ಬೆಂಗಳೂರು: ರಾಜಕೀಯ ಪಕ್ಷದಲ್ಲಿ ಅಸಮಾಧಾನಗಳು ಸಹಜ ಅದಕ್ಕಾಗಿ ಪಕ್ಷದ ಜೊತೆ ಅಂತರ ಕಾಯ್ದುಕೊಳ್ಳುವುದು ಸರಿಯಲ್ಲ. ಸಮಸ್ಯೆಗಳನ್ನು ಸರಿಪಡಿಸೋಣ, ಪಕ್ಷದ ಕಾರ್ಯಕ್ರಮಗಳಿಂದ ದೂರ ಉಳಿಯಬೇಡಿ ಎಂದು ಯಶವಂತಪುರ ಕ್ಷೇತ್ರದ ಶಾಸಕ ಎಸ್ ಟಿ ಸೋಮಶೇಖರ್ ಅವರಿಗೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಲಹೆ ನೀಡಿದ್ದಾರೆ.
ಪಕ್ಷದಲ್ಲಿ ಶಾಸಕ ಎಸ್ ಟಿ ಸೋಮಶೇಖರ್ ಮುನಿಸು ವಿಚಾರ ಸಂಬಂಧ ತಮ್ಮ ನಿವಾಸಕ್ಕೆ ಬರುವಂತೆ ಯಡಿಯೂರಪ್ಪ ನೀಡಿದ್ದ ಬುಲಾವ್ ಹಿನ್ನೆಲೆಯಲ್ಲಿ ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿ ನಿವಾಸಕ್ಕೆ ಶಾಸಕ ಎಸ್ ಟಿ ಸೋಮಶೇಖರ್ ಆಗಮಿಸಿದರು. ತಮಗಿರುವ ಅಸಮಾಧಾನದ ಕುರಿತಾಗಿ ಯಡಿಯೂರಪ್ಪ ಜೊತೆ ಮಾತುಕತೆ ನಡೆಸಿದರು. ಕ್ಷೇತ್ರದಲ್ಲಿ ಸ್ವಪಕ್ಷೀಯರಿಂದಲೇ ಸಮಸ್ಯೆಯಾಗುತ್ತಿದ್ದರೂ ಸರಿಪಡಿಸುತ್ತಿಲ್ಲ ಎನ್ನುವ ಅಸಮಾಧಾನ ಹೊರಹಾಕಿದರು. ಬಿಜೆಪಿ ತೊರೆಯುವ ಆಲೋಚನೆ ಇಲ್ಲದೇ ಇದ್ದರೂ ಕೆಲವರು ಪಕ್ಷದಿಂದ ಹೋಗಬಹುದು ಎನ್ನುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.
ಸೋಮಶೇಖರ್ಗೆ ಬಿಎಸ್ವೈ ಸೂಚನೆ ಏನು? :ಸಮಸ್ಯೆ ಆಲಿಸಿದ ಯಡಿಯೂರಪ್ಪ ರಾಜಕೀಯ ಕ್ಷೇತ್ರದಲ್ಲಿ ಸಣ್ಣಪುಟ್ಟ ಅಸಮಾಧಾನಗಳು ಸಹಜ, ಸಮಸ್ಯೆಗಳನ್ನು ಪರಿಹರಿಸಲಾಗುತ್ತದೆ. ಗೌರವದಿಂದ ಕರೆಸಿಕೊಂಡ ನಿಮ್ಮನ್ನು ಗೌರವದಿಂದಲೇ ನಡೆಸಿಕೊಳ್ಳಲಿದ್ದೇವೆ. ಪಕ್ಷದಿಂದ ದೂರ ಉಳಿಯದೇ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ, ಸಮಸ್ಯೆಗಳನ್ನೆಲ್ಲ ಪರಿಹರಿಸುತ್ತೇವೆ ಎಂದು ಯಡಿಯೂರಪ್ಪ ಸಲಹೆ ನೀಡಿದ್ದಾರೆ. ನಾಳಿನ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳುವಂತೆ ಸೋಮಶೇಖರ್ಗೆ ಬಿಎಸ್ವೈ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಇದೆ.