ಕರ್ನಾಟಕ

karnataka

ETV Bharat / state

ಕೇಂದ್ರಕ್ಕೂ ಮೊದಲೇ ಲಾಕ್​ಡೌನ್, ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿತ್ತು ಬಿಎಸ್​ವೈ ಸರ್ಕಾರ.. - Bangalore covid Hospital

ವೈದ್ಯಕೀಯ ಶಿಕ್ಷಣ ಇಲಾಖೆಯ 15 ಸ್ವಾಯತ್ತ ವೈದ್ಯಕೀಯ ಕಾಲೇಜುಗಳು ಮತ್ತು ಒಂದು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯನ್ನು ಕೋವಿಡ್ ಚಿಕಿತ್ಸಾ ಕೇಂದ್ರವನ್ನಾಗಿ ಘೋಷಣೆ ಮಾಡಿದ್ದು ಇಲ್ಲಿ ಕೊರೊನಾ ಲ್ಯಾಬ್ ಸ್ಥಾಪಿಸಲಾಗಿದೆ. ಅವಶ್ಯಕತೆ ಇರುವ ರೋಗಿಗಳಿಗೆ ಪ್ಲಾಸ್ಮಾ ತೆರಪಿ ಚಿಕಿತ್ಸೆ ನೀಡಲಾಗುತ್ತಿದೆ..

BSY government announces lockdown, special economic package Before center did same
ಕೇಂದ್ರಕ್ಕೂ ಮೊದಲೇ ಲಾಕ್​ಡೌನ್, ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿತ್ತು ಬಿಎಸ್​ವೈ ಸರ್ಕಾರ..

By

Published : Jul 25, 2020, 5:45 PM IST

ಬೆಂಗಳೂರು :ಕೋವಿಡ್-19 ನಿರ್ವಹಣೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರ ಸರ್ಕಾರಕ್ಕೂ ಮೊದಲೇ ಕೆಲ ನಿರ್ಧಾರಗಳನ್ನು ಕೈಗೊಂಡಿದೆ. ಕರ್ನಾಟಕವನ್ನೇ ಕೇಂದ್ರ ಅನುಸರಿಸುವ ರೀತಿಯ ಕೆಲ ನಿರ್ಧಾರ ದೇಶದ ಗಮನ ಸೆಳೆದಿವೆ. ಆರಂಭದ 3 ತಿಂಗಳು ಸಂಪೂರ್ಣ ಹಿಡಿತ ಸಾಧಿಸಿದ್ದ ರಾಜ್ಯ ಈಗ ಕೊರೊನಾ ಮೇಲಿನ ನಿಯಂತ್ರಣ ಕಳೆದುಕೊಳ್ಳುತ್ತಿದೆ.

ಮಾರ್ಚ್‌ 8ರಂದು ರಾಜ್ಯದಲ್ಲಿ ಮೊದಲ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಯಿತು. ಆಗ ರಾಜ್ಯದಲ್ಲಿ ವಿಧಾನಮಂಡಲ ಅಧಿವೇಶನ ನಡೆಯುತ್ತಿತ್ತು. ಪರಿಸ್ಥಿತಿಯ ಗಂಭೀರತೆ ಅರಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೂ ಮೊದಲೇ ಮಾರ್ಚ್ 13ರಂದು ಕೆಂಪು ವಲಯದ ಜಿಲ್ಲೆಗಳಲ್ಲಿ ಲಾಕ್​ಡೌನ್ ಘೋಷಣೆ ಮಾಡಿತು. ಅದಾಗಿ ಎರಡು ವಾರದ ನಂತರ ಕೇಂದ್ರ ಸರ್ಕಾರ ಭಾರತ್ ಲಾಕ್​​ಡೌನ್ ಘೋಷಣೆ ಮಾಡಿತು. ಅಚ್ಚರಿ ಅಂದರೆ ಕೇಂದ್ರದ ನಿರ್ಧಾರಕ್ಕೂ 2 ದಿನ ಮೊದಲು ಬೆಂಗಳೂರು ಲಾಕ್​ಡೌನ್​​ಗೆ ಸರ್ಕಾರ ನಿರ್ಧಾರ ಕೈಗೊಂಡಿತ್ತು. ಕೇಂದ್ರದ ಘೋಷಣೆ ಹಿನ್ನೆಲೆ ಆ ದಿನಾಂಕದಿಂದ ಲಾಕ್​ಡೌನ್ ಜಾರಿಗೊಳಿಸಿತು. ನಂತರ ಆರ್ಥಿಕ ಪ್ಯಾಕೇಜ್ ವಿಷಯದಲ್ಲಿಯೂ ಕೂಡ ಕೇಂದ್ರ ಸರ್ಕಾರಕ್ಕಿಂತ ರಾಜ್ಯವೇ ಮುಂದಾಲೋಚನೆ ಮಾಡಿ ಪ್ಯಾಕೇಜ್ ಪ್ರಕಟಿಸಿತ್ತು.

