ಬೆಂಗಳೂರು: ಉತ್ತರಾಖಂಡ್ದಲ್ಲಿ ಸಂಭವಿಸಿರುವ ದುರ್ಘಟನೆ ತೀವ್ರ ಆಘಾತವನ್ನುಂಟು ಮಾಡಿದೆ. ಬಾಧಿತ ಪ್ರದೇಶಗಳಲ್ಲಿರುವ ಜನರ ಸುರಕ್ಷತೆಗಾಗಿ ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ಉತ್ತರಾಖಂಡ್ನಲ್ಲಿ ಉಂಟಾಗಿರುವ ಹಿಮ ಪ್ರವಾಹ ಪರಿಸ್ಥಿತಿ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಸಿಎಂ ಯಡಿಯೂರಪ್ಪ, ಆದಷ್ಟು ಬೇಗ ಪರಿಸ್ಥಿತಿ ಸಹಜ ಸ್ಥಿತಿಗೆ ಬರಲಿ ಎಂದು ಪ್ರಾರ್ಥಿಸಿದ್ದಾರೆ.
ಉತ್ತರಾಖಂಡ್ನಲ್ಲಿ ಹಿಮನದಿ ಪ್ರವಾಹ: ಘಟನೆಗೆ ಆತಂಕ ವ್ಯಕ್ತಪಡಿಸಿದ ಸಿಎಂ, ಮಾಜಿ ಸಿಎಂ
ಉತ್ತರಾಖಂಡ್ ರಾಜ್ಯದ ಚಮೋಲಿ ಜಿಲ್ಲೆಯ ತಪೋವನ್ ಪ್ರದೇಶದ ಧೌಲಿಗಂಗಾ ಹಿಮನದಿಯಲ್ಲಿ ದಿಢೀರ್ ಪ್ರವಾಹ ಸೃಷ್ಟಿಯಾಗಿ ಅಪಾರ ಹಾನಿ ಸಂಭವಿಸಿದ್ದು, ಘಟನೆ ಬಗ್ಗೆ ಸಿಎಂ ಯಡಿಯೂರಪ್ಪ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿ ಮರುಕ ವ್ಯಕ್ತಪಡಿಸಿದ್ದಾರೆ.
ಹಿಮ ಸ್ಫೋಟದಿಂದಾಗಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಹಿಮ ಸ್ಫೋಟದಿಂದಾಗಿ ಉತ್ತರಾಖಂಡ್ನಲ್ಲಿ ಪ್ರವಾಹ ಆಗಿರುವುದು ದುರದೃಷ್ಟಕರ. ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ ಮತ್ತು ಕಡಿಮೆ ಪ್ರಮಾಣದಲ್ಲಿ ಹಾನಿ ಆಗಿದೆ ಎಂದು ಭಾವಿಸಿದ್ದೇನೆ. ರಾಜ್ಯ ಆದಷ್ಟು ಬೇಗ ಸಹಜ ಸ್ಥಿತಿಗೆ ಮರಳಲಿ ಎಂದು ಪ್ರಾರ್ಥಿಸುತ್ತೇನೆ ಮತ್ತು ಈ ದುರಂತದಿಂದಾಗಿ ಆತಂಕಕ್ಕೊಳಗಾಗಿರುವ ಉತ್ತರಾಖಂಡ್ ರಾಜ್ಯದ ಜನ ಧೈರ್ಯ ತಂದುಕೊಳ್ಳಲು ಎಂದು ಈ ಮೂಲಕ ಆಶಿಸುತ್ತೇನೆ ಎಂದಿದ್ದಾರೆ.
ಉತ್ತರಾಖಂಡ್ ರಾಜ್ಯದ ಚಮೋಲಿ ಜಿಲ್ಲೆಯ ತಪೋವನ್ ಪ್ರದೇಶದಲ್ಲಿ ಈ ದುರಂತ ನಡೆದಿದ್ದು, ಹಿಮಪಾತ ಸಂಭವಿಸಿದ ಪರಿಣಾಮ ಧೌಲಿಗಂಗಾ ನದಿಯಲ್ಲಿ ದಿಢೀರ್ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿ ನೂರಾರು ಮಂದಿ ಕೊಚ್ಚಿ ಹೋಗಿದ್ದಾರೆ. ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಹಾನಿ ಉಂಟಾಗಿದ್ದು, ಇಡೀ ರಾಷ್ಟ್ರವೇ ಇಲ್ಲಿನ ಅನಾಹುತದ ಬಗ್ಗೆ ಮರುಗಿದೆ. ರಾಜ್ಯ ಕಾಂಗ್ರೆಸ್ ನಾಯಕರು ಕೂಡ ಇಂಥದೊಂದು ಪರಿಸ್ಥಿತಿಯಿಂದ ಉತ್ತರಾಖಂಡ್ ರಾಜ್ಯ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.