ಕರ್ನಾಟಕ

karnataka

ETV Bharat / state

ಸ್ವಲ್ಪದರಲ್ಲೇ ನನ್ನ ಜೀವ ಉಳಿತು: ತುರ್ತು ಪರಿಸ್ಥಿತಿ ದಿನಗಳನ್ನ ಮೆಲುಕು ಹಾಕಿದ ಬಿಎಸ್​ವೈ!

ತುರ್ತು ಪರಿಸ್ಥಿತಿ ಸಂದರ್ಭದಲ್ಲಿನ ಕೆಲವು ಕರಾಳ ಘಟನೆಗಳನ್ನು ಹಂಚಿಕೊಂಡ ಮಾಜಿ ಮುಖ್ಯಮಂತ್ರಿ ಬಿ.ಎಸ್.​ ಯಡಿಯೂರಪ್ಪ, ಸ್ವಲ್ಪ ಹೆಚ್ಚು ಕಮ್ಮಿಯಾಗಿದ್ದರೂ ಬಳ್ಳಾರಿ ಜೈಲಿಂದ ಜೀವಂತವಾಗಿ ನಾನು ಬರುತ್ತಿರಲಿಲ್ಲ ಎಂದಿದ್ದಾರೆ.

ಕರಾಳ ದಿನಾಚರಣೆಗೆ ಚಾಲನೆ ನೀಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.​ ಯಡಿಯೂರಪ್ಪ

By

Published : Jun 25, 2019, 4:35 PM IST

ಬೆಂಗಳೂರು: ಬಳ್ಳಾರಿ ಜೈಲಿನ ಕೊಠಡಿ ಬಾಗಿಲು ಲಾಕ್ ಮಾಡಿಕೊಳ್ಳಲು ಒಂದು ಕ್ಷಣ ತಡಮಾಡಿದ್ರು ಜೈಲಿನಿಂದ ನಾನು ಜೀವಂತವಾಗಿ ಬರ್ತಾ ಇರಲಿಲ್ಲ ಎಂದು ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮೆಲುಕು‌ ಹಾಕಿದರು.

ಬಿಜೆಪಿ-ಕರ್ನಾಟಕ ಮತ್ತು ಲೋಕತಂತ್ರ ಸೇನಾನಿ ಆಕ್ಷನ್ ಕಮಿಟಿ - ಕರ್ನಾಟಕ ವತಿಯಿಂದ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ದೇಶದಲ್ಲಿ ಹೇರಿದ್ದ ತುರ್ತುಸ್ಥಿತಿ ಕರಾಳ ದಿನಾಚರಣೆ ನಡೆಸಲಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಭಾರತಾಂಬೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಯಡಿಯೂರಪ್ಪ, ತುರ್ತು ಪರಿಸ್ಥಿತಿ ಹೋರಾಟದ ವೇಳೆ ಮೊದಲು ನಾನು ಸಾಗರ ಜೈಲಿನಲ್ಲಿದ್ದೆ. ಬಳಿಕ ಬಳ್ಳಾರಿ ಜೈಲಿಗೆ ಹಾಕಿದರು. ಅಲ್ಲಿ ಊಟದ ವ್ಯವಸ್ಥೆಯಲ್ಲಿ ಅವ್ಯವಹಾರ ನಡೆಸಲಾಗಿತ್ತು. ಜೈಲರ್ ಜೊತೆ ಜೀವಾವಧಿ ಶಿಕ್ಷೆಗೆ‌ ಗುರಿಯಾದವರು ಕೈದಿಗಳಿಗೆ‌ ಕೊಡುವ ಆಹಾರದಲ್ಲಿ ಲೂಟಿ ಮಾಡುತ್ತಿದ್ದರು. ಜೈಲರ್ ಮಾಡಿದ ಅನ್ಯಾಯದ ವಿರುದ್ಧ ಜೈಲಿನಲ್ಲೇ ಹೋರಾಡಿದೆ. ಒಂದು ಕ್ಷಣ ಜೈಲು ಬಾಗಿಲು ಹಾಕಿಕೊಳ್ಳುವುದು ತಡವಾಗುದ್ದರೂ ನಾನು ಜೀವಂತ ಇರುತ್ತಿರಲಿಲ್ಲ. ಇದನ್ನು ನನ್ನ ಜೀವನದಲ್ಲಿ‌ ಮರೆಯಲು ಸಾಧ್ಯವಿಲ್ಲ ಎಂದರು.

