ಬೆಂಗಳೂರು: ಯಾವುದೇ ಒಡಕಿನ ಮಾತುಗಳಿಗೆ ಅವಕಾಶ ನೀಡದಂತೆ ಪಕ್ಷ ಸಂಘಟನೆಗೆ ನೂತನ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ಗೆ ಸಹಕಾರ ನೀಡುತ್ತೇವೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಸಂತ್ರಸ್ತರ ಪುನರ್ವಸತಿ ನಮಗೆ ದೊಡ್ಡ ಸವಾಲಾಗಿದೆ. ಇಂದು ಚಿಕ್ಕಮಗಳೂರಿಗೆ ತೆರಳಿ ಅತಿವೃಷ್ಟಿ ಹಾನಿ ಪರಿಶೀಲಿಸುತ್ತೇನೆ. ಸಂತ್ರಸ್ತರಿಗೆ ನೆರವು ನೀಡಬೇಕಿರುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದರು.
ರಾಜ್ಯದ ಪ್ರವಾಹ ಪರಿಸ್ಥಿತಿ ಬಗ್ಗೆ ಅಮಿತ್ ಶಾ ಹಾಗೂ ನಿರ್ಮಲಾ ಸೀತಾರಾಮನ್ ವೈಮಾನಿಕ ಸಮೀಕ್ಷೆ ಮಾಡಿದ್ದಾರೆ. ಕೇಂದ್ರದ ಅಧಿಕಾರಿಗಳ ತಂಡವೂ ಸಹ ಪರಿಸ್ಥಿತಿ ಪರಿಶೀಲಿಸುತ್ತಿದೆ. ಕೇಂದ್ರ ಸರ್ಕಾರದ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ದೊಡ್ಡ ಮಟ್ಟದ ಅನುದಾನ ಸಿಗುವ ನಿರೀಕ್ಷೆಯಿದೆ. ಸಾರ್ವಜನಿಕರು, ಕೈಗಾರಿಕೋದ್ಯಮಿಗಳು, ಸರ್ಕಾರಿ ನೌಕರರು ದೊಡ್ಡ ಮಟ್ಟದಲ್ಲಿ ಹಣಕಾಸು ಸಹಾಯ ಮಾಡಿದ್ದಾರೆ ಎಂದು ಸಿಎಂ ತಿಳಿಸಿದರು.
ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಒಂದು ತಿಂಗಳಲ್ಲಿ ಒಂದು ದಿನವೂ ವಿಶ್ರಾಂತಿ ಪಡೆದಿಲ್ಲ. ಈಗ ಒಂದು ಒಳ್ಳೆಯ ಸಚಿವ ಸಂಪುಟ ನನ್ನ ಜತೆಗಿದೆ. ಮೂರು ವರ್ಷ ಹತ್ತು ತಿಂಗಳು ಅವಿರತ ಶ್ರಮಿಸಿ ಪಕ್ಷ ಸಂಘಟಿಸಬೇಕಿದೆ. ನಾವು ಉತ್ತಮ ಆಡಳಿತ ನಡೆಸುತ್ತೇವೆ. ನಂತರ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆದ್ದು ಪೂರ್ಣ ಬಹುಮತದೊಡನೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ಯಾವುದೇ ಒಡಕಿನ ಮಾತುಗಳಿಗೆ ಅವಕಾಶ ನೀಡದಂತೆ ಪಕ್ಷ ಸಂಘಟನೆಗೆ ನಳೀನ್ ಕುಮಾರ ಕಟೀಲ್ಗೆ ಸಹಕಾರ ಕೊಡುತ್ತೇವೆ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಮುಖಂಡರು ಕೇಂದ್ರದಲ್ಲಿ ಪ್ರತಿಪಕ್ಷ ನಾಯಕರಾಗುವುದಿರಲಿ, ರಾಷ್ಟ್ರದಲ್ಲಿ ನಾಯಕತ್ವವೇ ಇಲ್ಲದ ತಬ್ಬಲಿಗಳಂತಾಡುತ್ತಿದ್ದಾರೆ. ಕಾಂಗ್ರೆಸ್ ಮುಕ್ತ ಭಾರತ ಕನಸು ಬಹುತೇಕ ಈಡೇರಿದೆ ಎಂದು ಇದೇ ವೇಳೆ ಬಿಎಸ್ವೈ ಕೈ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.