ರಾಜ್ಯ ಸರ್ಕಾರದ ಒಂದು ವರ್ಷದ ಸಾಧನೆ ಬಿಚ್ಚಿಟ್ಟ ಡಿಸಿಎಂ..
ಆರ್ಥಿಕ ಪ್ಯಾಕೇಜ್ ವಿವರ :ಲಾಕ್​ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೊಳಗಾದ ಕಾರ್ಮಿಕರು ಕೃಷಿಕರು ಕೈಗಾರಿಕೋದ್ಯಮಿಗಳು ಹೀಗೆ ವಿವಿಧ ವಲಯಗಳಿಗೆ 2,272 ಕೋಟಿಯ ಮೂರು ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಯಿತು. ಮೇ 6ರಂದು ಹೂವು ಬೆಳಗಾರರಿಗೆ ನೆರವಾಗಲು ಹೆಕ್ಟೇರಿಗೆ 25 ಸಾವಿರ ಪರಿಹಾರ, ಪಾರಂಪರಿಕ ವೃತ್ತಿನಿರತ 2,30,000 ಕ್ಷೌರಿಕರು ಮತ್ತು 60,000 ಮಡಿವಾಳರಿಗೆ 7,75,000 ಟ್ಯಾಕ್ಸಿ ಚಾಲಕರು ಮತ್ತು ಆಟೋ ಚಾಲಕರಿಗೆ ತಲಾ 5 ಸಾವಿರ ರೂ.ಗಳ ವಿತರಣೆ ಮಾಡುವ 1,610 ಕೋಟಿ ಮೊತ್ತದ ಮೊದಲ ಪರಿಹಾರದ ಪ್ಯಾಕೇಜ್ ಘೋಷಣೆ ಮಾಡಲಾಯಿತು.

ಮೇ 14 ರಂದು ಹಣ್ಣು ಮತ್ತು ತರಕಾರಿ ಬೆಳೆಗಾರರು ಹೆಕ್ಟೇರ್​​ಗೆ ಗರಿಷ್ಠ 15,000 ರೂ. ಗಳಂತೆ ಒಟ್ಟು 137 ಕೋಟಿ ರೂ.ಗಳ ಪರಿಹಾರ, ವಿದ್ಯುತ್​​​​​ ಚಾಲಿತ ಮಗ್ಗದ ಘಟಕಗಳಲ್ಲಿ ಕೆಲಸ ಮಾಡುತ್ತಿರುವ 1.25 ಲಕ್ಷ ಕೆಲಸಗಾರರಿಗೆ ಒಂದು ಬಾರಿಗೆ 2 ಸಾವಿರದಂತೆ 25 ಕೋಟಿ ಪರಿಹಾರ ಸೇರಿ 162 ಕೋಟಿ ರೂ. ಮೊತ್ತದ 2ನೇ ಪ್ಯಾಕೇಜ್ ಘೋಷಣೆ ಮಾಡಲಾಯಿತು.

ಮೇ 15ರಂದು ಲಾಕ್​​ಡೌನ್ ಸಂಕಷ್ಟದಲ್ಲಿ ಸಿಲುಕಿದ ಮೆಕ್ಕೆಜೋಳ ಬೆಳೆದಿರುವ 10 ಲಕ್ಷ ರೈತರಿಗೆ ಅನುಕೂಲವಾಗಲು ತಲಾ 5 ಸಾವಿರ ರೂ.ಗಳ ಪರಿಹಾರ, ನೂರು ಕೋಟಿ ರೂ.ಗಳ 3ನೇ ಪ್ಯಾಕೇಜ್ ಘೋಷಿಸಲಾಯಿತು.

