ಕರ್ನಾಟಕ

karnataka

ETV Bharat / state

ಕೈಗಾರಿಕಾ ವಲಯಕ್ಕೆ 3 ಲಕ್ಷ ಕೋಟಿ ಆರ್ಥಿಕ ನೆರವು : ಕೇಂದ್ರದ ನಿರ್ಧಾರ ಸ್ವಾಗತಿಸಿದ ಸಿಎಂ

ಸಣ್ಣ, ಅತಿ ಸಣ್ಣ ಉದ್ಯಮಗಳಿಗೆ ಮೂರು ಲಕ್ಷ ಕೋಟಿ ಹಣಕಾಸು ನೆರವು ನೀಡಿದ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಘೋಷಣೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ವಾಗತಿಸಿದ್ದಾರೆ.

BSY reaction about 3 trillion financial package
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

By

Published : May 13, 2020, 7:19 PM IST

ಬೆಂಗಳೂರು:ನಿನ್ನೆ ಪ್ರಧಾನಿ ಮೋದಿ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದರು. ಇದಕ್ಕೆ ಅನುಗುಣವಾಗಿ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮೂರು ಲಕ್ಷ ಕೋಟಿ ಹಣಕಾಸು ನೆರವನ್ನು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಸಹಾಯ ಹಸ್ತ ಚಾಚಿದ್ದು ಶ್ಲಾಘನೀಯವಾಗಿದ್ದು ಇದನ್ನು ಸ್ವಾಗತಿಸುತ್ತಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಮೂರು ಲಕ್ಷ ಕೋಟಿ ಹಣಕಾಸು ಸಹಾಯ ಕೇವಲ ಆರ್ಥಿಕ ಸಹಾಯವಾಗಿರದೇ ದೇಶದ ಉದ್ಯಮಿಗಳಿಗೆ ಮತ್ತು ಕಾರ್ಮಿಕ ವರ್ಗಕ್ಕೆ ಆರ್ಥಿಕವಾಗಿ ಪುನಶ್ವೇತನಗೊಳ್ಳುವಲ್ಲಿ ವರದಾನವಾಗಲಿದೆ. ಇಂದಿನ ಆರ್ಥಿಕ ಪುನಶ್ವೇತನ, ಸಮಯೋಚಿತ ಮತ್ತು ವೈಜ್ಞಾನಿಕವಾಗಿದ್ದು, ಆರ್ಥಿಕ ನೈಪುಣ್ಯತೆಯಿಂದ ಕೂಡಿದೆ. ಎಂ.ಎಸ್.ಎಂ.ಇ.ಗಳಿಗೆ ಯಾವುದೇ ಗ್ಯಾರಂಟಿ ಇಲ್ಲದೇ ಸಾಲ ಯೋಜನೆ ಘೋಷಣೆ ತಕ್ಷಣ ಕೈಗಾರಿಕೆಗಳನ್ನು ಪುನರಾರಂಭಿಸಲು ಉತ್ತೇಜನಕಾರಿಯಾಗಿ ಪರಿಣಮಿಸುತ್ತದೆ ಎಂದು ಸಿಎಂ ಅಭಿಪ್ರಾಯಪಟ್ಟಿದ್ದಾರೆ.

ಮುಖ್ಯಮಂತ್ರಿ ಬಿಎಸ್​ವೈ ಪತ್ರಿಕಾ ಹೇಳಿಕೆ

ಈ ಹಣಕಾಸು ನೆರವು ದೇಶದ 45 ಲಕ್ಷ ಎಂ.ಎಸ್.ಎಂ.ಇ. (MSME)ಗಳಿಗೆ ಲಾಭವಾಗಲಿದೆ. ಇದರ ಜೊತೆಗೆ ರಾಜ್ಯದ ವಿದ್ಯುತ್ ಕಂಪನಿಗಳಿಗೆ 90 ಸಾವಿರ ಕೋಟಿ ಧನ ಸಹಾಯ, 50 ಸಾವಿರ ಕೋಟಿ ಆದಾಯ ತೆರಿಗೆ ಬಾಕಿ ವಾಪಸ್ ಮತ್ತು ತೆರಿಗೆ ವಿನಾಯಿತಿ, 6,750 ಕೋಟಿ ರೂ. ನೌಕರದಾರರ ಭವಿಷ್ಯ ನಿಧಿಗೆ ನೌಕರದಾರರ ಮತ್ತು ಉದ್ಯಮಿಗಳ ವಂತಿಗೆ ಪಾವತಿ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ 30 ಸಾವಿರ ಕೋಟಿ ಹಣಕಾಸು ಸಹಾಯ ಇವುಗಳು ಕೋವಿಡ್-19ರಿಂದ ತತ್ತರಿಸಿದ ಔದ್ಯೋಗಿಕ ವಲಯಕ್ಕೆ ಸಂಜೀವಿನಿಯಾಗಿ ಪರಿಣಮಿಸಲಿದೆ ಎಂದಿದ್ದಾರೆ.

ಇವತ್ತಿನ ವಿಶೇಷತೆ ಏನೆಂದರೆ, 200 ಕೋಟಿ ವರೆಗಿನ ಟೆಂಡರ್ ಪ್ರಕ್ರಿಯೆಯಲ್ಲಿ ಭಾರತೀಯ ಕಂಪನಿಗಳಿಗೆ ಮತ್ತು ಗುತ್ತಿಗೆದಾರರಿಗೆ ಮಾತ್ರ ಭಾಗವಹಿಸಲು ಅನುವು ಮಾಡಿಕೊಟ್ಟಿದ್ದು ಸ್ವದೇಶಿ ಕಂಪನಿಗಳು ಬೆಳೆಯುವಲ್ಲಿ ದೊಡ್ಡ ಪ್ರೇರಕ ಯೋಜನೆಯಾಗಲಿದೆ. ಕೋವಿಡ್-19ರಿಂದ ತತ್ತರಿಸಿದ ಜಗತ್ತಿನ ಯಾವುದೇ ದೇಶ ಔದ್ಯೋಗಿಕ ವಲಯಕ್ಕೆ ಇಂತಹ ಆರ್ಥಿಕ ಪುನಶ್ವೇತನ ಕಾರ್ಯಕ್ರಮವನ್ನು ಘೋಷಿಸಿಲ್ಲ ಎಂದರೆ ಅತಿಶಯೋಕ್ತಿಯಲ್ಲ. ಲಾಕ್​​ಡೌನ್ ವ್ಯವಸ್ಥೆಯಿಂದ ಹೊರಬಂದು ಜನತೆ ತಮ್ಮ ತಮ್ಮ ನಿತ್ಯದ ದುಡಿಮೆಯನ್ನು ಪ್ರಾರಂಭಿಸಲು ಪ್ರೇರೇಪಿಸಿದ ಮೊದಲ ದಿಟ್ಟ ಹೆಜ್ಜೆ ಇದಾಗಿದೆ ಎಂದು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.

ABOUT THE AUTHOR

...view details