ಕರ್ನಾಟಕ

karnataka

ETV Bharat / state

'ಹುಟ್ಟುವ ಮಗುವಿಗೂ ಋಣಭಾರ ಹೊರಿಸಿದ ಬೂಸಾ ಬಜೆಟ್.. ದುಡಿಯೋ ರೈತನಿಗೆ ಹಗ್ಗವೇ ಗತಿ'

ಉದ್ಯೋಗ ಸೃಷ್ಟಿಗೆ ಸಾಕಷ್ಟು ಅನುದಾನ ನೀಡಿದೆ, ನಮ್ಮ ರಾಜ್ಯಕ್ಕೆ ದೊರೆತಿರುವ ಎಂಜಲು ಕಾಸು ಎಂದರೆ ಮೆಟ್ರೋ ವಿಸ್ತರಣೆಗೆ 14 ಸಾವಿರ ಕೋಟಿ ಮಾತ್ರ. ನಮ್ಮ 26 ಜನ ಬಿಜೆಪಿ ಎಂಪಿಗಳು ಬಜೆಟ್ ಪ್ರತಿ ಹೊರಲು ಲಾಯಕ್ಕಾದವರು, ಗೊಡ್ಡು ದನಗಳು..

ಆಮ್ ಆದ್ಮಿ ಪಕ್ಷದಿಂದ ಪ್ರತಿಭಟನೆ
ಆಮ್ ಆದ್ಮಿ ಪಕ್ಷದಿಂದ ಪ್ರತಿಭಟನೆ

By

Published : Feb 2, 2021, 3:32 PM IST

ಬೆಂಗಳೂರು :ಕೇಂದ್ರ ಸರ್ಕಾರದ ಜನವಿರೋಧಿ ಬಜೆಟ್ ಹಾಗೂ ಪೆಟ್ರೋಲ್ ಮತ್ತು ಡೀಸೆಲ್​​ ಬೆಲೆ ಏರಿಕೆ ಖಂಡಿಸಿ ಆಮ್ ಆದ್ಮಿ ಪಕ್ಷದಿಂದ ನಗರದ ಮೌರ್ಯ ವೃತ್ತದಲ್ಲಿ ಬೇಳೆಕಾಳು,‌ ಬ್ರೆಡ್, ಜಾಮ್, ಬೆಣ್ಣೆ ಮಾರುವ ಮೂಲಕ ವಿನೂತನವಾಗಿ ಪ್ರತಿಭಟಿಸಲಾಯಿತು.

ಪಕ್ಷದ ಬೆಂಗಳೂರು ನಗರ ಘಟಕದ ಅಧ್ಯಕ್ಷ ಮೋಹನ್ ದಾಸರಿ ಮಾತನಾಡಿ, ವಿತ್ತೀಯ ಕೊರತೆ ಹೊಂದಿರುವ, ನವಜಾತ ಶಿಶುವಿನ ತಲೆಗೂ ಋಣಭಾರ ಹೊರಿಸುವ, ಜನಸಾಮಾನ್ಯರ ಮೇಲೆ ಕೃಷಿಕರ ಹೆಸರಿನಲ್ಲಿ ಬೇಳೆಕಾಳುಗಳ, ಕಣ್ಣಿಗೆ ಕಂಡ ಎಲ್ಲಾ ವಸ್ತುಗಳ ಮೇಲೆ ಸೆಸ್ ಭಾರ ಹೇರಿದ ನಿರ್ಮಲಾ ಸೀತರಾಮನ್ ಅವರ 'ಸಾಲ'ದ ಬಜೆಟ್ ಇದಾಗಿದೆ ಎಂದರು.

ಆರೋಗ್ಯ ಕ್ಷೇತ್ರಕ್ಕೆ ₹73, 932 ಕೋಟಿ ಹಂಚಿಕೆ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ ಇದು ಹೆಚ್ಚಿನ ಮೊತ್ತ ಎನಿಸಿದ್ರೂ, ಕೊರೊನಾ ವ್ಯಾಕ್ಸಿನ್‌ಗೆಂದು ತೆಗೆದಿರಿಸಿರುವ ₹35 ಸಾವಿರ ಕೋಟಿ ಕಳೆದ್ರೆ ಏನೇನೂ ಉಳಿಯುವುದಿಲ್ಲ.

ಕೊರೊನಾ ಸಂದರ್ಭದಲ್ಲಿ ನಮ್ಮ ಕೆಟ್ಟ ಆರೋಗ್ಯ ವ್ಯವಸ್ಥೆಯ ಬಗ್ಗೆ ಸರ್ಕಾರಕ್ಕೆ ಅರಿವಾಗಿದ್ದರೆ, ಆರೋಗ್ಯ ಕ್ಷೇತ್ರದ ಕಡೆ ಕೊಂಚವಾದ್ರೂ ಗಮನ ಹರಿಸುತ್ತಿತ್ತು. ಈಗ ರೋಗಗ್ರಸ್ತ ಭಾರತ ನಿರ್ಮಾಣ ಮಾಡುವಂತಿದೆ ಈ ಬಜೆಟ್ ಎಂದರು.

