ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಪ್ರಸ್ತುತ ಸಾಲಿನ ಬಜೆಟ್, ರಾಜ್ಯದ ಸಮಗ್ರ ಅಭಿವೃದ್ಧಿ ಕಲ್ಪನೆ ಇಲ್ಲದೇ, ತೆರಿಗೆ ಹೊರೆ ಇರುವ ಬಜೆಟ್ ಆಗಿದೆ. 85000 ಕೋಟಿ ಸಾಲ ಮಾಡುತ್ತೇನೆ ಎಂದು ಹೇಳಿದ್ದು, ಈ ಸಾಲದ ಹೊರೆ ರಾಜ್ಯದ ಜನತೆಯ ಮೇಲೆ ಬೀಳುತ್ತದೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಟೀಕಿಸಿದ್ದಾರೆ.
ಬಜೆಟ್ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಅವರು, ಬಜೆಟ್ ಮಂಡಿಸಿದ ಮುಖ್ಯಮಂತ್ರಿಗಳು ತಮ್ಮ ಮೂರು ಗಂಟೆಗಳ ಸುದೀರ್ಘ ಭಾಷಣದಲ್ಲಿ ಕೆಲವು ಸಮಯವನ್ನು ಕೇಂದ್ರ ಬಿಜೆಪಿ ಸರ್ಕಾರ ಮತ್ತು ರಾಜ್ಯದಲ್ಲಿ ಈ ಹಿಂದೆ ಇದ್ದ ಬಿಜೆಪಿ ಸರ್ಕಾರದ ಆರ್ಥಿಕ ನೀತಿಗಳನ್ನು ಅನಗತ್ಯವಾಗಿ ಟೀಕಿಸಲು ಬಳಸಿಕೊಂಡರು.
ಹಿಂದಿನ ನನ್ನ ನೇತೃತ್ವದ ಮತ್ತು ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಾಧಿಸಿದ ಪ್ರಗತಿ ಮತ್ತು ಆರ್ಥಿಕ ಸದೃಢತೆ ಮರೆಮಾಚಿ ಇಲ್ಲದ ವೈಫಲ್ಯ ಎತ್ತಿ ಆಡುವ ಮೂಲಕ ಬಜೆಟ್ ಮಂಡನೆಯ ಪವಿತ್ರ ಸಂದರ್ಭವನ್ನು ಕೀಳು ಮಟ್ಟದ ರಾಜಕೀಯಕ್ಕೆ ಬಳಕೆ ಮಾಡಿಕೊಂಡಿದ್ದು, ಖಂಡನೀಯ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಜಕೀಯ ಭಾಷಣದಂತಿದ್ದ ಬಜೆಟ್ ಮಂಡನೆ: ಪ್ರಥಮ ಸಚಿವ ಸಂಪುಟದಲ್ಲಿಯೇ ಎಲ್ಲ ಗ್ಯಾರೆಂಟಿಗಳನ್ನು ಜಾರಿಗೆ ತರುತ್ತೇವೆ ಎಂದು ಹೇಳಿದ ಕಾಂಗ್ರೆಸ್ ಸರ್ಕಾರ, ಇಂದು ಈ ಬಜೆಟ್ ನಲ್ಲಿ ಈ ಯೋಜನೆಗಳನ್ನು ಜಾರಿಗೆ ತರಲು ಇಡೀ ಆರ್ಥಿಕ ವರ್ಷ ಬೇಕಾಗಬಹುದು ಎಂದು ಅಧಿಕೃತವಾಗಿ ಹೇಳಿದಂತಾಗಿದೆ.
ಅವುಗಳ ಜಾರಿಗೆ ಅಗತ್ಯ ಇರುವ ಸುಮಾರು 52 ಸಾವಿರ ಕೋಟಿ ರೂ.ಗಳನ್ನು ಹೇಗೆ ಹೊಂದಿಸಲಾಗುವುದು ಎಂಬ ಸ್ಪಷ್ಟ ಚಿತ್ರಣವನ್ನು ಅವರು ನೀಡಿಲ್ಲ. ಜನರಿಗೆ ತಮ್ಮ ಸರ್ಕಾರ ಏನು ಮಾಡುತ್ತದೆ ಎಂದು ಹೇಳುವುದಕ್ಕಿಂತ ಮುಖ್ಯವಾಗಿ ಕೇಂದ್ರ ಬಿಜೆಪಿ ಮತ್ತು ಹಿಂದಿನ ರಾಜ್ಯ ಬಿಜೆಪಿ ಸರ್ಕಾರದ ನೀತಿಗಳನ್ನು ವಿರೋಧಿಸುವುದೇ ಅವರ ಮುಖ್ಯ ಉದ್ದೇಶವಾಗಿತ್ತು ಎನ್ನುವುದು ಸ್ಪಷ್ಟವಾಗಿದೆ. ಇಂದಿನ ಬಜೆಟ್ ಮಂಡನೆ ರಾಜಕೀಯ ಭಾಷಣದಂತಿತ್ತು ಎಂದು ದೂರಿದರು.
