ಬೆಂಗಳೂರು: ಕೋವಿಡ್ ಸಂಕಷ್ಟದ ಸ್ಥಿತಿಯಲ್ಲೂ ರಾಜ್ಯ ಸರ್ಕಾರ ಆರ್ಥಿಕ ಅಭಿವೃದ್ದಿ ಸಾಧಿಸಲು ಶಕ್ತಿಮೀರಿ ಪ್ರಯತ್ನ ನಡೆಸುತ್ತಿದೆ. ಯಾವುದೇ ರೀತಿಯ ಕೊರತೆ ಆಗಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ತಿಳಿಸಿದರು.
2022-23ನೇ ಸಾಲಿನ ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿಗಳು ಉತ್ತರ ನೀಡುತ್ತಾ, ಕಳೆದ ಎರಡು ವರ್ಷಗಳಿಂದ ನಮಗೆ ಕೋವಿಡ್ ಬಂದಿದ್ದರಿಂದ ನಿರೀಕ್ಷಿತ ಮಟ್ಟದಲ್ಲಿ ಆರ್ಥಿಕ ಅಭಿವೃದ್ದಿ ಸಾಧಿಸಲು ಸಾಧ್ಯವಾಗಲಿಲ್ಲ. ಈ ಬಾರಿ ನಾವು ಶೇ. 9.5ರಷ್ಟು ಆರ್ಥಿಕಾಭಿವೃದ್ದಿ ಸಾಧಿಸುವ ಗುರಿ ಇದೆ. ಖಂಡಿತವಾಗಿಯೂ ಇದನ್ನು ಸಾಧಿಸುತ್ತೇವೆ ಎಂಬ ವಿಶ್ವಾಸವಿದೆ ಎಂದರು.
ಇದೇ ವೇಳೆ, ಬಜೆಟ್ ಮೇಲೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಆರ್.ವಿ.ದೇಶಪಾಂಡೆ, ರಾಮಲಿಂಗಾರೆಡ್ಡಿ, ಎಂ.ಬಿ.ಪಾಟೀಲ್ ಸೇರಿದಂತೆ 19 ಶಾಸಕರು 23 ಗಂಟೆ 39 ನಿಮಿಷಗಳ ಕಾಲ ಮಾತನಾಡಿ ತಮ್ಮ ಅಭಿಪ್ರಾಯ, ಅನಿಸಿಕೆ ಪ್ರಸ್ತಾಪಿಸಿದ್ದಾರೆ. ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇವೆ ಎಂದು ಹೇಳಿದರು.
ಹಾಲು ಉತ್ಪಾದನಾ ಬ್ಯಾಂಕ್:ಹಾಲು ಉತ್ಪಾದನೆ ಒಂದು ಪ್ರಮುಖ ಚಟುವಟಿಕೆಯಾಗಿದ್ದು, ರೈತರಿಗೆ ಸಾಕಷ್ಟು ವರಮಾನ ತಂದುಕೊಡಲಿದೆ. ತಿಂಗಳಿಗೆ 20 ಸಾವಿರ ಕೋಟಿ ವಹಿವಾಟು ನಡೆಯುತ್ತಿದೆ. ಆರ್ಥಿಕ ಅಭಿವೃದ್ದಿಗೆ ಮತ್ತು ಸ್ವಾವಲಂಬನೆ ಸಾಧಿಸಲು ಹಾಲು ಉತ್ಪಾದನೆಗಾಗಿಯೇ ಸರ್ಕಾರ ಹಾಲು ಉತ್ಪಾದಕ ಬ್ಯಾಂಕ್ ಸ್ಥಾಪನೆ ಮಾಡಲಿದೆ. ಇದಕ್ಕಾಗಿ ಸರ್ಕಾರ 100 ಕೋಟಿ ರೂ. ಅನುದಾನವನ್ನು ನೀಡಲಿದೆ.
ಹಿಂದುಳಿದ ತಾಲೂಕುಗಳಿಗೆ ಅನುದಾನ:ರಾಜ್ಯದದ 93 ತಾಲ್ಲೂಕುಗಳು ಶಿಕ್ಷಣದಲ್ಲಿ ಹಿಂದುಳಿದಿವೆ. 102 ತಾಲ್ಲೂಕುಗಳಲ್ಲಿ ಅಪೌಷ್ಟಿಕತೆ, 100 ತಾಲ್ಲೂಕುಗಳಲ್ಲಿ ಸರಾಸರಿ ಆರೋಗ್ಯ ಕಡಿಮೆಯಿದೆ. ಆರೋಗ್ಯ ಶಿಕ್ಷಣ, ಪೌಷ್ಟಿಕ ಆಹಾರ ಎಲ್ಲರಿಗೂ ಸಿಗಬೇಕು. ಹೀಗಾಗಿ 3 ಸಾವಿರ ಕೋಟಿ ರೂ. ವೆಚ್ಚದಲ್ಲಿ ಅಪೇಕ್ಷಿತ ತಾಲೂಕುಗಳನ್ನು ಅಭಿವೃದ್ದಿಪಡಿಸಲಾಗುವುದು ಎಂದು ಹೇಳಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ರಾಜ್ಯದ 5 ನಗರಗಳಲ್ಲಿ ವಸತಿ ಸಮುಚ್ಚಯವನ್ನು ಜಾರಿ ಮಾಡಲಾಗುವುದು. ಕರ್ನಾಟಕ ದೇಶದಲ್ಲೇ ಅತ್ಯಂತ ಪ್ರಗತಿಪರ ರಾಜ್ಯವಾಗಿದೆ ಎಂದರು.
