ಕರ್ನಾಟಕ

karnataka

ETV Bharat / state

ಜಲ ಸಂಪನ್ಮೂಲ ಇಲಾಖೆ; ಮಂದಗತಿಯಲ್ಲಿ ಸಾಗುತ್ತಿರುವ ಯೋಜನೆ ಪೂರ್ಣಗೊಳಿಸಲು ಬಜೆಟ್​​​ನಲ್ಲಿ ಕ್ರಮ - ಈಟಿವಿ ಭಾರತ್​ ಕನ್ನಡ ನ್ಯೂಸ್​

Karnataka Budget: ರಾಜ್ಯದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು 172 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಜಲ ಸಂಪನ್ಮೂಲ ಇಲಾಖೆ
ಜಲ ಸಂಪನ್ಮೂಲ ಇಲಾಖೆ

By

Published : Jul 7, 2023, 6:12 PM IST

ಬೆಂಗಳೂರು :ಜಲ ಸಂಪನ್ಮೂಲ ಇಲಾಖೆಯಡಿ ಮಂದಗತಿಯಲ್ಲಿ ಸಾಗುತ್ತಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಕ್ರಮ ವಹಿಸಲಾಗಿದೆ. ಜೊತಗೆ ಪ್ರಸಕ್ತ ಸಾಲಿನಲ್ಲಿ 940 ಕೋಟಿ ರೂ. ಬಾಕಿ ಮೊತ್ತದ 10 ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ, ಸುಮಾರು 25,948 ಹೆಕ್ಟೇರ್‌ ನೀರಾವರಿ ಸಾಮರ್ಥ್ಯ ಕಲ್ಪಿಸಲಾಗುವುದು ಎಂದು ಘೋಷಿಸಲಾಗಿದೆ.

ಜಲಸಂಪನ್ಮೂಲ ಇಲಾಖೆಯಡಿ ದಿನಾಂಕ:1-4-2023ರವರೆಗೆ ಅನುಮೋದಿಸಲಾಗಿರುವ ಯೋಜನೆಗಳಿಗೆ 1 ಲಕ್ಷ ಕೋಟಿ ರೂ. ಗಳನ್ನು ಒದಗಿಸುವ ಅವಶ್ಯಕತೆಯಿದೆ. ಈ ಯೋಜನೆಗಳ ವೆಚ್ಚವು ಕಾಮಗಾರಿ ಹಾಗೂ ಭೂಸ್ವಾಧೀನ ವೆಚ್ಚ ಹೆಚ್ಚಳದ ಕಾರಣ 25,000 – 40,000 ಕೋಟಿ ರೂ. ಗಳಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಇದಲ್ಲದೇ ಕಳೆದ 6 ತಿಂಗಳ ಅವಧಿಯಲ್ಲಿ 25,548 ಕೋಟಿ ರೂ. ಅಂದಾಜು ವೆಚ್ಚದ 1,274 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಚಾಲನೆ ನೀಡಲಾಗಿದೆ.

ಹೀಗಾಗಿ ಜಲಸಂಪನ್ಮೂಲ ಇಲಾಖೆಯ ಆಯವ್ಯಯ ಹಂಚಿಕೆ ವಾರ್ಷಿಕ ಸರಾಸರಿ 20,000 ಕೋಟಿ ರೂ. ಗಳಷ್ಟಿದ್ದು, ಅನುಮೋದಿಸಿರುವ ಯೋಜನೆಗಳ ಅಂದಾಜು ಮೊತ್ತ ಇದರ ಐದು ಪಟ್ಟು ಹೆಚ್ಚಾಗಿರುವುದು ವಿತ್ತೀಯ ಶಿಸ್ತಿನ ಉಲ್ಲಂಘನೆಗೆ ಸ್ಪಷ್ಟ ನಿದರ್ಶನವಾಗಿದೆ. ಅಲ್ಲದೆ ಕಳೆದ ಆರು ತಿಂಗಳ ಅವಧಿಯಲ್ಲಿಯೇ ಇಲಾಖೆಯ ವಾರ್ಷಿಕ ಆಯವ್ಯಯ ಹಂಚಿಕೆಗಿಂತ ಹೆಚ್ಚಿನ ಮೊತ್ತದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಚಾಲನೆ ನೀಡಿರುವುದು ವಿತ್ತೀಯ ಅಶಿಸ್ತಿನ ಪರಮಾವಧಿಯಲ್ಲದೆ ಇನ್ನೇನು? ಹಿಂದಿನ ಸರ್ಕಾರದ ಈ ವಿವೇಚನಾ ರಹಿತ ಕ್ರಮಗಳಿಂದಾಗಿ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅವಕಾಶವಿಲ್ಲದಂತಾಗಿದೆ.

