ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ಪಕ್ಷದ ನಾಯಕ ಹೆಚ್ಡಿ ಕುಮಾರಸ್ವಾಮಿ ಮಾಡುತ್ತಿರುವ ಆರೋಪಗಳನ್ನು ನಾನು ಸ್ವಾಗತಿಸುತ್ತೇನೆ. ಕುಮಾರಸ್ವಾಮಿ ಅವರಿಗೆ ನಮ್ಮ ಪೂರ್ಣ ಬೆಂಬಲ ಇದೆ. ಕುಮಾರಸ್ವಾಮಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಟ ಮಾಡುತ್ತೇವೆ ಎಂದು ಹೆಚ್ಡಿಕೆ ಹೇಳಿಕೆಗಳನ್ನು ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ಸಮರ್ಥಿಸಿಕೊಂಡಿದ್ದಾರೆ.
ಡಾಲರ್ಸ್ ಕಾಲೋನಿ ನಿವಾಸ ಧವಳಗಿರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಮಾಡುತ್ತಿರುವ ಆರೋಪಗಳನ್ನು ನಾನು ಸ್ವಾಗತಿಸುತ್ತೇನೆ. ಕುಮಾರಸ್ವಾಮಿ ಬಹಳ ಜವಾಬ್ದಾರಿಯಿಂದ ಮಾತನಾಡುತ್ತಿದ್ದಾರೆ. ಅವರಿಗೆ ನಮ್ಮ ಪೂರ್ಣ ಬೆಂಬಲ ಇದೆ. ಸರಿಯಾದ ಮಾಹಿತಿ ಇಟ್ಟುಕೊಂಡೇ ಅವರು ಮಾತನಾಡುತ್ತಿದ್ದಾರೆ. ಹಾಗಾಗಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಟ ಮಾಡುತ್ತೇವೆ ಎಂದು ಕುಮಾರಸ್ವಾಮಿ ಪರ ಬಿಎಸ್ವೈ ಮಾತನಾಡಿದರು.
ಕಾಂಗ್ರೆಸ್ನವರು ಕೊಟ್ಟ ಐದು ಭರವಸೆಗಳನ್ನು ಷರತ್ತಿಲ್ಲದೇ ಕಾರ್ಯರೂಪಕ್ಕೆ ತರಬೇಕು. ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸಹಿ ಮಾಡಿಕೊಟ್ಟ ಗ್ಯಾರಂಟಿ ಜಾರಿ ಮಾಡಲಿ. ಇವತ್ತೊಂದೇ ದಿನ ಸಂಜೆ 5 ಗಂಟೆವರೆಗೂ ಪ್ರತಿಭಟನೆ ಮಾಡುತ್ತೇವೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಲಿ. ಗ್ಯಾರಂಟಿ ಯೋಜನೆ ಜಾರಿ ಮಾಡಬೇಕು. ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆಯಬಾರದು, ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆಯಬಾರದು. ಮಹಿಳಾ ಸ್ವಸಹಾಯ ಸಂಘದ ಸಾಲ ಮನ್ನಾ ಮಾಡಬೇಕು ಎನ್ನುವ ವಿಚಾರ ಇರಿಸಿಕೊಂಡು ನಾವು ಹೋರಾಟ ಮಾಡುತ್ತಿದ್ದೇವೆ. ಇಂದು ಒಂದೇ ದಿನ ಹೋರಾಟ ನಡೆಸುತ್ತಿದ್ದು, ಬೇಡಿಕೆ ಈಡೇರದೆ ಇದ್ದರೆ ಮುಂದೆ ಬೇರೆ ರೀತಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಇಂದು ಅಥವಾ ನಾಳೆ ಪ್ರತಿಪಕ್ಷ ನಾಯಕನ ಆಯ್ಕೆ:ಇವತ್ತು ಶಾಸಕರೆಲ್ಲ ಬರುತ್ತಿದ್ದಾರೆ. ಅವರ ಜತೆ ಚರ್ಚೆ ಮಾಡಿ ಇವತ್ತು ಅಥವಾ ನಾಳೆ ವಿಪಕ್ಷ ನಾಯಕನ ಆಯ್ಕೆ ಮಾಡಲಾಗುತ್ತದೆ ಎಂದು ಯಡಿಯೂರಪ್ಪ ಇದೇ ವೇಳೇ ತಿಳಿಸಿದರು.