ತೆರಿಗೆ ಹೆಚ್ಚಳ ಆರ್ಥಿಕ ಸಂಕಷ್ಟ ಎದುರಾಗುವ ಸಾಧ್ಯತೆ: ಗ್ಯಾರಂಟಿ ಯೋಜನೆಗಳ ಜಾರಿಗೆ ಹಲವು ಷರತ್ತುಗಳನ್ನು ವಿಧಿಸಿ ಜನರಿಗೆ ಈಗಾಗಲೇ ಮೋಸ ಮಾಡಿರುವ ಕಾಂಗ್ರೆಸ್ ಸರ್ಕಾರ ಮುಂದಿನ ದಿನಗಳಲ್ಲಿ ತೆರಿಗೆ ಹೆಚ್ಚಳದ ಮೂಲಕ ಜನರಿಗೆ ಬರೆ ಎಳೆಯುವುದು ಖಚಿತವಾಗಿದೆ. ತೆರಿಗೆ ಹೆಚ್ಚಳದ ಹಲವು ಪ್ರಸ್ತಾಪಗಳು ಈ ಬಜೆಟ್ ನಲ್ಲಿ ಇವೆ.ವಿವೇಚನ ಇಲ್ಲದ ಘೋಷಿಸಿದ ಯೋಜನೆಗಳ ಪರಿಣಾಮ ಮುಂದಿನ ದಿನಗಳಲ್ಲಿ ಆರ್ಥಿಕ ಸಂಕಷ್ಟ ಎದುರಾಗುವ ಸಾಧ್ಯತೆ ಇದ್ದು ಅದರ ಸುಳಿವರಿತ ಮುಖ್ಯಂತ್ರಿಗಳು ಕೇಂದ್ರ ಬಿಜೆಪಿ ಸರ್ಕಾರ ಮತ್ತು ಹಿಂದಿನ ರಾಜ್ಯದ ಬಿಜೆಪಿ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಮರೆತು ಆರ್ಥಿಕ ನೀತಿಗಳನ್ನು ಅನಗತ್ಯವಾಗಿ ಟೀಕಿಸಿದ್ದಾರೆ. ಆ ಮೂಲಕ ತಮ್ಮ ವೈಫಲ್ಯ ಮರೆಮಾಚಿಕೊಳ್ಳಲು ಈಗಾಗಲೇ ಸಿದ್ಧತೆ ನಡೆಸಿದ್ದಾರೆ ಎಂದು ಆರೋಪಿಸಿದರು.
ನೀರಾವರಿ ಯೋಜನೆ ಸಂಪೂರ್ಣ ನಿರ್ಲಕ್ಷ್ಯ:ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಅನುದಾನ ಕಡಿಮೆ ಮಾಡಲಾಗಿದೆ. ಆರೋಗ್ಯ, ನೀರಾವರಿ ಕ್ಷೇತ್ರಗಳ ನ್ನು ಕಡೆಗಣಿಸಲಾಗಿದೆ. ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡಿದ ಕಾಂಗ್ರೆಸ್ ಸರ್ಕಾರ ಈ ಬಜೆಟ್ ನಲ್ಲಿ ಒಂದು ರೂಪಾಯಿಯನ್ನೂ ನೀಡಿಲ್ಲ. ಒಟ್ಟಿನಲ್ಲಿ ಜಲಸಂಪನ್ಮೂಲ ಇಲಾಖೆ ಹಾಗೂ ನೀರಾವರಿ ಯೋಜನೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗೆ ಸ್ಪಷ್ಟ ಚಿತ್ರಣ ಇಲ್ಲ. ನೀರಾವರಿಗೆ ಹಿಂದಿನ ಬಿಜೆಪಿ ಸರ್ಕಾರ 22,854 ಕೋಟಿ ರೂ ಬಂಡವಾಳ ಒದಗಿಸಿದ್ದರೆ ಅದನ್ನು ಈಗ 19 ಸಾವಿರ ಕೋಟಿ ರೂ.ಗೆ ಇಳಿಸಿ ಅನ್ಯಾಯ ಮಾಡಲಾಗಿದೆ ಎಂದು ಕಿಡಿಕಾರಿದ್ದಾರೆ.
