳೆ ಚರ್ಚೆ ನಡೆಸಿ, ನಾಳೆಗೆ ಮುಗಿಸುವ ಕುರಿತ ಸಿಎಂ ಮನವಿಯನ್ನು ನಾವು ಒಪ್ಪಿದ್ದೇವೆ. ನಾಳೆ ಮಧ್ಯಾಹ್ನ ಫೈನಾನ್ಸ್ ಬಿಲ್ ನಂತರ ಕಲಾಪ ಮುಂದೂಡಿಕೆಯಾಗಲಿದೆ ಎಂದರು.