ಅನೇಕ ಜನರನ್ನ ಜೈಲಿಗೆ ಹಾಕುವ ತಪ್ಪು ನಿರ್ಧಾರದ ಮೂಲಕ ಇಂದಿರಾ ಗಾಂಧಿ ಜನರ ಆಕ್ರೋಶಕ್ಕೆ ಗುರಿಯಾದರು. ಪ್ರಜಾತಂತ್ರಕ್ಕೆ ವಿರುದ್ಧವಾದ ಯಾವುದೇ ಸಿದ್ಧಾಂತ ಶಾಶ್ವಾತವಾಗಿ ಉಳಿಯಲ್ಲ. ಇದಕ್ಕೆ ಕಾಂಗ್ರೆಸ್​ನ ಸದ್ಯದ ದಯನೀಯ ಸ್ಥಿತಿ ನೋಡಬಹುದು. ಅಂದು ಇಡೀ ದೇಶದ ಘಟಾನುಘಟಿಗಳು ಸುಮ್ಮನೇ ಕೈ ಕಟ್ಟಿ ಕೂತ ಸಂದರ್ಭದಲ್ಲಿ ಆರ್.ಎಸ್​.ಎಸ್. ಕಾರ್ಯಕರ್ತರು ಅಂದು ಹೋರಾಡಿದರು. ಆರ್.ಎಸ್​.ಎಸ್.ನಂತಹ ಸಂಘಟನೆ ಇರದಿದ್ದರೆ ಪರಿಸ್ಥಿತಿ ಇನ್ನಷ್ಟು ಕರಾಳ ಆಗುತ್ತಿತ್ತು ಎಂದರು.

ಕರಾಳ ದಿನಾಚರಣೆಗೆ ಚಾಲನೆ ನೀಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.​ಯಡಿಯೂರಪ್ಪ

ತುರ್ತು ಪರಿಸ್ಥಿತಿ ಕಾರಣದಿಂದಲೇ ಈಗಲೂ ಕಾಂಗ್ರೆಸ್ ಈ ದುಸ್ಥಿತಿಗೆ ಬಂದಿದೆ. ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣವಾಗುವ ಪರಿಸ್ಥಿತಿ ಬಂದಿದೆ‌. ರಾಜ್ಯದಲ್ಲೂ ಒಳ್ಳೆಯ ದಿನಗಳು ಬಂದೇ ಬರುತ್ತವೆ. ರಾಜ್ಯ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನಡವಳಿಕೆಯನ್ನು ರಾಜ್ಯ, ದೇಶದ ಜನ ಗಮನಿಸುತ್ತಿದ್ದಾರೆ. ಭ್ರಷ್ಟ ಕಾಂಗ್ರೆಸ್​ಅನ್ನು ಕಿತ್ತೊಗೆಯುವುದು ನಿಶ್ಚಿತ. ಅಲ್ಲಿಯವರಗೆ ತಾಳ್ಮೆಯಿಂದ ಇರಬೇಕು ಎಂದರು.