42,500 ಆಶಾ ಕಾರ್ಯಕರ್ತೆಯರಿಗೆ ತಲಾ 3,000 ರೂ.ಗಳಂತೆ 12 ಕೋಟಿ ಮೊತ್ತದ ಒಂದು ಬಾರಿಯ ಪ್ರೋತ್ಸಾಹಧನವನ್ನು ಆಯಾ ಜಿಲ್ಲೆಯ ಸಹಕಾರ ಸಂಘಗಳ ಸಹಕಾರದಿಂದ ಕಾರ್ಯಕರ್ತರಿಗೆ ವಿಸ್ತರಿಸಲು ಕ್ರಮ ಕೈಗೊಳ್ಳುವ ಜೊತೆಗೆ ಪ್ರತಿ ತಿಂಗಳು ಹೆಚ್ಚುವರಿಯಾಗಿ 1 ಸಾವಿರ ರೂ. ಕೋವಿಡ್ ಪ್ರೋತ್ಸಾಹ ಧನ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ.

ವೈದ್ಯಕೀಯ ಶಿಕ್ಷಣ ಇಲಾಖೆಯ 15 ಸ್ವಾಯತ್ತ ವೈದ್ಯಕೀಯ ಕಾಲೇಜುಗಳು ಮತ್ತು ಒಂದು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯನ್ನು ಕೋವಿಡ್ ಚಿಕಿತ್ಸಾ ಕೇಂದ್ರವನ್ನಾಗಿ ಘೋಷಣೆ ಮಾಡಿದ್ದು ಇಲ್ಲಿ ಕೊರೊನಾ ಲ್ಯಾಬ್ ಸ್ಥಾಪಿಸಲಾಗಿದೆ. ಅವಶ್ಯಕತೆ ಇರುವ ರೋಗಿಗಳಿಗೆ ಪ್ಲಾಸ್ಮಾ ತೆರಪಿ ಚಿಕಿತ್ಸೆ ನೀಡಲಾಗುತ್ತಿದೆ.

ಕಾರ್ಮಿಕ ಇಲಾಖೆ ಅಡಿ ಬರುವ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ 5,000 ರೂ. ಪರಿಹಾರದಂತೆ 782.52 ಕೋಟಿ ಸಹಾಯಧನ ವಿತರಿಸಲಾಗಿದೆ. ವಸತಿ ಸೌಲಭ್ಯ ಮತ್ತು ಊಟವನ್ನು ಒದಗಿಸಲಾಗಿದೆ. 84 ಲಕ್ಷ ಸಿದ್ಧಪಡಿಸಿದ ಆಹಾರ ಪಾಕೇಟ್‌ ವಿತರಿಸಲಾಗಿದೆ. ಕೇಂದ್ರ ಸರ್ಕಾರ ಕೋವಿಡ್ ವಿಮೆಯಿಂದ ಹೊರಗಿಟ್ಟಿದ್ದ ಪೊಲೀಸರು ಹಾಗೂ ಆಶಾ ಕಾರ್ಯಕರ್ತೆಯರನ್ನು ಫ್ರಂಟ್‌ಲೈನ್ ಕೊರೊನಾ ವಾರಿಯರ್ಸ್‌ ಎಂದು ಘೋಷಿಸಿ 30 ಲಕ್ಷ ರೂ.ಗಳ ರಾಜ್ಯ ಸರ್ಕಾರದ ಕೋವಿಡ್ ವಿಮಾ ವ್ಯಾಪ್ತಿಗೆ ಒಳಪಡಿಸಿ ಆದೇಶ ಹೊರಡಿಸಲಾಗಿದೆ.