ಐಐಟಿ ಮಾದರಿ:ಇನ್ನು ಮುಂದೆ ಎನ್‍ಐಟಿ, ಐಐಟಿ ಮಾದರಿಯಲ್ಲಿ ರಾಜ್ಯದಲ್ಲೂ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು 6 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಕೇಂದ್ರ ಸರ್ಕಾರದಲ್ಲಿರುವಂತೆ ಐಐಟಿ, ಎನ್‍ಐಟಿ ಮಾದರಿಯಲ್ಲಿ ಕೆಐಟಿಯನ್ನು ಪ್ರಾರಂಭಿಸುವುದಾಗಿ ಸಿಎಂ ಹೇಳಿದರು.
ಏಳು ವಿವಿಗಳ ಸ್ಥಾಪನೆ: ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳಲ್ಲಿ 7 ವಿವಿಗಳ ಸ್ಥಾಪನೆ ಮಾಡಲಾಗುವುದು. ಗ್ರಾಮೀಣ ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಡಿಜಿಟಲ್ ವ್ಯವಸ್ಥೆ ಹಾಗೂ ಇದರ ಸಂಪೂರ್ಣ ಮಾಹಿತಿಯನ್ನು ಒದಗಿಸಲು 5 ಕೋಟಿ ಇದಕ್ಕಾಗಿ ನೀಡುವುದಾಗಿ ಘೋಷಣೆ ಮಾಡಿದರು.
ಬೆಂಗಳೂರು ಅಭಿವೃದ್ಧಿಗೆ ಆರು ಸಾವಿರ ಕೋಟಿ: ನಗರೋತ್ಥಾನ ಯೋಜನೆಯಡಿ ಬೆಂಗಳೂರು ಅಭಿವೃದ್ಧಿಗೆ 6 ಸಾವಿರ ಕೋಟಿ ರೂ. ಮಂಜೂರು ಮಾಡಲಾಗಿದೆ. ನಗರೋತ್ಥಾನ ಯೋಜನೆಯಡಿ ಕ್ರಿಯಾ ಯೋಜನೆ ರೂಪಿಸಲಾಗಿದೆ. ಬಜೆಟ್ ಪೂರ್ವದಲ್ಲಿಯೇ ಅಮೃತ ಯೋಜನೆಯಡಿ ಹಲವು ಯೋಜನೆಗಳನ್ನು ಘೋಷಿಸಿದ್ದು, ಅವು ಪ್ರಗತಿಯಲ್ಲಿವೆ.
ಗ್ರಾಮ ಒನ್ ಯೋಜನೆ ಎಲ್ಲಾ ಜಿಲ್ಲೆಗಳಿಗೂ ವಿಸ್ತರಣೆ: ಗ್ರಾಮ ಪಂಚಾಯತಿ ಮಟ್ಟದಲ್ಲಿ ನಾಗರಿಕರ ಸೇವೆಗಳನ್ನು ಒದಗಿಸಿ ದಾಖಲಾತಿಗಳನ್ನು ನೀಡುವುದು ಮತ್ತು ಭ್ರಷ್ಟಾಚಾರ ಹಾಗೂ ಅಲೆದಾಟ ತಪ್ಪಿಸುವ ಉದ್ದೇಶದಿಂದ ಗ್ರಾಮ ಒನ್ ಯೋಜನೆ ಆರಂಭಿಸಿದ್ದು, ಈ ತಿಂಗಳ ಅಂತ್ಯಕ್ಕೆ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು.
ಕಳೆದ ಆಗಸ್ಟ್ ನಲ್ಲೇ ಅಮೃತ ಯೋಜನೆ ಘೋಷಣೆ ಮಾಡಿದ್ದು, 750 ಸರ್ಕಾರಿ ಶಾಲೆಗಳಿಗೆ 75 ಕೋಟಿ ರೂ. ಮಂಜೂರು ಮಾಡಲಾಗಿದೆ. 770 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಕ್ರಿಯಾ ಯೋಜನೆ ರೂಪಿಸಲಾಗಿದೆ. 38,460 ಮಂದಿಗೆ ಕೌಶಲ್ಯ ತರಬೇತಿ ಪ್ರಾರಂಭಿಸಲಾಗಿದೆ ಎಂದರು.
ಆರ್ಥಿಕ ಪರಿಸ್ಥಿತಿ ಎಂದರೆ ಕೇವಲ ಹಣವಲ್ಲ, ಒಟ್ಟಾರೆ ದುಡಿಯುವ ಫಲಶೃತಿ, ಬೆಳವಣಿಗೆಯನ್ನು ಅವಲಂಬಿಸಿರುತ್ತದೆ. ಉದ್ಯೋಗ ಸೃಷ್ಟಿ, ಬಡತನ ನಿರ್ಮೂಲನೆ ಎಲ್ಲವೂ ಒಳಗೊಂಡಿರುತ್ತದೆ. ಜನರೇ ಆರ್ಥಿಕತೆಯನ್ನು ಮುನ್ನಡೆಸುತ್ತಾರೆ. ಈ ಹಿನ್ನೆಲೆಯಲ್ಲಿ ಜನ ಕೇಂದ್ರಿತ ಯೋಜನೆ ರೂಪಿಸಿದಾಗ ಮಾತ್ರ ರಾಜ್ಯ ಕಟ್ಟಲು ಸಾಧ್ಯ. ಸಮಯ-ಹಣವನ್ನು ಸರಿಯಾಗಿ ನಿರ್ವಹಿಸಬೇಕು ಎಂದು ಸಿಎಂ ಬೊಮ್ಮಾಯಿ ವಿವರಿಸಿದರು.
ಇದನ್ನೂ ಓದಿ:ಡ್ರೋನ್ ಮೂಲಕ ಜಮೀನುಗಳ ಸರ್ವೇ: ಸಚಿವ ಆರ್. ಅಶೋಕ್