ಪ್ರಸಕ್ತ ಸಾಲಿನಲ್ಲಿ ಕುಲಹಳ್ಳಿ-ಹನ್ನೂರು, ತಿಮ್ಮಾಪುರ, ಸಸಾಲಟ್ಟಿ-ಶಿವಲಿಂಗೇಶ್ವರ ಮತ್ತು ಮಂಟೂರು ಮಹಾಲಕ್ಷ್ಮಿ ಏತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ ಸುಮಾರು 39,134 ಹೆಕ್ಟೇರ್‌ ಅಚ್ಚುಕಟ್ಟು ಸ್ಥಿರೀಕರಣ ಮಾಡಲಾಗುವುದು. ರಾಜ್ಯದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು 172 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಇವುಗಳಲ್ಲಿ 19 ಕೆರೆ ತುಂಬಿಸುವ ಯೋಜನೆಗಳನ್ನು 770 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಿ, ಬೆಳಗಾವಿ, ದಾವಣಗೆರೆ, ಬಳ್ಳಾರಿ, ಹಾವೇರಿ, ಗದಗ, ಬೀದರ್, ಉತ್ತರ ಕನ್ನಡ, ವಿಜಯನಗರ, ಕೊಪ್ಪಳ, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳ 899 ಕೆರೆಗಳಿಗೆ ನೀರು ತುಂಬಿಸಲಾಗುವುದು.

ಎತ್ತಿನ ಹೊಳೆ ಯೋಜನೆ : ನಮ್ಮ ಸರ್ಕಾರದ ಅವಧಿಯಲ್ಲಿ ತೀವ್ರಗತಿಯಲ್ಲಿ ಪೂರ್ಣಗೊಳಿಸಲು ಚಾಲನೆಗೊಳಿಸಿದ್ದ 12,912 ಕೋಟಿ ರೂ. ಮೊತ್ತದ ಎತ್ತಿನ ಹೊಳೆ ಯೋಜನೆಯನ್ನು ಹಿಂದಿನ ಸರ್ಕಾರವು ಸಕಾಲದಲ್ಲಿ ಪೂರ್ಣಗೊಳಿಸದ ಕಾರಣ ದರ ಹೆಚ್ಚಳಗೊಂಡು ಈ ಯೋಜನೆಯು 23,252 ಕೋಟಿ ರೂ. ಮೊತ್ತಕ್ಕೆ ಪರಿಷ್ಕೃತಗೊಂಡಿದೆ. ಯೋಜನೆಯಡಿ ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕ್ರಮವಹಿಸಿ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲು ಆದ್ಯತೆಯ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು.

ಮೇಕೆದಾಟು ಯೋಜನೆ : ಇನ್ನು ಮೇಕೆದಾಟು ಸಮತೋಲನ ಜಲಾಶಯ ಹಾಗೂ ಕುಡಿಯುವ ನೀರಿನ ಯೋಜನೆಯ ವಿವರವಾದ ಯೋಜನಾ ವರದಿ ಹಾಗೂ ಪರಿಸರ ತೀರುವಳಿ ಪ್ರಸ್ತಾವನೆಯನ್ನು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಶೀಘ್ರವಾಗಿ ತೀರುವಳಿ ಪಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಪರಿಹಾರ ಅರಣ್ಯೀಕರಣಗೆ ಅಗತ್ಯವಿರುವ ಭೂಮಿಯನ್ನು ಗುರುತಿಸಲಾಗಿದ್ದು, ಭೂಸ್ವಾಧೀನ ಪ್ರಕ್ರಿಯೆಗಳನ್ನು ಜರುಗಿಸಲು ಆದ್ಯತೆ ಮೇರೆಗೆ ಕ್ರಮವಹಿಸಲಾಗುವುದು ಎಂದು ಸಿದ್ದರಾಮಯ್ಯ ತಮ್ಮ ಬಜೆಟ್​ ನಲ್ಲಿ ಹೇಳಿದ್ದಾರೆ.