ಲಾಕ್​ಡೌನ್ ನಂತರ ತವರಿಗೆ ಮರಳುವ ಕಾರ್ಮಿಕರ ಅನುಕೂಲಕ್ಕಾಗಿ ಬಸ್ ಹಾಗೂ ರೈಲುಗಳ ವ್ಯವಸ್ಥೆ ಕಲ್ಪಿಸಲಾಯಿತು.‌ ಸಾಮಾಜಿಕ ಅಂತರದ ನಿಯಮದಂತೆ ವ್ಯವಸ್ಥೆ ಮಾಡಲಾಯಿತು. ಆದರೆ, ಟಿಕೇಟ್ ದರದಲ್ಲಿ ಹೆಷ್ಚಳ ಮಾಡಿದ್ದು, ಸಾಕಷ್ಟು ವಿವಾದಕ್ಕೆ ಕಾರಣವಾಯಿತು. ಸಾಕಷ್ಟು ಕಾರ್ಮಿಕರು ಟಿಕೇಟ್​​ಗೂ ಹಣವಿಲ್ಲ ಎಂದು ಪರದಾಡುವ ಸನ್ನಿವೇಶ ಹಾಗೂ ಕಾಂಗ್ರೆಸ್​ನಿಂದ ಪ್ರಯಾಣ ವೆಚ್ಚ ಭರಿಸುವ ಹಿನ್ನೆಲೆ ಸರ್ಕಾರವೇ ಅಧಿಕೃತವಾಗಿ ಉಚಿತ ಪ್ರಯಾಣದ ಘೋಷಣೆ ಮಾಡಿತು.

ನಂತರ ರಾಜ್ಯದಿಂದ ಹೊರ ರಾಜ್ಯಕ್ಕೆ ಶ್ರಮಿಕ್ ರೈಲುಗಳು ಹಾಗೂ ರಾಜ್ಯದ ಒಳಗೆ ಕೆಎಸ್ಆರ್​​ಟಿಸಿ ಬಸ್​ಗಳು ಉಚಿತವಾಗಿ ಸೇವೆ ನೀಡಿದವು. ದೂರದ ಪ್ರಯಾಣಿಕರಿಗೆ ಊಟ,ತಿಂಡಿ,ನೀರಿನ ವ್ಯವಸ್ಥೆ ಉಚಿತವಾಗಿ ಮಾಡಲಾಯಿತು. ಎಂಎಸ್ಎಂಇ ವಲಯಕ್ಕೆ ವಿದ್ಯುತ್ ಶುಲ್ಕದಲ್ಲಿ ನಿಗಧಿತ ಶುಲ್ಕ ಪಾವತಿಗೆ ವಿನಾಯಿತಿ, ಬಿಲ್ ಪಾವತಿಗೆ ದಂಡ ರಹಿತ ಕಾಲಾವಕಾಶ,ಸಂಪರ್ಕ ಕಡಿತದಿಂದ ವಿನಾಯಿತಿ ನೀಡಲಾಗಿದೆ.

ಕೊರೊನಾ ಕೋಮು ಸಾಮರಸ್ಯ ಕದಡದಂತೆ ಮುನ್ನೆಚ್ಚರಿಕೆ :ಆರಂಭದಲ್ಲಿ ರಾಜ್ಯದಲ್ಲಿ ತಬ್ಲಿಘಿಗಳಿಗೆ‌ ಹೆಚ್ಚಾಗಿ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ತಬ್ಲಿಘಿಗಳಿಂದಲೇ ಕೊರೊನಾ ಹರಡುತ್ತಿದೆ ಎನ್ನುವ ಮಾತುಗಳು ಹರಿದಾಡಿದವು. ಒಂದು ರೀತಿ ಕೋಮುಸಾಮರಸ್ಯಕ್ಕೆ ಧಕ್ಕೆಯಾಗುವ ಸನ್ನಿವೇಶ ನಿರ್ಮಾಣವಾಗುವ ಸನ್ನಿವೇಶವಿತ್ತು. ಈ ವೇಳೆ ಸ್ವತಃ ಸಿಎಂ ಯಡಿಯೂರಪ್ಪ ಕೋಮುಸಾಮರಸ್ಯ ಕಾಪಾಡುವ ಹೆಜ್ಜೆ ಇರಿಸಿದ್ರು, ಜಾತಿ, ಧರ್ಮದ ಬಣ್ಣ ಹಚ್ಚುವುದು ಬೇಡ ಎಲ್ಲರೂ ಸರ್ಕಾರದ ಜೊತ ಸಹಕರಿಸಿ ಎನ್ನುವ ಸಂದೇಶ ರವಾನಿಸಿದರು. ಎಲ್ಲ ಧರ್ಮದ ಧಾರ್ಮಿಕ ಮುಖಂಡರು, ರಾಜಕೀಯ ನಾಯಕರ ಜೊತೆ ಮಾತುಕತೆ ನಡೆಸಿ ಎಚ್ಚರಿಕೆಯ ಹೆಜ್ಜೆ ಇಟ್ಟು ಶಾಂತಿಯುತ ಲಾಕ್​ಡೌನ್ ಮುಗಿಸುವಲ್ಲಿ ಸಫಲರಾದರು.