ಕಾಂಗ್ರೆಸ್ ಬಗ್ಗೆ ಜನ ಯಾವ ರೀತಿ ಬೇಸತ್ತಿದ್ದಾರೆ, ಆಕ್ರೋಶಗೊಂಡಿದ್ದಾರೆ ಎನ್ನುವುದಕ್ಕೆ ಲೋಕಸಭಾ ಚುನಾವಣಾ ಫಲಿತಾಂಶ ನಿದರ್ಶನ. ದೇಶದ ಜನ, ರಾಜ್ಯದ ಜನ ಬಿಜೆಪಿ ಜೊತೆ ಇದ್ದಾರೆ. ನಾವು ಯಾವ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ರಾಜ್ಯದ ಜನ ಗಮನಿಸುತ್ತಿದ್ದಾರೆ. ಹಾಗಾಗಿ ಒಂದೊಂದು ಹೆಜ್ಜೆ ಇಡುವಾಗ ಎಚ್ಚರಿಕೆಯಿಂದ ಇಡುತ್ತಾ ಪ್ರಜಾತಂತ್ರ ವ್ಯವಸ್ಥೆಯನ್ನು ಉಳಿಸಬೇಕು. ಮತ್ತೊಮ್ಮೆ ಭ್ರಷ್ಟ ಕಾಂಗ್ರೆಸ್ ತಲೆಯೆತ್ತದಂತೆ ನೋಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ನಿರ್ಧಾರ ಮಾಡಿದಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮಾಡಿದ ನಮ್ಮ ಕಾರ್ಯಕರ್ತರಿಗೆ ನೆಮ್ಮದಿ ಸಿಗಲಿದೆ ಎಂದರು.

ತುರ್ತು ಪರಿಸ್ಥಿತಿಯಲ್ಲಿ ಹೋರಾಡಿದ ನಮ್ಮ ಕಾರ್ಯಕರ್ತರ ಪರಿಸ್ಥಿತಿ ಶೋಚನೀಯವಾಗಿದೆ. ಇವರಿಗೆಲ್ಲಾ ಸೂಕ್ತ ಕಾರ್ಯಕ್ರಮ ರೂಪಿಸುವ ಬೇಡಿಕೆ ಬಂದಿದೆ. ನಿಶ್ಚಿತವಾಗಿ ಪ್ರಧಾನಿ ಗಮನ ಹರಿಸಲಿದ್ದಾರೆ. ನಿಮ್ಮೆಲ್ಲರ ಆಶೀರ್ವಾದದಿಂದ ಒಳ್ಳೆಯ ಕಾಲ ಬರುತ್ತೆ. ಆಗ ನಾವು ಕೂಡ ಆ ಕಡೆ ವಿಶೇಷ ಗಮನ ಕೊಡೋಣ ಎಂದು ಭರವಸೆ ನೀಡಿದರು.

ಬಿಜೆಪಿ ವಕ್ತಾರ ಗೋ.ಮಧುಸೂಧನ್ ಮಾತನಾಡಿ, ತುರ್ತು ಪರಿಸ್ಥಿತಿಯಿಂದಾಗಿ ನಮಗೆ ಪ್ರಜಾಪ್ರಭುತ್ವದ ಮಹತ್ವ ಗೊತ್ತಾಯ್ತು. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದೇವೆ ಎಂದು ಹೇಳಿಕೊಂಡ ಕಾಂಗ್ರೆಸ್​ನ ಹಾಗೂ ಗಾಂಧಿ ಪರಿವಾರದ ಹೆಣ್ಣುಮಗಳು ತುರ್ತು ಪರಿಸ್ಥಿತಿ ಹೇರಿದ್ದಳು‌. ಬಾಂಗ್ಲಾ ವಿಮೋಚನಾ ಹೋರಾಟದಲ್ಲಿ ದುರ್ಗೆ ಎಂದು ಕರೆಸಿಕೊಂಡವಳು. ನಂತರ ಎರಡನೇ ವರ್ಷದಲ್ಲಿ ಭ್ರಷ್ಟಾಚಾರದ ಗಂಗೆಯಂತಾಗಿದ್ದಳು. ಅಂದು ಒಬ್ಬರು ಇಂದಿರಾ ಈಸ್ ಇಂಡಿಯಾ ಎಂದರು. ಇಂದು ಇಂದಿರಾ ಇಲ್ಲ. ಆದರೆ, ಇಂಡಿಯಾ ಇದೆ ಎಂದರು.