ಭದ್ರಾ ಮೇಲ್ದಂಡೆ ಯೋಜನೆ : ಮಧ್ಯ ಕರ್ನಾಟಕದ ಪ್ರಮುಖ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆಯನ್ನು ಡಬಲ್‌ ಇಂಜಿನ್‌ ಎಂದು ಹೇಳಿಕೊಳ್ಳುವ ಸರ್ಕಾರವಿದ್ದಾಗ್ಯೂ, ರಾಷ್ಟ್ರೀಯ ಯೋಜನೆಯನ್ನಾಗಿ ಇಲ್ಲಿಯವರೆಗೂ ಅಧಿಕೃತವಾಗಿ ಅನುಮೋದಿಸಿರುವುದಿಲ್ಲ. ಕೇಂದ್ರ ಸರ್ಕಾರವು
2023-24ನೇ ಸಾಲಿನ ತನ್ನ ಆಯವ್ಯಯದಲ್ಲಿ 5,300 ಕೋಟಿ ರೂ.ಗಳ ಅನುದಾನವನ್ನು ಭದ್ರಾ ಯೋಜನೆಗೆ ಘೋಷಿಸಿದ್ದು, ಸದರಿ ಅನುದಾನವನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಯೋಜನೆಯ ಅನುಷ್ಠಾನಕ್ಕೆ ಆದ್ಯತೆಯ ಮೇಲೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಸಿದ್ದರಾಮಯ್ಯ.

ಮಹದಾಯಿ ಯೋಜನೆ : ಮಹದಾಯಿ ನ್ಯಾಯಾಧಿಕರಣದಿಂದ ಕಳಸಾ ಮತ್ತು ಬಂಡೂರಾ ನಾಲಾ ತಿರುವು ಕುಡಿಯುವ ನೀರಿನ ಯೋಜನೆಗೆ ಹಂಚಿಕೆಯಾದ 3.90 ಟಿಎಂಸಿ ನೀರಿನ ಬಳಕೆಗಾಗಿ ಈಗಾಗಲೇ ಕೇಂದ್ರ ಜಲ ಆಯೋಗದ ತೀರುವಳಿ ದೊರಕಿದ್ದು, ಅವಶ್ಯಕವಿರುವ ಅರಣ್ಯ ತೀರುವಳಿ ಪಡೆದು, ಕಾಮಗಾರಿಗಳಿಗೆ ಚಾಲನೆ ನೀಡಲು ಪ್ರಯತ್ನಿಸಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.

ಕೃಷ್ಣಾ ಮೇಲ್ದಂಡೆ ಯೋಜನೆ : ಕೇಂದ್ರ ಸರ್ಕಾರದ ಪಿಎಂಕೆಎಸ್‌ವೈ-ಎಐಬಿಪಿ (PMKSY-AIBP) ಯೋಜನೆಯಡಿ 2021-26ನೇ ಅವಧಿಗೆ ಪರಿಗಣಿಸಲಾದ ಪಟ್ಟಿಯಲ್ಲಿ ರಾಜ್ಯದ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 1 ಮತ್ತು 2ರ ವಿಸ್ತರಣೆ ಹಾಗೂ ಸನ್ನತಿ ಏತ ನೀರಾವರಿ ಯೋಜನೆಗಳನ್ನು ಗುರುತಿಸಲಾಗಿದೆ. ಸದರಿ ಯೋಜನೆಗಳಿಗೆ ಸಕ್ಷಮ ಪ್ರಾಧಿಕಾರಗಳ ತೀರುವಳಿ ಪಡೆದು, ಕೇಂದ್ರ ಸಹಾಯಧನ ಪಡೆಯಲು ಆದ್ಯತೆಯ ಕ್ರಮ ಜರುಗಿಸಲಾಗುವುದು.

ಜೊತೆಗೆ ಕೃಷ್ಣಾ ನ್ಯಾಯಾಧಿಕರಣ-2ರ ತೀರ್ಪಿನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ಕ್ಕೆ ಹಂಚಿಕೆಯಾಗಿರುವ 130 ಟಿಎಂಸಿ ನೀರಿನ ಬಳಕೆಗಾಗಿ ಯೋಜನಾ ಕಾಮಗಾರಿಗಳ ಜೊತೆಗೆ ಭೂಸ್ವಾಧೀನತೆ ಹಾಗೂ ಪುನರ್‌ ವಸತಿ ಮತ್ತು ಪುನರ್‌ ನಿರ್ಮಾಣಕ್ಕೆ ಆದ್ಯತೆ ನೀಡಿ ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹಣಕಾಸು ಸಚಿವರು ಹೇಳಿದ್ದಾರೆ.

