ಕರ್ನಾಟಕ

karnataka

ETV Bharat / state

ಬಿಎಸ್​ವೈ ಸಂಧಾನ ಸಕ್ಸಸ್... ಪ್ರಚಾರಕ್ಕೆ ಅಶೋಕ್ ಗ್ರೀನ್ ಸಿಗ್ನಲ್! - ಅಶೋಕ್

ಮೋದಿಯವರನ್ನು ಮತ್ತೆ ಪ್ರಧಾನಿಯಾಗಿ ಮಾಡಬೇಕು. ಹಾಗಾಗಿ ಬೆಂಗಳೂರು ದಕ್ಷಿಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಪ್ರಚಾರ ಮಾಡುತ್ತೇವೆ. ತೇಜಸ್ವಿನಿ ಅನಂತಕುಮಾರ್ ಅವರಿಗೆ ಅನ್ಯಾಯವಾಗಿದೆ. ಆದರೂ ಪಕ್ಷ ಮೊದಲು, ಹಾಗಾಗಿ ಅವರನ್ನೂ ಸಮಾಧಾನ ಪಡಿಸುವ ಪ್ರಯತ್ನ ಮಾಡುತ್ತೇವೆ ಎಂದರು.

ಆರ್​ ಅಶೋಕ್

By

Published : Mar 29, 2019, 3:16 PM IST

ಬೆಂಗಳೂರು:ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ನಂತರದಲ್ಲಿ ಉದ್ಭವಿಸಿರುವ ಅಸಮಾಧಾನ ಶಮನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮುಂದಾಗಿದ್ದಾರೆ. ಮುನಿಸಿಕೊಂಡಿದ್ದ ನಾಯಕರನ್ನು ಕರೆದು ಮಾತನಾಡುತ್ತಿದ್ದು, ಮಾಜಿ ಡಿಸಿಎಂ ಆರ್.ಅಶೋಕ್ ಅವರ ಮನವೊಲಿಕೆ ಬಹುತೇಕ ಪೂರ್ಣಗೊಂಡಿದೆ.

ಹೌದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ಸಂಧಾನ ಸಭೆ‌ ನಡೆಸಲಾಯಿತು. ಮಾಜಿ ಡಿಸಿಎಂ ಆರ್. ಅಶೋಕ್ ಅವರನ್ನು ಕರೆಸಿಕೊಂಡು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಬಂಧ ಮಾತುಕತೆ ನಡೆಸಲಾಯಿತು. ಟಿಕೆಟ್ ಹಂಚಿಕೆ‌ ಸಂಬಂಧ ಮುನಿಸಿಕೊಂಡಿರುವ ಅಶೋಕ್ ಅವರನ್ನು ಸಮಾಧಾನ ಪಡಿಸಲು ಯಡಿಯೂರಪ್ಪ ಯತ್ನಿಸಿದರು.

ಆರ್​ ಅಶೋಕ್

ಹೈಕಮಾಂಡ್ ತೀರ್ಮಾನ ಪ್ರಶ್ನಿಸಲು ಸಾಧ್ಯವಿಲ್ಲ. ಏನಾಗಿದೆ ಎಂದು ನಂತರ ನೋಡೋಣ, ಮೊದಲು ಅಭ್ಯರ್ಥಿ ಗೆಲ್ಲಿಸುವ ಕೆಲಸ‌ ಮಾಡೋಣ. ಮೋದಿಗೆ ಮತ್ತೊಮ್ಮೆ ಕೈ ಜೋಡಿಸೋಣ ಎಂದು ಸಲಹೆ ನೀಡಿದರು.

ಯಶಸ್ವಿಯಾದ ಸಂಧಾನ:

ಸುದೀರ್ಘ ಮಾತುಕತೆ ನಂತರ ಯಡಿಯೂರಪ್ಪ ಸಂಧಾನ ಯಶಸ್ವಿಯಾಗಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಲು ಆರ್.ಅಶೋಕ್ ಸಮ್ಮತಿ ನೀಡಿದ್ದು, ಇಂದಿನಿಂದಲೇ ಸಮಾಜದ ವಿವಿಧ ವರ್ಗದ ಪ್ರಮುಖರ ಸಭೆಗಳನ್ನು ನಡೆಸುವುದಾಗಿ ಅಶೋಕ್ ಭರವಸೆ ನೀಡಿದ್ದಾರೆ. ಇಂದು ಸಂಜೆ ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ಪ್ರಮುಖರ ಸಭೆ ಕರೆದು ಅವರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಪ್ರಕಟಿಸುವುದಾಗಿ ತಿಳಿಸಿದ್ದಾರೆ.

ಯಡಿಯೂರಪ್ಪ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ನಿನ್ನೆ ಬಿಜೆಪಿ ಉಸ್ತುವಾರಿ ಮುರುಳೀಧರರಾವ್ ಹಾಗೂ ಪಕ್ಷದ ಅಭ್ಯರ್ಥಿ ತೇಜಸ್ವಿ ಸೂರ್ಯ ಬಂದು ಭೇಟಿಯಾಗಿದ್ದರು. ಪಕ್ಷ ಮೊದಲು, ವ್ಯಕ್ತಿ ನಂತರ. ನರೇಂದ್ರ ಮೋದಿಯವರೇ ನಮಗೆ ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿ, ಮೋದಿಯವರನ್ನು ಮತ್ತೆ ಪ್ರಧಾನಿಯಾಗಿ ಮಾಡಬೇಕು. ಹಾಗಾಗಿ ಬೆಂಗಳೂರು ದಕ್ಷಿಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಪ್ರಚಾರ ಮಾಡುತ್ತೇವೆ. ತೇಜಸ್ವಿನಿ ಅನಂತಕುಮಾರ್ ಅವರಿಗೆ ಅನ್ಯಾಯವಾಗಿದೆ. ಆದರೂ ಪಕ್ಷ ಮೊದಲು, ಹಾಗಾಗಿ ಅವರನ್ನೂ ಸಮಾಧಾನ ಪಡಿಸುವ ಪ್ರಯತ್ನ ಮಾಡುತ್ತೇವೆ ಎಂದರು.

ರಾಜ್ಯದ ಏಳು‌ ಸ್ಥಳಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಏಪ್ರಿಲ್ 8 ರಂದು ಮೈಸೂರು ಮತ್ತು ಚಿತ್ರದುರ್ಗದಲ್ಲಿ ಪ್ರಧಾನಿಯವರ ಚುನಾವಣಾ ಪ್ರಚಾರ ನಿಗದಿಯಾಗಿದೆ. ಉಳಿದಂತೆ ಬೆಂಗಳೂರು, ತುಮಕೂರು, ಉಡುಪಿ, ವಿಜಯಪುರ, ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಪ್ರಧಾನಿ ಮೋದಿಯವರ ಚುನಾವಣಾ ರ್ಯಾಲಿ ಏರ್ಪಡಿಸಲು ನಿರ್ಧರಿಸಲಾಗಿದೆ ಎಂದು ಅಶೋಕ್​ ಮಾಹಿತಿ ನೀಡಿದರು.

ABOUT THE AUTHOR

...view details