7ನೇ ವೇತನ ಆಯೋಗ ಪ್ರಸ್ತಾಪ ಇಲ್ಲ:ಸರ್ಕಾರಿ ನೌಕರರಿಗೆ ನೀಡಲಾಗುವ 7ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿ ಮಾಡುವ ಬಗೆ, ಹಾಗೂ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೆ ತರುವ ಬಗ್ಗೆ, ಎಲ್ಲಿಯೂ ಪಸ್ತಾಪಿಸಿಲ್ಲ. ಎನ್ ಇ ಪಿ (ಹೊಸ ರಾಷ್ಟ್ರೀಯ ಶಿಕ್ಷಣ ನೀತಿ) ಯನ್ನು ಕೈಬಿಡುವ ಉದ್ದೇಶವೇ ಅರ್ಥವಾಗುತ್ತಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ದೇಶ ಪ್ರಗತಿಯ ಕಡೆ ನೋಡುತ್ತಿದ್ದರೆ ಕರ್ನಾಟಕವನ್ನು ವಿರುದ್ಧ ದಿಕ್ಕಿನಲ್ಲಿ ಕೊಂಡೊಯ್ಯುತ್ತಿದ್ದಾರೆ. ಇದರಿಂದ ವಿಧ್ಯಾರ್ಥಿ ಹಾಗೂ ಶಿಕ್ಷಕರಲ್ಲಿ ಗೊಂದಲ ಮೂಡಿಸಿದ್ದಾರೆ. ಇದು ಖಂಡಿತವಾಗಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿದೆ ಎಂದಿದ್ದಾರೆ.
ರಾಜ್ಯ ಸರ್ಕಾರದ ಶೂನ್ಯ ಸಾಧನೆ ಬಜೆಟ್: ಗೋವಿಂದ ಕಾರಜೋಳ:ರಾಜ್ಯಕ್ಕೆ ಯಾವುದೇ ಹೊಸ ಯೋಜನೆಗಳನ್ನಾಗಲೀ ಅಥವಾ ಅಭಿವೃದ್ಧಿ ಕೆಲಸ ಕಾರ್ಯಗಳನ್ನಾಗಲೀ ನೀಡದ ಸರ್ಕಾರದ ಶೂನ್ಯ ಸಾಧನೆಯ ಬಜೆಟ್ ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಪತ್ರಿಕಾ ಹೇಳಿಕೆ ಮೂಲಕ ಟೀಕಿಸಿದ್ದಾರೆ.
2023-24ನೇ ಸಾಲಿನ ಬಜೆಟ್‌ನಲ್ಲಿ ದುಂದುವೆಚ್ಚ ತಡೆಗೆ ಕಾಂಗ್ರೆಸ್ ಸರ್ಕಾರ ಗಮನ ನೀಡಿಲ್ಲ. ಸಂಪನ್ಮೂಲ ಸಂಗ್ರಹದಲ್ಲಿ ಸಿದ್ದರಾಮಯ್ಯ ಸರ್ಕಾರ ಪ್ರಾರಂಭದಲ್ಲಿಯೇ ಸೋತಂತೆ ಕಾಣುತ್ತಿದೆ. ಅದರ ಪರಿಣಾಮ ರಾಜ್ಯದ ಜನತೆಯ ಮೇಲೆ ತೆರಿಗೆ ಹೊರೆಯನ್ನು ಹೊರಿಸಿದೆ. ನಿರುದ್ಯೋಗಿ ಪದವೀಧರ ಯುವಕರಿಗೆ ರೂ.3,000 ಮತ್ತು ರೂ.1,500 ನಿರುದ್ಯೋಗಿ ಭತ್ಯೆ ನೀಡುವುದಾಗಿ ಭರವಸೆಯನ್ನು ನೀಡಿ ಅಧಿಕಾರಕ್ಕೆ ಬಂದ ನಂತರ ನಿರುದ್ಯೋಗಿ ಯುವಕರಿಗೆ ಭತ್ಯೆ ನೀಡಲು ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿಲ್ಲ.
ಗ್ಯಾರಂಟಿ ಹೆಸರಿನಲ್ಲಿ ನೀರಾವರಿ ಯೋಜನೆಗಳನ್ನು ಕಡೆಗಣಿಸಿದ ಸರ್ಕಾರ, ರಾಜ್ಯಕ್ಕೆ ಹಂಚಿಕೆಯಾದ ನೀರನ್ನು ಬಳಕೆ ಮಾಡಲು ಪ್ರಾಮಾಣಿಕ ಚಿಂತನೆ ಮಾಡಿಲ್ಲ. ರಾಜ್ಯಕ್ಕೆ ಯಾವುದೇ ಹೊಸ ಯೋಜನೆಗಳನ್ನಾಗಲೀ ಅಥವಾ ಅಭಿವೃದ್ಧಿ ಕೆಲಸ ಕಾರ್ಯಗಳನ್ನಾಗಲೀ ನೀಡದ ಸರ್ಕಾರದ ಶೂನ್ಯ ಸಾಧನೆಯ ಬಜೆಟ್. ಪ್ರಾಮಾಣಿಕತೆಗಿಂತಲೂ ಪ್ರಚಾರಕ್ಕೆ ಹೆಚ್ಚು ಮಹತ್ವ ನೀಡಿದ್ದು ಖಚಿತ ಎಂದಿದ್ದಾರೆ.
ಇದನ್ನು ಓದಿ:ಇದು ಪೂರ್ಣ ಬಜೆಟ್, ಪಂಚ ಗ್ಯಾರಂಟಿಗಳಿಗೆ ಅಗತ್ಯ ಹಣ ಮೀಸಲು: ಸಿಎಂ ಸಿದ್ದರಾಮಯ್ಯ