ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಮೂಡಲಪಾಳ್ಯ ವಾರ್ಡ್ನಲ್ಲಿ ಬಿಬಿಎಂಪಿ ವತಿಯಿಂದ ನಿರ್ಮಾಣ ಮಾಡಿದ "ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಸ್ಪರ್ಧಾತ್ಮಕ ಪರೀಕ್ಷೆಯ ಅಧ್ಯಯನ ಕೇಂದ್ರ", ಇ-ಲೈಬ್ರೆರಿ ಹಾಗೂ ಶಿವಕುಮಾರ ಸ್ವಾಮೀಜಿಯ ಕಂಚಿನ ಪುತ್ಥಳಿಯನ್ನು ಸಿಎಂ ಯಡಿಯೂರಪ್ಪ ಉದ್ಘಾಟಿಸಿದರು.
ಈ ಕಟ್ಟಡದಲ್ಲಿ ವ್ಯಾಯಾಮ ಶಾಲೆ, ಸಭಾಂಗಣವೂ ನಿರ್ಮಾಣವಾಗಿದೆ. ಒಟ್ಟು 15 ಕೋಟಿ ರೂ. ವೆಚ್ಚದಲ್ಲಿ ಜ್ಞಾನಸೌಧ ನಿರ್ಮಾಣ ಮಾಡಲಾಗಿದೆ.
ಇದೇ ವೇಳೆ ತಲಕಾವೇರಿ ಅಭಿವೃದ್ಧಿಗಾಗಿ ಬಿಬಿಎಂಪಿ ವತಿಯಿಂದ 1 ಕೋಟಿ ರೂಪಾಯಿ ಚೆಕ್ ಹಸ್ತಾಂತರಿಸಲಾಯಿತು.
ಮೂಡಲಪಾಳ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಅಧ್ಯಯನ ಕೇಂದ್ರ ಉದ್ಘಾಟಿಸಿದ ಬಿಎಸ್ವೈ ಉದ್ಘಾಟನೆ ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನಗರೋತ್ಥಾನ ಯೋಜನೆಯಡಿ ಬಿಬಿಎಂಪಿ ಒಂದು ರೂಪಾಯಿಯನ್ನೂ ವ್ಯರ್ಥ ಮಾಡದೆ ಕಟ್ಟಡ ನಿರ್ಮಾಣ ಮಾಡಿದೆ. ವಿದ್ಯಾರ್ಥಿಗಳು ಇದರ ಬಳಕೆ ಮಾಡಿಕೊಳ್ಳಬೇಕು. ಪ್ರತಿಭಾವಂತ ವಿದ್ಯಾರ್ಥಿಗಳು ಸರ್ಕಾರದಲ್ಲಿ ಸೇವೆ ಸಲ್ಲಿಸಲು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗಲು ಇದು ಒಳ್ಳೆಯ ಅವಕಾಶ. ಇನ್ನೆರಡು ತಿಂಗಳಲ್ಲಿ ಬೆಂಗಳೂರಿನ ಚಿತ್ರಣ ಬದಲಿಸುವ ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ದೊರೆಯಲಿದೆ ಎಂದರು.
ತುಮಕೂರು ಸಿದ್ಧಗಂಗಾ ಮಠದ, ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಮುಖ್ಯಮಂತ್ರಿಗಳ ಖಜಾನೆ ಖಾಲಿಯಾಗಿರ್ಬಹುದು. ಆದರೆ ನೀರಿನ ಖಜಾನೆ ತುಂಬಿದೆ. ರೈತರ ಬಾಳು ಹಸನು ಮಾಡಲು ಕಾರ್ಯಕ್ರಮ ರೂಪಿಸಿದ್ದಾರೆ ಎಂದರು.
ಸಚಿವ ವಿ.ಸೋಮಣ್ಣ ಮಾತನಾಡಿ, ಸಂಕಷ್ಟದ ಸಂದರ್ಭದಲ್ಲೂ ರಾಜ್ಯದ ರಕ್ಷಣೆ ಮಾಡಬಹುದು ಅನ್ನುವುದಕ್ಕೆ ಯಡಿಯೂರಪ್ಪ ಅವರೇ ಉದಾಹರಣೆ. ಗೋವಿಂದರಾಜನಗರಕ್ಕೆ ಒಂದು ವರ್ಷ ಎರಡು ತಿಂಗಳಲ್ಲಿ ಹತ್ತಾರು ಕೋಟಿ ರೂಪಾಯಿ ಅನುದಾನದ ಮೂಲಕ ವಿವಿಧ ಅಭಿವೃದ್ಧಿ ಕೆಲಸ ಮಾಡಲಾಗಿದೆ. ಎಲ್ಲರಿಗೂ ಸೂರು ನೀಡುವ ಕೆಲಸದಲ್ಲಿ ನಾವು ಭಾಗಿಯಾಗಿದ್ದೇವೆ. ಎಲ್ಲರಿಗೂ ಈ ಕಟ್ಟಡ ಜ್ಞಾನಸೌಧ ಆಗಲಿದೆ ಎಂದರು.