ಬೆಂಗಳೂರು: ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಮುಕ್ತಾಯಗೊಂಡಿದ್ದು, ಸಭೆಯಲ್ಲಿ ನಾಳೆ ಬೆಳಗ್ಗೆ ಎಲ್ಲರೂ ಒಟ್ಟಾಗಿ ಹೋಗಿ ಡಿಸಿಎಂ ಲಕ್ಷ್ಮಣ್ ಸವದಿ ಪರ ಮತ ಚಲಾಯಿಸುವಂತೆ ಸೂಚನೆ ನೀಡಲಾಗಿದೆ.
ನಗರದ ಖಾಸಗಿ ಹೋಟೆಲ್ನಲ್ಲಿ ಸುಮಾರು ಅರ್ಧ ಗಂಟೆ ನಡೆದ ಸಿಎಂ ನೇತೃತ್ವದ ಶಾಸಕಾಂಗ ಸಭೆಯಲ್ಲಿ ನಾಳೆಯಿಂದ ಪ್ರಾರಂಭವಾಗುವ ಜಂಟಿ ಅಧಿವೇಶನಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ವಿಧಾನ ಪರಿಷತ್ ಉಪಚುನಾವಣೆ ಹಿನ್ನೆಲೆ ಸೋಮವಾರ ಬೆಳಗ್ಗೆ ಎಲ್ಲಾ ಶಾಸಕರು 8.30ಕ್ಕೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸೇರಬೇಕು. ಉಪಹಾರದ ನಂತರ ಎಲ್ಲರೂ ಒಟ್ಟಾಗಿ ತೆರಳಿ ಡಿಸಿಎಂ ಲಕ್ಷ್ಮಣ ಸವದಿ ಪರ ಮತ ಚಲಾಯಿಸಬೇಕು ಎಂದು ಸಿಎಂ ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೂಚಿಸಿದರು.
ಇದೇ ವೇಳೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಡಿಸಿಎಂ ಸವದಿ, ತನಗೆ ಮತ ಹಾಕುವಂತೆ ಶಾಸಕರಲ್ಲಿ ಮನವಿ ಮಾಡಿದರು. ಸದನದಲ್ಲಿ ಎಲ್ಲರೂ ಒಟ್ಟಾಗಿರಬೇಕು, ಯಾವುದೇ ಭಿನ್ನಾಭಿಪ್ರಾಯಕ್ಕೆ ಅವಕಾಶ ಮಾಡಿಕೊಡಬಾರದು. ಈ ಬಾರಿಯ ಬಜೆಟ್ ಕಠಿಣವಾಗಿರಲಿದೆ. ಪ್ರತಿಪಕ್ಷಗಳ ಟೀಕೆ, ಆರೋಪಗಳನ್ನು ಸಮರ್ಥವಾಗಿ ಎದುರಿಸಬೇಕು. ಸರ್ಕಾರದ ನಡೆಯನ್ನು ಬಲವಾಗಿ ಸಮರ್ಥಿಸಿಕೊಳ್ಳಬೇಕು ಎಂದು ಸಿಎಂ ನಿರ್ದೇಶನ ನೀಡಿದರು.