ಕರ್ನಾಟಕ

karnataka

ETV Bharat / state

ಅತೃಪ್ತರ ರಾಜೀನಾಮೆ ಅಂಗೀಕಾರ ಆಗೋವರೆಗೂ ಬಿಎಸ್​ವೈ ಪ್ರಮಾಣ ಸ್ವೀಕರಿಸಲ್ವಾ?

ನಿನ್ನೆಯಷ್ಟೇ ಮೈತ್ರಿ ಸರ್ಕಾರ ಉರುಳಿದ್ದು, ಗುರುವಾರದಂದು ಬಿಎಸ್​ವೈ ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ ಎಂದೇ ಹೇಳಲಾಗುತ್ತಿತ್ತು. ಆದರೆ, ಮೈತ್ರಿ ಪಕ್ಷದ ಬಾಂಬ್​​ಗೆ ಎಚ್ಚೆತ್ತುಕೊಂಡಿರುವ ಬಿಎಸ್​ವೈ ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಅತೃಪ್ತರ ರಾಜೀನಾಮೆ ಇತ್ಯರ್ಥವಾಗಲಿ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

By

Published : Jul 24, 2019, 2:45 PM IST

ಬಿಎಸ್​ವೈ

ಬೆಂಗಳೂರು:ಈ ವಾರದಲ್ಲೇ ಬಿಜೆಪಿಗೆ ಕಂಠಕ‌ ಎದುರಾಗಲಿದೆ ಎನ್ನುವ ಮೈತ್ರಿ ಪಕ್ಷದ ಬಾಂಬ್​​ಗೆ ಎಚ್ಚೆತ್ತುಕೊಂಡಿರುವ ಬಿಜೆಪಿ, ದೋಸ್ತಿ ತಂತ್ರಕ್ಕೆ ರಣತಂತ್ರ ರೂಪಿಸಿದೆ. ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಅತೃಪ್ತರ ರಾಜೀನಾಮೆ ಇತ್ಯರ್ಥಕ್ಕೆ ಮುಂದಾಗಿದೆ.

ತಾಂತ್ರಿಕ ವಿಚಾರ ಮುಂದಿಟ್ಟುಕೊಂಡು ಬಿಎಸ್‌ವೈ ಹಣಿಯಲು ಕಾಂಗ್ರೆಸ್ ತಂತ್ರ ರೂಪಿಸಿದ್ದು, ಇದಕ್ಕೆ ತಿರುಗೇಟು ನೀಡಲು ಬಿಜೆಪಿ ಪ್ರತಿತಂತ್ರ ರೂಪಿಸಿದೆ. ಅತೃಪ್ತ ಶಾಸಕರ ರಾಜೀನಾಮೆ ಅಂಗೀಕರಿಸಲು ಸ್ಪೀಕರ್ ಗೆ ಮನವಿ ಮಾಡಿದೆ. ತಾಂತ್ರಿಕ ವಿಚಾರದಿಂದ ತನಗೆ ಮುಜುಗರ ಮಾಡುವ ಮೈತ್ರಿ ಪ್ಲಾನ್ ಅರಿತ ಯಡಿಯೂರಪ್ಪ, ಅತೃಪ್ತರ ರಾಜೀನಾಮೆ ಅಂಗೀಕಾರ ಆಗುವ ತನಕ ಕಾದು ನೋಡಲು ಮುಂದಾಗಿದ್ದಾರೆ. ಹೀಗಾಗಿ ತಕ್ಷಣಕ್ಕೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲು ಮುಂದಾಗುತ್ತಲ್ಲ ಎನ್ನಲಾಗಿದ್ದು, ಈ ಸಂಬಂಧ ಹೈಕಮಾಂಡ್ ನಾಯಕರಿಗೂ ಸಂದೇಶ ರವಾನೆ ಮಾಡಿದ್ದಾರೆ ಎಂದು ಬಿಜೆಪಿ ಆಪ್ತ ಮೂಲಗಳಿಂದ‌ ತಿಳಿದುಬಂದಿದೆ. ಇಂದು ಸಂಜೆಯೊಳಗೆ ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.‌ನಡ್ಡಾ ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದ್ದು, ನಡ್ಡಾ ಜೊತೆಗೆ ಮತ್ತೊಮ್ಮೆ ಸಮಾಲೋಚನೆ ನಡೆಸಿ ಬಳಿಕ ಶಾಸಕಾಂಗ ಪಕ್ಷದ ಸಭೆ ನಡೆಸಲಿದ್ದು, ಅಲ್ಲೇ ಎಲ್ಲವನ್ನೂ ನಿರ್ಧಾರ ಮಾಡಲು ಮಾಸ್ಟರ್ ಪ್ಲಾನ್ ರೂಪಿಸಿದೆ ಎನ್ನಲಾಗುತ್ತಿದೆ.

ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ ಸರ್ಕಾರ ರಚಿಸಿದ್ದ ಯಡಿಯೂರಪ್ಪ ಕೇವಲ ಮೂರು ದಿನಕ್ಕೆ ರಾಜೀನಾಮೆ ನೀಡಿ ಸರ್ಕಾರದಿಂದ ಹೊರ ನಡೆದಿದ್ದರು. ಆಗಲೂ ಮ್ಯಾಜಿಕ್ ನಂಬರ್ 113 ಆಗಿತ್ತು. ಈಗ ಕೂಡ ಅತೃಪ್ತರ ರಾಜೀನಾಮೆ ಇನ್ನೂ ಅಂಗೀಕಾರ ಆಗಿಲ್ಲ, ಶಾಸಕರ ಅನರ್ಹತೆ ಅರ್ಜಿಯೂ‌ ಇತ್ಯರ್ಥವಾಗಿಲ್ಲ. ಹಾಗಾಗಿ ಈಗಲೂ ಮ್ಯಾಜಿಕ್ ನಂಬರ್ 113. ಹಿಂದೇ ಇದೇ ಮ್ಯಾಜಿಕ್ ನಂಬರ್ ತಲುಪಲು ವಿಫಲರಾಗಿದ್ದ ಬಿಎಸ್​ವೈ ಈಗ ಮತ್ತೆ ಪ್ರಮಾಣವಚನ ಸ್ವೀಕಾರ ಮಾಡಿದರೆ ಅಂತಹ ಸನ್ನಿವೇಶ ಮರುಕಳಿಸಬಹುದು. ಹಾಗಾಗಿ ಮತ್ತೊಮ್ಮೆ ಮೈತ್ರಿ ಪಕ್ಷಗಳಿಗೆ ಆಹಾರವಾಗದಿರಲು ಬಿಎಸ್​ವೈ ನಿರ್ಧರಿಸಿದ್ದು, ಪ್ರಮಾಣ ವಚನ ಸ್ವೀಕಾರವನ್ನೇ ಮುಂದೂಡುವ ಚಿಂತನೆ ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

For All Latest Updates

TAGGED:

ABOUT THE AUTHOR

...view details