ಉಚಿತ ಪಡಿತರ :ಅನ್ನಭಾಗ್ಯ ಯೋಜನೆಯಡಿ ನವೆಂಬರ್​​ವರೆಗೂ ಉಚಿತ ಪಡಿತರ ವಿತರಣೆ ಘೋಷಿಸಲಾಗಿದೆ. ಕೇಂದ್ರದ ಸಹಕಾರದೊಂದಿಗೆ ರಾಜ್ಯ ಸರ್ಕಾರ ಪಡಿತರ ಚೀಟಿ ಇಲ್ಲದ ಬಡವರಿಗೂ ಉಚಿತ ಪಡಿತರ ವಿತರಣೆ ಮಾಡುವ ಮೂಲಕ ಯಾರೊಬ್ಬರೂ ಹಸಿವಿನಿಂದ ಬಳಲದಂತೆ ಎಚ್ಚರಿಕೆ ವಹಿಸಿದೆ.

ಉಚಿತ ಚಿಕಿತ್ಸೆ :ಎಲ್ಲಾ ಜಿಲ್ಲಾಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಿ ಉಚಿತವಾಗಿ ಕೊರೊನಾ ತಪಾಸಣೆ ಹಾಗೂ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರ ಸಂಖ್ಯೆ ಹೆಚ್ಚಳವಾದ ನಂತರ ಖಾಸಗಿ ಆಸ್ಪತ್ರೆಗಳಿಗೂ ಚಿಕಿತ್ಸೆಗೆ ಅನುಮತಿ ನೀಡಿದ್ದು ಸರ್ಕಾರವೇ ದರ ನಿಗದಿಪಡಿಸಿದೆ. ಶೇ.50ರಷ್ಟು ಬೆಡ್​ಗಳನ್ನು ಸರ್ಕಾರಕ್ಕೆ ಕೊಡುವಂತೆ ಸೂಚಿಸಲಾಗಿದೆ.

ಪ್ರಧಾನಿ ಮೋದಿ ಮೆಚ್ಚುಗೆ :ರಾಜ್ಯದಲ್ಲಿನ ಕೊರೊನಾ ನಿರ್ವಹಣೆಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬೆಂಗಳೂರನ್ನು ಮಾದರಿ ನಗರ ಎಂದು ಬಣ್ಣಿಸಿ ಕೋವಿಡ್-19 ನಿರ್ವಹಣೆಯಲ್ಲಿ ಕರ್ನಾಟಕವನ್ನು ಅನುಸರಿಸಿ ಎಂದು ಕರೆ ನೀಡಿದ್ದರು. ಜೂನ್ ಮಧ್ಯಭಾಗದವರೆಗೂ ಅಷ್ಟರಮಟ್ಟಿಗೆ ಕೊರೊನಾವನ್ನು ಹಿಡಿತದಲ್ಲಿ ಇಟ್ಟುಕೊಳ್ಳುವಲ್ಲಿ ಕರ್ನಾಟಕ ಸಫಲವಾಗಿತ್ತು. ಆದರೆ, ಕಳೆದ ಒಂದು ತಿಂಗಳಿನಿಂದ ಎಲ್ಲವೂ ಬದಲಾಗುತ್ತಿದೆ. ಕೊರೊನಾ ನಿಧಾನವಾಗಿ ರಾಜ್ಯ ಸರ್ಕಾರದ ಕೈಜಾರುತ್ತಿರುವುದು ಸ್ಪಷ್ಟವಾಗಿದೆ.

ABOUT THE AUTHOR

...view details