ಬೆಂಗಳೂರು: ಸಂಪುಟ ವಿಸ್ತರಣೆ ಗೊಂದಲಗಳ ನಡುವೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ವಿವಿಧ ಇಲಾಖೆಗಳ ಜೊತೆ 2020-21ನೇ ಸಾಲಿನ ಆಯವ್ಯಯದ ಬಗ್ಗೆ ಪೂರ್ವಭಾವಿ ಚರ್ಚೆ ನಡೆಸಿದರು.
ಬೆಂಗಳೂರಿನ ಶಕ್ತಿ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ಆರಂಭವಾದ ಆಯವ್ಯಯ ಪೂರ್ವಭಾವಿ ಚರ್ಚೆಯಲ್ಲಿ ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ವೈದ್ಯಕೀಯ ಶಿಕ್ಷಣ, ಕೃಷಿ, ಸಾರಿಗೆ ಇಲಾಖೆಗಳ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ಇದೇ ಸಂದರ್ಭ ಇಲಾಖೆಗೆ ಸಂಬಂಧಿಸಿದ ಸಚಿವರು ಉಪಸ್ಥಿತರಿದ್ದರು. ಆಯಾ ಇಲಾಖಾವಾರು ಬೇಡಿಕೆಗಳ ಪಟ್ಟಿ ಹಾಗೂ ಮಾಹಿತಿಯನ್ನು ಸಿಎಂ ಸ್ವೀಕರಿಸಿದರು.
ಸಭೆಯ ನಂತರ ಮಾತನಾಡಿದ ಡಿಸಿಎಂ ಲಕ್ಷ್ಮಣ್ ಸವದಿ, ಸಾರಿಗೆ ಮತ್ತು ಕೃಷಿ ಇಲಾಖೆ ವಿಚಾರವಾಗಿ ಸುದೀರ್ಘ ಚರ್ಚೆ ನಡೆಸಲಾಗಿದೆ. ಸಾರಿಗೆ ಇಲಾಖೆಗೆ ಹೊಸ ಬಸ್ಗಳನ್ನು ಖರೀದಿಸಲು ಬಜೆಟ್ಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ನಾಲ್ಕು ವಿಭಾಗಗಳಿಗೆ ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸಲು ಚಿಂತನೆ ನಡೆಸಲಾಗಿದೆ. ಗ್ರಾಮೀಣ ಭಾಗಗಳಿಗೆ ಸಂಪರ್ಕ ಕಲ್ಪಿಸಲು ಹೊಸ ಬಸ್ ಖರೀದಿಗೆ ತೀರ್ಮಾನಿಸಲಾಗಿದೆ. ಕೇಂದ್ರ ಬಜೆಟ್ನಲ್ಲಿ 16 ಅಂಶಗಳ ಪ್ರಸ್ತಾವನೆ ಸಿದ್ದಪಡಿಸಿದ್ದು ಅದರಂತೆ ನಾವೂ ಚೆರ್ಚೆ ಮಾಡುತ್ತೇವೆ. ಕೇಂದ್ರ ಸರ್ಕಾರಕ್ಕೆ ಪೂರಕವಾದ ಯೋಜನೆಗಳನ್ನು ನಾವೂ ರೂಪಿಸುತ್ತೇವೆ. 14 ಜಿಲ್ಲೆಗಳಲ್ಲಿ ಬರ ಇದೆ. ಹಿಂದೆ ಅನೇಕ ಸರ್ಕಾರಗಳು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ನರೇಗಾ, ಕುಡಿಯುವ ನೀರು, ಮೂಲಸೌಕರ್ಯ ಯೋಜನೆ ಮಾಡುತ್ತಿದ್ದೇವೆ ಎಂದರು. ಇದೇ ವೇಳೆ ಗುರುವಾರದ ಒಳಗಾಗಿ ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸುತ್ತೇನೆ ಎಂದು ವಿವರಿಸಿದರು.