ಬೆಂಗಳೂರು: ಬಾಹ್ಯಾಕಾಶ ತಂತ್ರಜ್ಞಾನ, ರಾಕೆಟ್ ಅಭಿವೃದ್ಧಿ, ಕ್ಷಿಪಣಿ ಅಭಿವೃದ್ಧಿ, ರಾಕೆಟ್ ಉಡಾವಣಾ ಸೌಲಭ್ಯಗಳಲ್ಲಿ ಪ್ರತಿಷ್ಠಿತ ರಾಷ್ಟ್ರವಾಗಿ ಹೊರಹೊಮ್ಮಿರುವ ಭಾರತದ ಬಾಹ್ಯಾಕಾಶ ಸಂಸ್ಥೆಗಳ ಜೊತೆ ಕೈಜೋಡಿಸುವ ಮೂಲಕ, ಭಾರತದ ಕಡಿಮೆ ವೆಚ್ಚದ ಉಡಾವಣಾ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಆಸ್ಟ್ರೇಲಿಯಾ ಉತ್ಸುಕವಾಗಿದೆ ಎಂದು ಕ್ವೀನ್ಸ್ ಲ್ಯಾಂಡ್ ಸರ್ಕಾರದ ಪ್ರತಿನಿಧಿ ಲಿಯೇನ್ ಕೆಂಪ್ ಹೇಳಿದ್ದಾರೆ.
ಬೆಂಗಳೂರು ತಂತ್ರಜ್ಞಾನ ಮೇಳ-2020 ಕೋವಿಡ್ ಪೂರ್ವ ಅವಧಿಯಲ್ಲಿ “ಸೈಬರ್ ಕ್ಷೇತ್ರದಿಂದ ಹಿಡಿದು ಬಾಹ್ಯಾಕಾಶ ಕ್ಷೇತ್ರದವರೆಗೆ ಆಸ್ಟ್ರೇಲಿಯಾದ ಆವಿಷ್ಕಾರಗಳು ಮತ್ತು ಸವಾಲುಗಳ” ಕುರಿತು ಶುಕ್ರವಾರ ನಡೆದ ವರ್ಚುವಲ್ ಸಂವಾದದಲ್ಲಿ ಅವರು ಮಾತನಾಡಿದರು.
ಕೋವಿಡ್ ನಂತಹ ಸಾಂಕ್ರಾಮಿಕ ವ್ಯಾಧಿ ಇಡೀ ವಿಶ್ವವನ್ನು ಬಾಧಿಸುತ್ತಿರುವ ಈ ಕಾಲಘಟ್ಟದಲ್ಲಿ ಸೈಬರ್ ತಾಣವನ್ನು ವ್ಯಾಪಕವಾಗಿ ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆದು, ಸುಳ್ಳು ವದಂತಿಗಳಿಂದ ಜನರನ್ನು ರಕ್ಷಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿತು ಎಂದು ಆಸ್ಟ್ರೇಲಿಯಾದ ವಿದೇಶಾಂಗ ವ್ಯವಹಾರ ಮತ್ತು ವಾಣಿಜ್ಯ ಇಲಾಖೆಯ ಸೈಬರ್ ವ್ಯವಹಾರಗಳು ಮತ್ತು ನಿರ್ಣಾಯಕ ತಂತ್ರಜ್ಞಾನದ ರಾಯಭಾರಿ ಡಾ. ತೋಬಿಯಾಸ್ ಫೀಕಿನ್ ಹೇಳಿದರು.
ಕೋವಿಡ್ ಒಡ್ಡಿದ ಅಗ್ನಿಪರೀಕ್ಷೆಯನ್ನು ನಾವು ಯಶಸ್ವಿಯಾಗಿ ಎದುರಿಸಿದ್ದೇವೆ. ಈ ಸಂದರ್ಭವನ್ನೇ ಒಂದು ಅವಕಾಶವನ್ನಾಗಿ ಸ್ವೀಕರಿಸಿ, ಸೈಬರ್ ಮತ್ತು ಬಾಹ್ಯಾಕಾಶ ಕ್ಷೇತ್ರವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದೇವೆ. ಆರೋಗ್ಯ ಕ್ಷೇತ್ರದ ಅಗತ್ಯಗಳನ್ನು ಪೂರೈಸುವಲ್ಲಿ ಬಾಹ್ಯಾಕಾಶ ಚಟುವಟಿಕೆಗಳು ನಿರ್ಣಾಯಕ ಪಾತ್ರ ವಹಿಸಿವೆ ಎಂದರು.