ಬೆಂಗಳೂರು: ಶುಕ್ರವಾರ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಯಡಿಯೂರಪ್ಪ, ಇಂದು ವಿಶ್ವಾಸಮತ ಯಾಚನೆ ಮಂಡಿಸಲಿದ್ದಾರೆ. ಸದನ ಆರಂಭಕ್ಕೂ ಮುನ್ನ ಮತ್ತೊಮ್ಮೆ ಬಿಎಸ್‌ವೈ ಶಾಸಕರ ಸಭೆ ಕರೆದಿದ್ದಾರೆ.
ಸದ್ಯ ಧವಳಗಿರಿ ನಿವಾಸದಲ್ಲಿರುವ ಸಿಎಂ ಬಿ ಎಸ್ ಯಡಿಯೂರಪ್ಪ, ಪಕ್ಷದ ಮುಖಂಡರ ಜೊತೆ ಮಾತುಕತೆ ನಡೆಸಿದ್ದಾರೆ. ಶಾಸಕ ಅಶ್ವಥ್ ನಾರಾಯಣ್, ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಸೇರಿದಂತೆ ಒಬ್ಬೊಬ್ಬರಾಗಿ ಬಿಎಸ್‌ವೈ ನಿವಾಸಕ್ಕೆ ಆಗಮಿಸುತ್ತಿದ್ದಾರೆ. ನಿನ್ನೆ ತಡ ರಾತ್ರಿ ಅತೃಪ್ತರು ಮುಂಬೈನಿಂದ ಬೆಂಗಳೂರಿಗೆ ಆಗಮಿಸಿದ್ದು, ಅಶ್ವತ್ಥ್ ನಾರಾಯಣ್ ಅವರು ಯಡಿಯೂರಪ್ಪ ಜೊತೆ ಮಹತ್ವದ ವಿಚಾರಗಳನ್ನು ಚರ್ಚಿಸುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ಸಿಎಂ ನಿವಾಸಕ್ಕೆ ತೆರಳಿದ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಮತ್ತು ಗುಪ್ತಚರ ವಿಭಾಗದ ಐಜಿ ಬಿ. ದಯಾನಂದ್ ಮಾತುಕತೆ ನಡೆಸಿದರು. ಈ ವೇಳೆ ರಾಜ್ಯ ರಾಜಕೀಯದ ಬೆಳವಣಿಗೆಗಳು, ಕಾನೂನು ಸುವ್ಯವಸ್ಥೆ ಸಂಬಂಧ ಗುಪ್ತ ವಾರ್ತೆ ವಿಭಾಗದಿಂದ ಸಿಎಂ ಮಾಹಿತಿ ಪಡೆದರು ಎಂದು ಹೇಳಲಾಗಿದೆ.
ಈಗಾಗಲೇ ಬಿಎಸ್‌ವೈ ಮನೆಗೆ ಬೇಬಿ ಮಠದ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಪೂಜಾ ಸಾಮಗ್ರಿಗಳ ಜೊತೆಗೆ ಆಗಮಿಸಿದ್ದಾರೆ.
ವಿಶ್ವಾಸಮತ ಸಾಬೀತಿಗೆ ಗರಿಗೆದರಿದ ಚಟುವಟಿಕೆ.. ರಹಸ್ಯ ತಾಣದಲ್ಲಿ ಶಾಸಕ ಹೆಚ್.ನಾಗೇಶ್.!
ಪಕ್ಷೇತರ ಶಾಸಕ ಹೆಚ್.ನಾಗೇಶ್ರನ್ನು ರಹಸ್ಯ ತಾಣದಲ್ಲಿ ಇರಿಸಿರುವ ಶಾಸಕ ಅಶ್ವತ್ಥ್ ನಾರಾಯಣ, ನೇರವಾಗಿ ಹೋಟೆಲಿಗೆ ಅಥವಾ ಸದನಕ್ಕೆ ಕರೆ ತರುವ ಬಗ್ಗೆ ಬಿಎಸ್‌ವೈ ಜೊತೆ ಚರ್ಚೆ ನಡೆಸಿದ್ದಾರಂತೆ. ಮುಳಬಾಗಿಲು ಶಾಸಕ ಹೆಚ್.ನಾಗೇಶ್ ಬಿಜೆಪಿಗೆ ಬೆಂಬಲ ಸೂಚಿಸಲಿರುವುದರಿಂದ ಬಿಜೆಪಿ ಶಾಸಕರ ಸಂಖ್ಯೆ 106ಕ್ಕೇರಲಿದೆ.
ಶಾಸಕರ ಜೊತೆ ಉಪಹಾರ ಕೂಟ :
10 ಗಂಟೆಗೆ ವಿಧಾನಸೌಧದಲ್ಲಿ ಶಾಸಕರ ಸಭೆ ನಡೆಯಲಿದ್ದು, ಯಡಿಯೂರಪ್ಪ ಸಂಜಯನಗರದ ಹನುಮಂತರಾಯಸ್ವಾಮಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಚಾನ್ಸರಿ ಪೆವಿಲಿಯನ್ ಹೋಟೆಲ್ಗೆ ತೆರಳಿ ತಮ್ಮ ಶಾಸಕರ ಜೊತೆ ಉಪಹಾರ ಸವಿಯಲಿದ್ದಾರೆ. ಅಲ್ಲಿಂದ ಶಾಸಕರ ಜೊತೆಗೆ ನೇರವಾಗಿ ವಿಧಾನಸೌಧಕ್ಕೆ ತೆರಳಲಿದ್ದಾರೆ. ವಿಧಾನಸೌಧದಲ್ಲಿ ಶಾಸಕಾಂಗ ಸಭೆ ನಂತರ ವಿಶ್ವಾಸಮತ ಯಾಚಿಸಲಿದ್ದಾರೆ.
ವಿಧಾನಸೌಧದ ಸುತ್ತ ಖಾಕಿ ಹೈ ಅಲರ್ಟ್ :
ಬಿಜೆಪಿ ವಿಶ್ವಾಸ ಮತಯಾಚನೆ ಮಾಡುವ ಹಿನ್ನೆಲೆ ವಿಧಾನಸೌಧದ ಸುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮಹತ್ತರ ಬೆಳವಣಿಗೆಗಳು ನಡೆಯುವ ಕಾರಣ ವಿಧಾನಸೌಧ , ವಿಕಾಸಸೌಧ, ರಾಜಭವನದ ಸುತ್ತಲೂ ಖಾಕಿ ಕಣ್ಗಾವಲು ಇಟ್ಟಿದೆ. ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ನೇತೃತ್ವದಲ್ಲಿ 7ಡಿಸಿಪಿ, ಎಸಿಪಿ, ಇನ್ಸ್ಪೆಕ್ಟರ್,ಕಾನ್ಸ್ಟೇಬಲ್, ಹೋಂ ಗಾರ್ಡ್, ಹೊಯ್ಸಳ, ಕೆಎಸ್ಆರ್ಪಿ, ವಾಟರ್ ಜೆಟ್ ಕಾರ್ಯ ನಿರ್ವಹಿಸಲಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.