ಬೆಂಗಳೂರು: ಪ್ರಸಕ್ತ ಸಾಲಿನ ಆರ್ಥಿಕ ಮುಂಗಡದ ಧನವಿನಿಯೋಗ ವಿಧೇಯಕಕ್ಕೆ ಪ್ರತಿಪಕ್ಷ ಕಾಂಗ್ರೆಸ್ ಧರಣಿ, ಜೆಡಿಎಸ್ ಸಭಾತ್ಯಾಗದ ನಡುವೆ ವಿಧಾನ ಪರಿಷತ್ನಲ್ಲಿ ಅಂಗೀಕಾರ ದೊರೆತಿದೆ.
ವಿಧಾನ ಪರಿಷತ್ ವಿತ್ತೀಯ ಕಾರ್ಯ ಕಲಾಪದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ಧನವಿನಿಯೋಗ ವಿಧೇಯಕ ಮಂಡಿಸಿದರು.
ವಿಧೇಯಕದ ಮೇಲೆ ಮಾತನಾಡಿದ ಸಿಎಂ, ಸಾಕಷ್ಟು ಸಂಖ್ಯೆಯಲ್ಲಿ ಪ್ರತಿಪಕ್ಷ, ಆಡಳಿತ ಪಕ್ಷದ ಸದಸ್ಯರು ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗಿಯಾಗಿದ್ದಾರೆ. ಪ್ರತಿಪಕ್ಷ ಸದಸ್ಯರು ಬಾವಿಯಲ್ಲಿರುವಾಗ ಹೆಚ್ಚಿನ ಮಾಹಿತಿ ನೀಡಲು ಹೋಗಲ್ಲ ಎಂದು ಬಜೆಟ್‌ನ ಭಾಷಣದ ಪ್ರತಿ ಮಂಡಿಸಿದರು. ನಂತರ ಧ್ವನಿಮತದ ಮೂಲಕ ವಿಧೇಯಕಕ್ಕೆ ವಿಧಾನ ಪರಿಷತ್ ಅಂಗೀಕಾರ ನೀಡಿತು.
ನಂತರ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಕರ್ನಾಟಕ ಸಾರ್ವಜನಿಕ ಸಂಘಗಳ ಪಾರದರ್ಶನ ತಿದ್ದುಪಡಿ ವಿಧೇಯಕ, ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಆರ್ಥಿಕ ಹೊಣೆಗಾರಿಕೆ ತಿದ್ದುಪಡಿ ವಿಧೇಯಕಕ್ಕೆ ಪರಿಷತ್ ಅಂಗೀಕಾರ ನೀಡಿತು.