ನಮಸ್ತೇ ಸದಾ ವತ್ಸಲೇ, ವಂದೇ ಮಾತರಂ ಸ್ಫೂರ್ತಿ:

ಅಂದು ಆರ್.ಎಸ್​.ಎಸ್., ಸಂಘ ಪರಿವಾರದ ಕಾರ್ಯಕರ್ತರು ಹೋರಾಟ ಮಾಡದೇ ಇದ್ದರೆ ತುರ್ತು ಪರಿಸ್ಥಿತಿ ತೆಗೆಯುತ್ತಲೇ ಇರುತ್ತಿರಲಿಲ್ಲ. ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿ ಬಂಧಿತರಾದವರಲ್ಲಿ ಶೇ. 90ರಷ್ಟು ಆರ್.ಎಸ್​.ಎಸ್. ಕಾರ್ಯಕರ್ತರು ಇದ್ದರು. ಆಗ ಸಂವಿಧಾನ, ಡಾ. ಬಿ.ಆರ್.ಅಂಬೇಡ್ಕರ್ ಇವೆಲ್ಲಾ ನಮಗೆ ಸ್ಫೂರ್ತಿ ಅಲ್ಲವೇ ಅಲ್ಲ. ನಮಗೆ ಅಂದು ಸ್ಫೂರ್ತಿಯಾಗಿದ್ದು "ನಮಸ್ತೆ ಸದಾ ವತ್ಸಲೆ..." ಹಾಗೂ ವಂದೇ ಮಾತರಂ... ಎಂದರು.

ತುರ್ತು ಪರಿಸ್ಥಿತಿ ತೆಗೆದ ನಂತರ ಜನತಾಪಕ್ಷ ಅಧಿಕಾರಕ್ಕೆ ಬಂತು. ತುರ್ತು ಪರಿಸ್ಥಿತಿ ತೆಗೆಯಲು ಹೋರಾಟ ಮಾಡಿದ್ದು ಆರ್.ಎಸ್​.ಎಸ್. ಆದರೆ, ನಂತರ ಜನತಾ ಪರಿವಾರದಿಂದ ಆರ್.ಎಸ್.ಎಸ್.ಅನ್ನು ಹೊರ ಹಾಕಲಾಯ್ತು. ಇದು ಸಮಾಜವಾದಿಗಳ ಪಿತೂರಿ. ಮನಸ್ಸು ಮಾಡಿದ್ದರೆ ಅಟಲ್ ಬಿಹಾರಿ ವಾಜಪೇಯಿಯವರು ಅಂದೇ ಪ್ರಧಾನಿಯಾಗಬಹುದಿತ್ತು. ಅಂದು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದವರು ಜನ ಸಂಘದವರು. ಆದರೂ ವಾಜಪೇಯಿಯವರು ಬೇಸರ ಪಡಲಿಲ್ಲ. ಜನ ಸಂಘವನ್ನು‌ ಪರಿಸಮಾಪ್ತಿಗೊಳಿಸಿ ಬಿಜೆಪಿ ಕಟ್ಟಿದರು ಎಂದು ಹಿಂದಿನ ದಿನಗಳನ್ನು ಮೆಲುಕು ಹಾಕಿದರು.

ಇಂದಿರಾ ಮೇಲೆ ಬಾಂಬ್ ಹಾಕುತ್ತಿದ್ದರೋ ಏನೋ?

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾ ಗಾಂಧಿ ಮೈಸೂರಿಗೆ ಬಂದಿದ್ದರು‌. ಆಗ ಆರ್.ಎಸ್​.ಎಸ್. ಕಾರ್ಯಕರ್ತರು ಇಂದಿರಾ ಗಾಂಧಿಯವರ ಮುಖದ ಮೇಲೆ ಪಾಂಪ್ಲೆಟ್ ಎಸೆದಿದ್ದರು‌‌. ಅವರ ಕೈಯಲ್ಲಿ ಪಾಂಪ್ಲೆಟ್ ಬದಲು ಬಾಂಬ್ ಇದ್ದರೆ ನಿಶ್ಚಿತವಾಗಿ ಇಂದಿರಾ ಗಾಂಧಿಯವರ ಮೇಲೆ ಹಾಕುತ್ತಿದ್ದರೇನೋ? ಆದರೆ, ಸಂಘ ಹಿಂಸೆಯಲ್ಲಿ ನಂಬಿಕೆ ಇಡಲ್ಲ. ಅಹಿಂಸಾತ್ಮಕ ಹೋರಾಟ ಸಂಘ ಪರಿವಾರದ್ದಾಗಿತ್ತು ಎಂದರು.

ABOUT THE AUTHOR

...view details