ನವಲೆ ಬಳಿ ಸಮತೋಲನಾ ಜಲಾಶಯ : ತುಂಗಭದ್ರಾ ಜಲಾಶಯದಲ್ಲಿ ಹೂಳಿನ ಸಂಗ್ರಹಣೆಯಿಂದ ಉಂಟಾಗಿರುವ ನೀರು ಸಂಗ್ರಹಣೆ ಸಾಮರ್ಥ್ಯದ ಕೊರತೆ ನಿವಾರಿಸಲು ಕೊಪ್ಪಳ ಜಿಲ್ಲೆಯ ನವಲೆ ಬಳಿ ಸಮತೋಲನಾ ಜಲಾಶಯ (Balancing reservoir) ನಿರ್ಮಾಣ ಯೋಜನೆಯನ್ನು ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳೊಂದಿಗೆ ಸಮಾಲೋಚಿಸಿ, ಸಹಮತಿಯೊಂದಿಗೆ ಯೋಜನೆ ಅನುಷ್ಠಾನಗೊಳಿಸಲು ಕ್ರಮಕೈಗೊಳ್ಳಲಾಗುವುದು.

ಸಣ್ಣ ನೀರಾವರಿ :ನಮ್ಮ ಸರ್ಕಾರದ ಹಿಂದಿನ ಅವಧಿಯ ಅಂತ್ಯದಲ್ಲಿ ಸಣ್ಣ ನೀರಾವರಿ ಇಲಾಖೆಯಲ್ಲಿ 5,655 ಕೋಟಿ ರೂ. ಮೊತ್ತದ ಬಾಕಿ ಕಾಮಗಾರಿಗಳಿದ್ದು, ನಿಕಟ ಪೂರ್ವ ಸರ್ಕಾರವು ತಮ್ಮ ಅವಧಿಯ ಅಂತ್ಯಕ್ಕೆ ಇದನ್ನು 12,729 ಕೋಟಿ ರೂ. ಗಳಿಗೆ ಹೆಚ್ಚಿಸಿದೆ. ಹಾಗೆಯೇ 2017-18 ರಲ್ಲಿ 440 ಕೋಟಿ ರೂ.ಗಳ ಬಿಲ್ಲುಗಳು ಪಾವತಿಗೆ ಬಾಕಿಯಿದ್ದು, ಹಿಂದಿನ ಸರ್ಕಾರದ ಅವಧಿಯಲ್ಲಿ ಇದು ಸುಮಾರು 2,000 ಕೋಟಿ ರೂ. ಗಳಿಗೆ ಏರಿದೆ. ಹಿಂದಿನ ಸರ್ಕಾರದ ಆರ್ಥಿಕ ಅಶಿಸ್ತಿನಿಂದಾಗಿ ಬಾಕಿ ಉಳಿದಿರುವ ಬಾಧ್ಯತೆಗಳ ನೈಜತೆಯನ್ನು ಪರಿಶೀಲಿಸಿ ತೀರುವಳಿಗೊಳಿಸಲು ಕ್ರಮವಹಿಸಲಾಗುವುದು.

ಕೆ.ಸಿ ವ್ಯಾಲಿ ಮತ್ತು ಹೆಚ್.ಎನ್ ವ್ಯಾಲಿ ಯೋಜನೆಗಳು : ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಕೈಗೆತ್ತಿಕೊಂಡಿದ್ದ ಕೆ.ಸಿ ವ್ಯಾಲಿ ಮತ್ತು ಹೆಚ್.ಎನ್ ವ್ಯಾಲಿ ಯೋಜನೆಗಳಿಂದ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಏತ ನೀರಾವರಿ ಯೋಜನೆಯ ಮೂಲಕ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿ ಈ ಜಿಲ್ಲೆಗಳ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ವೃದ್ಧಿಗೊಂಡು ರೈತರು ಸಂತಸಗೊಂಡಿದ್ದಾರೆ. ಪ್ರಸ್ತುತ ಎರಡನೇ ಹಂತದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ 296 ಕೆರೆಗಳನ್ನು ತುಂಬಿಸುವ ಯೋಜನೆಯನ್ನು 529 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು. ಜೊತೆ ಜೊತೆಗೆ ಕೆರೆಗಳ ಸುತ್ತ ಜೀವಪರಿಸರವನ್ನು ಉಳಿಸಿಕೊಂಡು, ಅವುಗಳ ಪುನರುಜ್ಜೀವನಗೊಳಿಸುವುದಕ್ಕಾಗಿ ಕೆರೆಗಳ ಬಳಕೆದಾರರ ಸಂಘಗಳನ್ನು ಬಲಿಷ್ಠಗೊಳಿಸಿ, ಕೆರೆ ಅಭಿವೃದ್ಧಿಗೆ ಪಾಲುದಾರರನ್ನಾಗಿ ಮಾಡಿ ಜಲಬಳಕೆ ಮಾಡಲು ಅರ್ಥಪೂರ್ಣ ಕ್ರಿಯಾಯೋಜನೆ ಸಿದ್ಧಪಡಿಸಲಾಗುವುದು.

