ಬೆಂಗಳೂರು: ದೂರದೃಷ್ಟಿ ಇರುವ ಆರ್ಥಿಕ ಬೆಳವಣಿಗೆಗೆ ಪೂರಕವಾಗಿರುವ ಮತ್ತು ಆಧುನಿಕತೆಯಿಂದ ಕೂಡಿರುವ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಅಭಿವೃದ್ಧಿ, ಜನಸಾಮಾನ್ಯರ ನಿರೀಕ್ಷೆಗೆ ತಕ್ಕ ರೀತಿಯಲ್ಲಿ ಒತ್ತು ಕೊಟ್ಟಿರುವ ಬಜೆಟ್ ಇದಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಎರಡು ಅಲೆಗಳ ಕರಿಛಾಯೆಯಿಂದ ಆರ್ಥಿಕತೆ ಹಿಂಜರಿತ ಆಗಿತ್ತು. ಈ ಬಾರಿ ಅರ್ಥಿಕತೆ, ಉತ್ಪಾದನೆ ಹೆಚ್ಚಿಸುವತ್ತಲೂ ಆದ್ಯತೆ ನೀಡಲಾಗಿದೆ. ಆರ್ಥಿಕತೆಯನ್ನು ಸ್ಥಿರಗೊಳಿಸುವ ಬಜೆಟ್ ಇದಾಗಿದೆ. ಕೋವಿಡ್ ನಂತರದ ಭಾರತದ ಆರ್ಥಿಕತೆ ಹೆಚ್ಚಿಸುವ ಬಜೆಟ್ ಇದಾಗಿದ್ದು, ಬೆಳವಣಿಗೆಗೆ ಪೂರಕವಾಗಿರುವ ಬಜೆಟ್ ಆಗಿದೆ. ಮೂಲಸೌಕರ್ಯ ವಲಯದಲ್ಲಿ ದೊಡ್ಡ ಉತ್ತೇಜನ ಕೊಡಲಾಗಿದೆ. ಹೂಡಿಕೆ ದೊಡ್ಡ ಪ್ರಮಾಣದಲ್ಲಿ ಆಗಿದೆ. ಗ್ರಾಮೀಣ ಭಾರತ ಸಬಲೀಕರಣ ಮಾಡಲು, ನಗರಗಳ ಅಭಿವೃದ್ಧಿಗೆ ಹೊಸತನ ಕೊಡಲು ಡಿಜಿಟೈಲೈಸೇಷನ್, ಸಾರಿಗೆಗೆ ದೊಡ್ಡ ಹಣ ನೀಡಲಾಗಿದೆ, ನಗರ, ಗ್ರಾಮೀಣ ಭಾಗಗಳ ಅಭಿವೃದ್ಧಿಗೆ ಸಮನಾದ ಒತ್ತು, ಎಣ್ಣೆ ಕಾಳುಗಳ ಆಮದಿಗೆ ಒತ್ತು, ಡಿಫೆನ್ಸ್ನಲ್ಲಿ ಶೇ.68 ರಷ್ಟು ಹೂಡಿಕೆ, ನಮ್ಮ ದೇಸೀ ಉತ್ಪಾದಕ ಬಿಡಿಭಾಗಗಳ ತಯಾರಿಗೆ ಒತ್ತು ನೀಡಿದ್ದು, ಆಡಳಿತದಲ್ಲಿ ಆಧುನಿಕತೆ ತರುವ ಬಜೆಟ್ ಆಗಿದೆ ಎಂದರು.
ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಉತ್ತೇಜನ: ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಕ್ಯಾಪಿಟಲ್ ಔಟ್ಲೆಟ್ ಜಾಸ್ತಿಯಾಗಿದೆ. ಮೂರರಿಂದ ಮೂರುವರೆ ಸಾವಿರ ಕೋಟಿ ಅಧಿಕವಾಗಿ ನಮ್ಮ ಕ್ಯಾಪಿಟಲ್ ಅಕೌಂಟ್ಗೆ ಬರುವ ಸಾಧ್ಯತೆ ಇದೆ. ಕಳೆದ ಬಾರಿ 26 ಸಾವಿರ ಕೋಟಿ ಇತ್ತು. ಈಗ 29 ಸಾವಿರ ಕೋಟಿ ಬರುವ ಅಂದಾಜು ಇದೆ. ರಾಷ್ಟ್ರೀಯ ಹೆದ್ದಾರಿ, ರೈಲ್ವೆಯಲ್ಲಿ ನಮ್ಮ ಯೋಜನೆಗಳಿವೆ. ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಉತ್ತೇಜನ ಕೊಡಲಾಗಿದ್ದು, ಅದರಿಂದ ಕರ್ನಾಟಕಕ್ಕೆ ಲಾಭವಾಗಲಿದೆ. ನಮ್ಮ ಮೆಟ್ರೋಗೆ ಹೆಚ್ಚಿನ ಅನುದಾನ ಸಿಗುವ ಸಾಧ್ಯತೆ ಹೆಚ್ಚಿದೆ. ಪ್ರವಾಸೋದ್ಯಮಕ್ಕೆ ಬಹಳ ದೊಡ್ಡ ಪ್ರಮಾಣದ ಅನುದಾನ ಸಿಕ್ಕಿದೆ. ನಮ್ಮಲ್ಲಿ ಪ್ರವಾಸೋದ್ಯಮ ವಲಯ ಜಾಸ್ತಿ ಇರುವುದರಿಂದ ನಮ್ಮ ರಾಜ್ಯಕ್ಕೆ ಹೆಚ್ಚಿನ ಅನುಕೂಲ ಆಗಲಿದೆ ಎಂದಿದ್ದಾರೆ.
ಸಣ್ಣ ಕೈಗಾರಿಕೆಗಳಿಗೆ 50,000 ಕೋಟಿ ಇದ್ದ ಅನುದಾನವನ್ನು ಐದು ಲಕ್ಷ ಕೋಟಿಗೆ ಹೆಚ್ಚಿಸಿದ್ದಾರೆ. ಕರ್ನಾಟಕ ಅತಿ ದೊಡ್ಡ ಎಂಎಸ್ಎಂಇ ಇರುವ ರಾಜ್ಯ. ಸಣ್ಣ ಕೈಗಾರಿಕೆ, ಗುಡಿ ಕೈಗಾರಿಕೆಗಳಿಗೆ ಹೆಚ್ಚಿನ ಅನುದಾನ ಇಟ್ಟಿರುವುದರಿಂದ ಕರ್ನಾಟಕಕ್ಕೆ ಅನುಕೂಲವಾಗಲಿದೆ ಎಂದರು.