ಬೆಂಗಳೂರು: ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮದುವೆ ಸಮಾರಂಭವೊಂದರಲ್ಲಿ ಮುಖಾಮುಖಿಯಾಗಿದ್ದಾರೆ. ಈ ಸನ್ನಿವೇಶ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.
ಮದ್ವೆ ಕಾರ್ಯಕ್ರಮದಲ್ಲಿ ಬಿಎಸ್‌ವೈ, ಹೆಚ್ಡಿಕೆ ಮುಖಾಮುಖಿ: ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ?
ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮದುವೆ ಸಮಾರಂಭವೊಂದರಲ್ಲಿ ಮುಖಾಮುಖಿಯಾಗಿದ್ದಾರೆ.
ಶ್ರೀಮತಿ ವಸುಂಧರ ಮತ್ತು ರಾಜ ಭಗವಾನ್ರವರ ಪುತ್ರಿಯ ಮದುವೆ ಕಾರ್ಯಕ್ರಮದಲ್ಲಿ ಉಭಯ ನಾಯಕರು ಭಾಗಿಯಾಗಿದ್ದರು. ಅನರ್ಹ ಶಾಸಕ ಎಂ.ಟಿ.ಬಿ. ನಾಗರಾಜ್ ಆಹ್ವಾನದ ಮೇರೆಗೆ ಬಿ.ಎಸ್.ವೈ ಮತ್ತು ಹೆಚ್ಡಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಹಾಲಿ ಸಿಎಂ ಹಾಗೂ ಮಾಜಿ ಸಿಎಂ ಮದುವೆ ಮನೆಯಲ್ಲಿ ಮುಖಾಮುಖಿಯಾಗಿ ನಗು ನಗುತ್ತಲೇ ಪರಸ್ಪರ ಹಾಸ್ತಲಾಘವ ಮಾಡಿ ಉಭಯ ಕುಶಲೋಪರಿ ನಡೆಸಿದರು. ನಂತರದಲ್ಲಿ ವಧುವರರಿಗೆ ಶುಭಾಶಯ ತಿಳಿಸಿ ಸ್ವಲ್ಪ ಸಮಯ ಮಾತುಕತೆಯೂ ನಡೆಸಿದರು.
ಇತ್ತೀಚೆಗಿನ ಕೆಲ ದಿನಗಳಲ್ಲಿ ಯಡಿಯೂರಪ್ಪ ಹಾಗು ರಾಜ್ಯ ಸರ್ಕಾರದ ಬಗ್ಗೆ ಸಾಫ್ಟ್ ಕಾರ್ನರ್ ತೋರಿದ್ದ ಕುಮಾರಸ್ವಾಮಿ, ಬಿಜೆಪಿ ಸರ್ಕಾರ ಬೀಳಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದರು. ಈ ಹೇಳಿಕೆಯ ಮೂಲಕ ರಾಜ್ಯ ರಾಜಕೀಯ ವಲಯದಲ್ಲಿ ಮಿಂಚಿನ ಸಂಚಲನ ಮೂಡಿಸಿದ್ದರು. ಇದರ ಬೆನ್ನಲ್ಲೇ ಸಿಎಂ ಬಿಎಸ್‌ವೈ ಆಪ್ತ ಲೆಹರ್ ಸಿಂಗ್, ಕುಮಾರಸ್ವಾಮಿ ನಿವಾಸಕ್ಕೆ ತೆರಳಿ, ಮಾತುಕತೆ ನಡೆಸಿದ್ದರು. ಇದೀಗ ಈ ಇಬ್ಬರೂ ನಾಯಕರು ಮುಖಾಮುಖಿಯಾಗಿರುವುದು ಮುಂದಿನ ರಾಜಕೀಯ ಬದಲಾವಣೆ ಸಾಧ್ಯತೆಗಳಿಗೆ ಪುಷ್ಠಿ ನೀಡಿದೆ.