ರೈತರ ಸಾಲಮಿತಿ ಹೆಚ್ಚಳ : ಸರ್ಕಾರ ರಾಜ್ಯದ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ನೀಡುತ್ತಿರುವ ಅಲ್ಪಾವಧಿ ಸಾಲದ ಮಿತಿಯನ್ನು 3 ಲಕ್ಷ ರೂ. ಗಳಿಂದ 5 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು. ಅದೇ ರೀತಿ ಶೇ. 3 ರ ಬಡ್ಡಿದರದಲ್ಲಿ ನೀಡುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಮಿತಿಯನ್ನು 10 ಲಕ್ಷ ರೂ.ಗಳಿಂದ 15 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ 35 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ 25,000 ಕೋಟಿ ರೂ.ಗಳಷ್ಟು ಸಾಲ ವಿತರಣೆ ಮಾಡುವ ಗುರಿ ಹೊಂದಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ರೈತರು ತಮ್ಮ ಹಾಗೂ ತಮ್ಮ ನೆರೆಹೊರೆಯ ರೈತರ ಉತ್ಪನ್ನಗಳನ್ನು ಸಂಗ್ರಹಿಸಲು ಅನುವಾಗುವಂತೆ ಗೋದಾಮು ನಿರ್ಮಿಸಲು ಬ್ಯಾಂಕುಗಳು ನೀಡುವ 20 ಲಕ್ಷ ರೂ. ವರೆಗಿನ ಸಾಲಕ್ಕೆ ರಾಜ್ಯ ಸರ್ಕಾರವು ಶೇ. 7 ರಷ್ಟು ಬಡ್ಡಿ ಸಹಾಯಧನ ನೀಡಲಿದೆ. ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಗುಡ್ಡಗಾಡು ಪ್ರದೇಶಗಳ ರೈತರ ಕೃಷಿ ಉತ್ಪನ್ನ ಮತ್ತು ಪರಿಕರಗಳ ಸಾಗಾಣಿಕೆಗಾಗಿ ನಾಲ್ಕು ಚಕ್ರದ ಪಿಕ್‌ಅಪ್‌ ವ್ಯಾನ್‌ (Pick-up Van) ಖರೀದಿಸಲು 7 ಲಕ್ಷ ರೂ. ವರೆಗಿನ ಸಾಲವನ್ನು ಶೇ. 4ರ ಬಡ್ಡಿ ದರದಲ್ಲಿ ವಿತರಿಸಲಾಗುವುದು ಎಂಬ ಭರವಸೆಯನ್ನು ಬಜೆಟ್​ನಲ್ಲಿ ನೀಡಲಾಗಿದೆ.

