ಬೆಂಗಳೂರು:ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮೊಮ್ಮಗಳು ಡಾ.ಸೌಂದರ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಕೋಣೆಯ ಸ್ಥಳ ಮಹಜರು ಪ್ರಕ್ರಿಯೆ ಇಂದು ಹೈಗ್ರೌಂಡ್ಸ್ ಇನ್ ಸ್ಪೆಕ್ಟರ್ ರಫಿಕ್ ನೇತೃತ್ವದಲ್ಲಿ ನಡೆಯಿತು.
ಡಾ. ಸೌಂದರ್ಯ ಪತಿ ಡಾ.ನೀರಜ್ ಅವರು ಹಾಲು ತುಪ್ಪ ಕಾರ್ಯದ ನಿಮಿತ್ತ ಕಲ್ಪವೃಕ್ಷ ಫಾರ್ಮ್ ಹೌಸ್ ನಲ್ಲಿದ್ದರು. ನಂತರ ಅಪಾರ್ಟ್ಮೆಂಟ್ಗೆ ಬಂದ ಕೂಡಲೇ ಪ್ರಾಥಮಿಕ ವಿಚಾರಣೆ ನಡೆಸಿದ್ದಾರೆ. ಹೈಗ್ರೌಂಡ್ಸ್ ಪೊಲೀಸರಿಗೆ ಕಂಪ್ಲೀಟ್ ಪೋಸ್ಟ್ ಮಾರ್ಟಮ್ ರಿಪೋರ್ಟ್ ಕೂಡ ಕೈಸೇರಲಿದೆ.
ನನ್ನ ಪತ್ನಿ ಡಾ.ಸೌಂದರ್ಯ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂಬುದು ಈ ತನಕ ನನಗೆ ತಿಳಿಯುತ್ತಿಲ್ಲ. ಆದರೆ ನಾವಿಬ್ಬರೂ ತುಂಬಾ ಅನ್ಯೋನ್ಯವಾಗಿದ್ದೆವು, ಗಲಾಟೆ ಜಗಳ ಯಾವುದೂ ಇರಲಿಲ್ಲ. ನನ್ನ ಹೆಂಡತಿ ಕಿಯಾ ಕಾರು ಬೇಕೆಂದು ಕೇಳಿದಾಗ ಕಳೆದ ತಿಂಗಳು ಬಯಸಿದ ಕಾರನ್ನೇ ಉಡುಗೊರೆಯಾಗಿ ಕೊಟ್ಟಿದ್ದೆ ಎಂದು ಡಾ. ನೀರಜ್ ಪೊಲೀಸರ ಮುಂದೆ ತಿಳಿಸಿದ್ದಾರೆ ಎನ್ನುವ ಮಾಹಿತಿಯನ್ನ ಪೊಲೀಸ್ ಮೂಲಗಳು ತಿಳಿಸಿವೆ.
ಮದುವೆಗೆ ಮುನ್ನವೇ ಪರಿಚಯವಿತ್ತು. ಇಬ್ಬರಲ್ಲಿ ಒಳ್ಳೆಯ ಸ್ನೇಹವಿತ್ತು. 2018 ರಲ್ಲಿ ಎರಡು ಮನೆಯವರ ಸಮ್ಮತಿ ಮೇರೆಗೆ ಮದುವೆಯಾಗಿತ್ತು. ಮದುವೆ ನಂತರವೂ ಆಕೆ ಹೆಚ್ಚಿನ ಸಮಯವನ್ನು ತನ್ನ ತವರು ಮನೆಯಲ್ಲಿ ಕಳೆದಳು. ತರುವಾಯ ಬೌರಿಂಗ್ ಆಸ್ಪತ್ರೆಗೆ ಕೆಲಸಕ್ಕೆ ಸೇರಿದಳು. ನಾನು ರಾಮಯ್ಯ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದೆ. ಇಬ್ಬರಲ್ಲಿ ಯಾವುದೇ ಅಂತಹ ಮನಸ್ತಾಪ ಇರಲಿಲ್ಲ. ನನ್ನ ಹೆಂಡತಿ ಯಾವ ಕಾರಣಕ್ಕೆ ಆತ್ಮಹತ್ಯೆಗೆ ಶರಣಾದಳು ಎಂಬ ಖಚಿತ ಕಾರಣ ನನಗೆ ತಿಳಿಯುತ್ತಿಲ್ಲ ಎಂದು ಡಾ.ನೀರಜ್ ಪೊಲೀಸರಿಗೆ ವಿವರ ನೀಡಿದ್ದಾರೆ ಎನ್ನಲಾಗುತ್ತಿದೆ.