ಬೆಂಗಳೂರು: "ಕೇಂದ್ರದ ಟ್ರಬಲ್ ಎಂಜಿನ್ ಸರ್ಕಾರ ಕಳೆದ ಎಂಟು ವರ್ಷಗಳಿಂದ ಪಾಲಿಸಿಕೊಂಡು ಬಂದಿರುವ 'ಅಮೀರ್ ಕೆ ಸಾಥ್, ಗರೀಬ್ ಕಾ ವಿನಾಶ್ (ಶ್ರೀಮಂತರ ಪೋಷಣೆ ಮತ್ತು ಬಡವರ ವಿನಾಶ) ಎಂಬ ಜನವಿರೋಧಿ ನೀತಿಯ ಮುಂದುವರಿದ ಭಾಗವಾಗಿ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023-2024ನೇ ಸಾಲಿನ ಬಜೆಟನ್ನು ಮಂಡಿಸಿದ್ದಾರೆ" ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನ ಶಿವಾನಂದ ವೃತ್ತ ಸಮೀಪದಲ್ಲಿರುವ ಸರ್ಕಾರಿ ನಿವಾಸದಲ್ಲಿ ಮಾತನಾಡಿ, "ಕೇಂದ್ರ ಸರ್ಕಾರದ ದುರಾಡಳಿತ ಮತ್ತು ಕೊರೊನಾ ರೋಗದಿಂದಾಗಿ ದೇಶದ ಆರ್ಥಿಕ ಸ್ಥಿತಿ ಹದಗೆಟ್ಟು ಹೋಗಿದೆ. ಬಹಳ ಮುಖ್ಯವಾಗಿ ದೇಶದ ಬೆನ್ನೆಲುಬು ಎಂದು ಭಾಷಣದಲ್ಲಿ ಎಲ್ಲರೂ ಕೊಂಡಾಡುವ ರೈತರ ಬದುಕು ನೆಲ ಹಿಡಿದಿದೆ. ನಿರುದ್ಯೋಗದ ಪ್ರಮಾಣದಲ್ಲಿ ಹೆಚ್ಚಾಗಿದೆ. ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ಅಂದರೆ ಸುಮಾರು ಶೇ 54ರಷ್ಟು ಉದ್ಯೋಗವನ್ನು ಸೃಷ್ಟಿಸುವ ಮತ್ತು ದೇಶದ ಆರ್ಥಿಕತೆಗೆ ದೊಡ್ಡ ಕೊಡುಗೆಯನ್ನು ನೀಡುವ ಕೃಷಿ ಕ್ಷೇತ್ರವನ್ನು ಬಜೆಟ್ನಲ್ಲಿ ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. 2022-23ರ ಬಜೆಟ್ಗೆ ಹೋಲಿಸಿದರೆ ಈ ಬಜೆಟ್ನಲ್ಲಿ ಕೃಷಿ ಕ್ಷೇತ್ರಕ್ಕೆ ರೂ.8.468.21 ಕೋಟಿಯಷ್ಟು ಹಣ ಕಡಿಮೆ ನೀಡಲಾಗಿರುವುದೇ ಈ ನಿರ್ಲಕ್ಷ್ಯಕ್ಕೆ ಸಾಕ್ಷಿ. ಸಣ್ಣ ಮತ್ತು ಮಧ್ಯಮ ರೈತರನ್ನು ಕೂಡ ಕಡೆಗಣಿಸಲಾಗಿದೆ. ಕನಿಷ್ಠ ಬೆಂಬಲ ಬೆಲೆಯಲ್ಲಿನ ಅನ್ಯಾಯ, ಅವೈಜ್ಞಾನಿಕ ಬೆಳೆ ವಿಮೆ, ಸಾಲದ ಹೊರೆ, ನೆರೆ ಮತ್ತು ಬರಪರಿಹಾರದಲ್ಲಿನ ಕೊರತೆಗಳ ಬಗ್ಗೆ ಬಜೆಟ್ನಲ್ಲಿ ಪ್ರಸ್ತಾಪವೇ ಇಲ್ಲ" ಎಂದರು.