ಸರ್ಕಾರಿ ಜಮೀನುಗಳು, ಆಸ್ತಿ ಪಾಸ್ತಿಗಳ ನೇರ ಮಾರಾಟ ಸೇರಿ ಎಲ್‌ಐಸಿ ಹಾಗೂ ಅತ್ಯಂತ ಅಗತ್ಯ ಮೂಲ ಸೌಕರ್ಯವಾದ ವಿದ್ಯುತ್ ಕ್ಷೇತ್ರವನ್ನು ಖಾಸಗಿಯವರ ಕೈಗೆ ಮುಂದಿನ 5 ವರ್ಷಗಳಲ್ಲಿ ಕೊಡುವುದಕ್ಕೆ ಸರ್ಕಾರ ಹೊರಟಿದೆ. ಸರ್ಕಾರ ₹1,75,000 ಕೋಟಿ ಹೂಡಿಕೆ ಹಿಂತೆಗೆದುಕೊಳ್ಳುವ ಆಲೋಚನೆ ನಡೆಸಿದೆ. ನಮ್ಮ ಪೂರ್ವಜರ ನೆಲವನ್ನು ಕೆಲವಷ್ಟೇ ಖಾಸಗಿಯವರ ಕೈಗೆ ನೀಡಲು ಹೊರಟಿರುವುದು ದುರಾದೃಷ್ಟಕರ ಎಂದರು.

ಓದಿ: ಕೇಂದ್ರ ಸರ್ಕಾರದಿಂದ ಬರಬೇಕಿರುವ ಜಿಎಸ್​ಟಿ ಹಣದಲ್ಲಿ 1,500 ಕೋಟಿ ಕಡಿತ : ಬೊಮ್ಮಾಯಿ

ಪೆಟ್ರೋಲ್, ಡೀಸೆಲ್‌ ಬೆಲೆ ಹೆಚ್ಚಳ ಮಾಡಿದ್ರೆ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗುತ್ತದೆ ಎನ್ನುವ ಕನಿಷ್ಟ ಜ್ಞಾನವಿಲ್ಲವೇ.. ಇಷ್ಟಾದ್ರೂ ಇದು ಹೇಗೆ ಜನಪರ ಬಜೆಟ್ ಎನ್ನುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಿಸಬೇಕು ಎಂದು ಆಗ್ರಹಿಸಿದರು.

ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಘಟಕದ ಅಧ್ಯಕ್ಷ ಮೋಹನ್ ದಾಸರಿ

ಡಬಲ್ ಎಂಜಿನ್ ಸರ್ಕಾರ ಬಂದರೆ ಕರ್ನಾಟಕಕ್ಕೆ ಅನುದಾನಗಳ ಹೊಳೆ ಹರಿಸುವುದಾಗಿ ಬೊಗಳೆ ಬಿಟ್ಟಿದ್ದ ಸರ್ಕಾರ ನಮ್ಮ ರಾಜ್ಯಕ್ಕೆ ಬಿಡಿಗಾಸಿನ ಹಣ ನೀಡಿದೆ. ತಮಿಳುನಾಡು, ಕೇರಳ ರಾಜ್ಯಗಳ ಹೆದ್ದಾರಿ ಅಭಿವೃದ್ಧಿಗೆ ಕೋಟ್ಯಂತರ ಹಣ ಬಿಡುಗಡೆ ಮಾಡಿದೆ.

ಉದ್ಯೋಗ ಸೃಷ್ಟಿಗೆ ಸಾಕಷ್ಟು ಅನುದಾನ ನೀಡಿದೆ, ನಮ್ಮ ರಾಜ್ಯಕ್ಕೆ ದೊರೆತಿರುವ ಎಂಜಲು ಕಾಸು ಎಂದರೆ ಮೆಟ್ರೋ ವಿಸ್ತರಣೆಗೆ 14 ಸಾವಿರ ಕೋಟಿ ಮಾತ್ರ. ನಮ್ಮ 26 ಜನ ಬಿಜೆಪಿ ಎಂಪಿಗಳು ಬಜೆಟ್ ಪ್ರತಿ ಹೊರಲು ಲಾಯಕ್ಕಾದವರು, ಗೊಡ್ಡು ದನಗಳು ಎಂದು ವ್ಯಂಗ್ಯವಾಡಿದರು.

1 ಲಕ್ಷ 42 ಸಾವಿರ ಕೋಟಿ ಇದ್ದ ಕೃಷಿ ಅನುದಾನ, 1 ಲಕ್ಷ 31 ಸಾವಿರ ಕೋಟಿಗೆ ಇಳಿದಿದೆ‌. ಆದರೂ ಕಳೆದ ಬಾರಿಗಿಂತ ಹೆಚ್ಚಿನ ಬೆಂಬಲ‌ ಬೆಲೆಗೆ ಹಣ ನೀಡಿದ್ದೇವೆ ಎಂದು ಬೊಗಳೆ ಬಿಡುತ್ತಿದೆ. ಕಾರ್ಪೊರೇಟ್ ಕೃಷಿ ಕಂಪನಿಗಳಿಗೆ ಉಪಯೋಗವಾಗುವ ರೀತಿ ಅನುಕೂಲಗಳನ್ನು ಮಾಡಿದ್ದು, ಹೊಲದಲ್ಲಿ ದುಡಿಯುವ ರೈತನಿಗೆ ಹಗ್ಗವೇ ಗತಿ ಎನ್ನುವಂತಿದೆ. ಇದೊಂದು ಜನ ವಿರೋಧಿ, ಬೂಸಾ ಬಜೆಟ್ ಎಂದು ಕರೆಯಬಹುದು ಎಂದರು.

ABOUT THE AUTHOR

...view details