ಬೆಂಗಳೂರು: ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ತಮ್ಮ ಏಳನೇ ಆಯವ್ಯಯದಲ್ಲಿ ಸಿಲಿಕಾನ್ ಸಿಟಿಯ ಸಮಗ್ರ ಅಭಿವೃದ್ಧಿಗೆ 8772 ಕೋಟಿ ರೂ. ಮೀಸಲಿಟ್ಟಿದ್ದಾರೆ.
ಈ ಸಾರಿ ಬಜೆಟ್ನಲ್ಲಿ ಬೆಂಗಳೂರಿನ ಸಿಲ್ಕ್‌ಬೋರ್ಡ್ ಜಂಕ್ಷನ್‌ನಿಂದ ಏರ್‌ಪೋರ್ಟ್‌ಗೆ 56 ಕಿ. ಮೀ. ಔಟರ್ ರಿಂಗ್ ರೋಡ್ ನಿರ್ಮಾಣಕ್ಕೆ ಸುಮಾರು 14,500 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. 1,500 ಬಿಎಂಟಿಸಿ ಬಸ್‌ಗಳ ಖರೀದಿಗೆ 600 ಕೋಟಿ ರೂ. ಅನುದಾನ ನೀಡಲಾಗಿದೆ. ರಾಜ್ಯದಲ್ಲಿ 2, 450 ಹೊಸ ಬಸ್ ಖರೀದಿಸಲಾಗುವುದು.
ಒಂದು ಲಕ್ಷ ಮಹಿಳಾ ಕಾರ್ಮಿಕರಿಗೆ ಉಚಿತ ಬಿಎಂಟಿಸಿ ಪಾಸ್ ನೀಡಲಾಗುವುದು. ಬೆಂಗಳೂರಿನಲ್ಲಿ ಫಿಲಂ ಸಿಟಿ ನಿರ್ಮಾಣಕ್ಕೆ 500 ಕೋಟಿ ರೂ. ಮೀಸಲಿಡಲಾಗಿದೆ. ವಿಮಾನ ನಿಲ್ದಾಣದ ಬಳಿ 100 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆ ನಿರ್ಮಾಣ ಮಾಡಲು ಸುಮಾರು 66 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.
ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆಯನ್ನು ಈ ಬಾರಿ ಬೆಂಗಳೂರಿಗೆ ಬಿಎಸ್ವೈ ಘೋಷಿಸಿದ್ದಾರೆ. ಮೆಟ್ರೋ ಮತ್ತು ಬಿಎಂಟಿಸಿ ನಿಲ್ದಾಣಗಳಿಗೆ ಸಂಪರ್ಕ ಸಾಧಿಸುವ ಸಲುವಾಗಿ ಎಲೆಕ್ಟ್ರಿಕ್ ಟ್ಯಾಕ್ಸಿ ಯೋಜನೆ ತರಲಾಗಿದೆ.
ನವನಗರೋತ್ತಾನ ಯೋಜನೆಗೆ 8344 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ. ಈ ಯೋಜನೆ ಮೂಲಕ ಸುತ್ತಮುತ್ತಲ 110 ಹಳ್ಳಿಗಳನ್ನು ಅಭಿವೃದ್ಧಿ ಪಡಿಸಲಾಗುವುದು.
ಬೆಂಗಳೂರಿನ ನಾಲ್ಕು ಕಡೆ ಹೊಸ ವಿದ್ಯುತ್ ಚಿತಾಗಾರ, ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ನಗರದ 24 ಕಡೆ ಮೇಲ್ಸೇತುವೆಗಳ ನಿರ್ಮಾಣ ಮಾಡುವುದಾಗಿ ಹಾಗೂ 4 ಕಡೆ ಕಲಾ ಮಂದಿರಗಳನ್ನು ಸ್ಥಾಪಿಸುವುದಾಗಿ ಘೋಷಿಸಲಾಗಿದೆ.
ಬೆಂಗಳೂರು ನವ ನಗರರೋತ್ತಾನ ಯೋಜನೆಯಡಿಯಲ್ಲಿ 8344 ಕೋಟಿ ರೂ. ಕಾಮಗಾರಿಗಳ ಅನುಷ್ಠಾನವಾಗಲಿವೆ. ಈ ಅನುದಾನಗಳಲ್ಲಿ 417 ಕೋಟಿ ರೂ. ಕೆರೆಗಳ ಅಭಿವೃದ್ಧಿಗೆ ಮೀಸಲು.
ಮಳೆ ನೀರುಗಾಲುವೆ ಅಭಿವೃದ್ಧಿಗೆ 200 ಕೋಟಿ ರೂ ಮೀಸಲು.110 ಹೊಸ ಹಳ್ಳಿಗಳಿಗೆ ನೀರಿನ ಸಂಪರ್ಕಕ್ಕೆ 20-21 ನೇ ಸಾಲಿನಲ್ಲಿ 500 ಕೋಟಿ ರೂ. ಮೀಸಲಿಡಲಾಗಿದೆ. ಬಿಡದಿಯಲ್ಲಿ ತ್ಯಾಜ್ಯದಿಂದ ವಿದ್ಯುತ್ ಘಟಕ ನಿರ್ಮಾಣಕ್ಕೆ 210 ಕೋಟಿ ರೂ. ಅನುದಾನ. 2020 ರಲ್ಲಿ ಕೆಂಗೇರಿವರೆಗೆ ಹಾಗೆ ಕನಕಪುರ ರಸ್ತೆಯ ಟೌನ್ ಷಿಪ್ ವರೆಗೆ 12.8 ಕಿ.ಮೀ ಮೆಟ್ರೋ ಸಂಚಾರ ಆರಂಭ ಮಾಡಲಾಗುವುದು.
ನಗರದಲ್ಲಿ ವಾಹನ ದಟ್ಟಣೆ ಇರುವ ಪ್ರದೇಶಗಳಲ್ಲಿ 190 ಕಿ.ಮೀ ರಸ್ತೆಯನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ಪ್ರಾಧಿಕಾರದಿಂದ 500 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು. ರಸ್ತೆ ಸುರಕ್ಷತಾ ನಿಧಿಗೆ 200 ಕೋಟಿ ರೂ. ಮೀಸಲಿಡಲಾಗಿದೆ. 2021 ರ ಅಂತ್ಯಕ್ಕೆ ಟಿ.ಜಿ. ಹಳ್ಳಿ ಯೋಜನೆಯಿಂದ ಬೆಂಗಳೂರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು 1000 ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಕಾವೇರಿ ಯೋಜನೆಯ ಐದನೇ ಹಂತಕ್ಕೆ 5,550 ಕೋಟಿ ರೂ. ವೆಚ್ಚದಲ್ಲಿ 2023 ಅಂತ್ಯಕ್ಕೆ 775 ದಶಲಕ್ಷ ನೀರು ತರಲು ಅನುದಾನ ನೀಡಲಾಗಿದೆ.