ಹೊಸ ಸಾಲ ಪಡೆದು ಹಳೆ ಸಾಲ ತೀರಿಸಿ: "ರೈತರ ಆದಾಯವನ್ನು ದುಪ್ಪಟ್ಟು ಮಾಡಲಾಗುವುದು ಎಂಬ ಘೋಷಣೆ ಪೊಳ್ಳಾಗಿದೆ. ಕನಿಷ್ಠ ಸಣ್ಣ ಹಿಡುವಳಿದಾರ ರೈತರ ಸಾಲವನ್ನಾದರೂ ಮನ್ನಾ ಮಾಡಬಹುದೆಂಬ ನಿರೀಕ್ಷೆ ಸುಳ್ಳಾಗಿದೆ. ರೈತರಿಗೆ ಸಾಲ ನೀಡಲು ಎರಡು ಲಕ್ಷ ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ರೈತರನ್ನು ಋಣಮುಕ್ತಗೊಳಿಸಬೇಕಾಗಿರುವ ಸರ್ಕಾರ ಅವರನ್ನು ಇನ್ನಷ್ಟು ಸಾಲದ ಬಲೆಗೆ ನೂಕಲು ಹೊರಟಿದೆ. ಹೊಸ ಸಾಲ ಪಡೆದು ಹಳೆಸಾಲ ತೀರಿಸಿ ಎನ್ನುವುದನ್ನು ಸರ್ಕಾರ ಹೇಳಿದೆ. ಈ ಸಾಲದ ಬಡ್ಡಿದರ ಎಷ್ಟು ಎನ್ನುವುದನ್ನು ಇನ್ನೂ ಸ್ಪಷ್ಟಪಡಿಸಿಲ್ಲ. ಹತ್ತಿ ಬೆಳೆಯನ್ನು ಹೊರತು ಪಡಿಸಿದರೆ ಬೇರೆ ಯಾವ ಬೆಳೆಗೂ ಬೆಳೆ ಕೇಂದ್ರಿತ ಯೋಜನೆಗಳು ಬಜೆಟ್ನಲ್ಲಿ ಇಲ್ಲ. ತೋಟಗಾರಿಕಾ ಬೆಳೆಗಳನ್ನು ಪ್ರಸ್ತಾಪ ಮಾಡಲಾಗಿದ್ದರೂ, ಅಲ್ಲಿಯೂ ಬೆಳೆ ಕೇಂದ್ರಿತ ಉದಾಹರಣೆಗೆ ತೆಂಗು, ಅಡಿಕೆ ಇತ್ಯಾದಿ ಬೆಳೆಗಳಿಗೆ ನಿರ್ದಿಷ್ಟ ಯೋಜನೆಗಳನ್ನು ಹೇಳಿಲ್ಲ" ಎಂದು ಟೀಕಿಸಿದರು.
"ಭದ್ರ ಮೇಲ್ದಂಡೆ ಯೋಜನೆಗೆ ರೂ.5300 ಕೋಟಿ ರೂಪಾಯಿಯನ್ನು ನಿಗದಿಪಡಿಸಲಾಗಿದೆ. ಈ ಯೋಜನೆ ಪೂರ್ಣಗೊಳ್ಳಬೇಕಾದರೆ ರೂ.23,000 ಕೋಟಿ ಅವಶ್ಯಕತೆಯಿದೆ. ಕೇಂದ್ರ ಸರ್ಕಾರ ನೀಡಲು ಒಪ್ಪಿರುವುದು ಯೋಜನಾ ವೆಚ್ಚದ ಕಾಲುಭಾಗ ಮಾತ್ರ. ಈ ಹಣದಲ್ಲಿ 40% ಕಮಿಷನ್ ಕಳೆದರೆ ಕೊನೆಗೆ ಯೋಜನೆಗೆ ಸಿಗಲಿರುವುದು ರೂ.3000 ಕೋಟಿಗಿಂತಲೂ ಕಡಿಮೆ. ನಿಗದಿ ಪಡಿಸಿರುವ ಹಣ ಕೂಡಾ ಒಂದು ವರ್ಷಕ್ಕೋ ಐದು ವರ್ಷಕ್ಕೋ ಎನ್ನುವದನ್ನೂ ಸ್ಪಷ್ಟಪಡಿಸಿಲ್ಲ."
ನಿರೀಕ್ಷೆಗಳು ಸುಳ್ಳಾದ್ವು: "ಕೃಷ್ಣಾ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿರುವ ಈ ಯೋಜನೆ ಅನುಷ್ಠಾನಗೊಳ್ಳಬೇಕಾದರೆ ಬಿ ಸ್ಕೀಮ್ಗೆ ಸಂಬಂಧಿಸಿದ ವ್ಯಾಜ್ಯ ಇತ್ಯರ್ಥವಾಗಬೇಕು. ಅಲ್ಲಿಯವರೆಗೆ ಈ ಹಣವನ್ನು ಖರ್ಚು ಮಾಡುವ ಹಾಗಿಲ್ಲ. ಕೃಷ್ಣಾ ಮೇಲ್ದಂಡೆ, ಮಹಾದಾಯಿ, ಮೇಕೆದಾಟು ಯೋಜನೆಗಳಿಗೆ ಪೈಸೆ ಹಣವನ್ನೂ ನೀಡಿಲ್ಲ. ಉಪನಗರ ರೈಲ್ವೆ ಮತ್ತು ಮೆಟ್ರೋ ರೈಲು ಯೋಜನೆಗೆ ಹೆಚ್ಚಿನ ಅನುದಾನ ನೀಡಬಹುದೆಂಬ ನಿರೀಕ್ಷೆ ಇತ್ತು. ಅದೂ ಸುಳ್ಳಾಗಿದೆ" ಎಂದು ಅಭಿಪ್ರಾಯಪಟ್ಟರು.