ಶೀಘ್ರ ಹಾಳಾಗುವ ಹಣ್ಣು, ಹೂವು, ತರಕಾರಿಗಳ ಬೆಲೆ ಕುಸಿತದಿಂದ ರೈತರು ಒತ್ತಡದ ಮಾರಾಟ ಮಾಡುವುದನ್ನು ತಪ್ಪಿಸಿ, ನ್ಯಾಯಯುತ ಬೆಲೆ ಒದಗಿಸುವುದಕ್ಕೆ ನೆರವಾಗಲು ರಾಜ್ಯದ ಆಯ್ದ 50 ತರಕಾರಿ ಮಾರುಕಟ್ಟೆಗಳಲ್ಲಿ ಕೆಎಪಿಪಿಇಸಿ ಸಹಯೋಗದೊಂದಿಗೆ ಮಿನಿ ಶೀತಲ ಗೃಹಗಳನ್ನು ಸ್ಥಾಪಿಸಲಾಗುವುದು. ಹಾಗು ಕೃಷಿ ಉತ್ಪನ್ನ ಮಾರುಕಟ್ಟೆಗಳು ರೈತರ ಉತ್ಪನ್ನಗಳಿಗೆ ಯೋಗ್ಯ ಬೆಲೆ ಒದಗಿಸಿ, ಅವರ ಹಿತ ಕಾಯುವ ಸಂಸ್ಥೆಗಳಾಗಬೇಕು ಎಂಬ ಆಶಯ ನಮ್ಮ ಸರ್ಕಾರದ್ದಾಗಿದೆ. ಈ ಉದ್ದೇಶದಿಂದ ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನು ಬಲಪಡಿಸಿ, ಆನ್‌ಲೈನ್‌ ಮಾರುಕಟ್ಟೆ ವ್ಯವಸ್ಥೆಯನ್ನು ದೇಶದಲ್ಲೇ ಮೊದಲ ಬಾರಿಗೆ ಜಾರಿಗೊಳಿಸಲಾಯಿತು.

ಎಪಿಎಂಸಿ ಕಾಯ್ದೆ : ಹಿಂದಿನ ಸರ್ಕಾರವು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಸದೃಢ ಮಾರುಕಟ್ಟೆ ಜಾಲವನ್ನು ದುರ್ಬಲಗೊಳಿಸಿ ಎಪಿಎಂಸಿ ಗಳ ಮೇಲೆ ಅವಲಂಬಿತವಾಗಿರುವ ಲಕ್ಷಾಂತರ ರೈತರ ಬದುಕಿನ ಅನಿಶ್ಚಿತತೆಗೆ ಕಾರಣವಾಗಿದೆ. ಎಪಿಎಂಸಿ ಕಾಯ್ದೆ ತಿದ್ದುಪಡಿಯ ಮೊದಲು, 2018-19 ರಲ್ಲಿ ರಾಜ್ಯದ 167 ಕೃಷಿ ಉತ್ಪನ್ನ ಮಾರುಕಟ್ಟೆಗಳ ಒಟ್ಟು ಆದಾಯ 570 ರಿಂದ 600 ಕೋಟಿ ರೂ. ಗಳಷ್ಟಿದ್ದು, 2022-23 ರಲ್ಲಿ ಎಪಿಎಂಸಿ ಕಾಯ್ದೆ ತಿದ್ದುಪಡಿಯ ನಂತರ ಕೇವಲ 193 ಕೋಟಿ ರೂ.ಗಳಿಗೆ ಕುಸಿದಿದೆ.

ಅಲ್ಲದೆ, ಮುಕ್ತ ಮಾರುಕಟ್ಟೆಯಲ್ಲಿ ಖಾಸಗಿ ಸಂಸ್ಥೆಗಳು ರೈತರನ್ನು ವಂಚಿಸಿದ, ಶೋಷಣೆಗೆ ಒಳಪಡಿಸಿದ ಹಲವಾರು ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ಈ ಅವ್ಯವಸ್ಥೆಯನ್ನು ಸರಿಪಡಿಸಿ ರೈತರ ಹಿತರಕ್ಷಣೆ ಮಾಡಲು ನಮ್ಮ ಸರ್ಕಾರವು ಸದರಿ ರೈತ ವಿರೋಧಿ ಕಾಯ್ದೆಯನ್ನು ಹಿಂಪಡೆಯಲು ನಿರ್ಧರಿಸಿದೆ. ಜೊತೆಗೆ ʻಕಾಯಕ ನಿಧಿʼ ಯೋಜನೆಯಡಿ ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಮಾಲರು ಮರಣ ಹೊಂದಿದಲ್ಲಿ ಅವರ ಶವಸಂಸ್ಕಾರಕ್ಕಾಗಿ ನೀಡುವ ಮೊತ್ತವನ್ನು 10,000 ರೂ. ಗಳಿಂದ 25,000 ರೂ. ಗಳಿಗೆ ಹೆಚ್ಚಿಸಲಾಗುವುದು ಎಂದು ಘೋಷಿಸಲಾಗಿದೆ.

ಇದನ್ನೂ ಓದಿ :Karnataka Budget: ರೈತರಿಗೆ ಶೂನ್ಯ ಬಡಿದರದ ಸಾಲ ಮಿತಿ ₹3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ;ಎಪಿಎಂಸಿ ಕಾಯ್ದೆ ರದ್ದು

ABOUT THE AUTHOR

...view details