ಬೆಂಗಳೂರು: ಮಾಜಿ ಸಿಎಂ ಬಿಎಸ್ವೈ ಹಾಕಿರೋ ಬಾಂಬ್ಗೆ ರಾಜ್ಯ ಬಿಜೆಪಿಯಲ್ಲಿ ತಲ್ಲಣ ಮೂಡಿಸಿದೆ. ಕಲಬುರಗಿಯಲ್ಲಿ ಕೊಟ್ಟಿರೋ ಒಂದೇ ಒಂದು ಸ್ಟೇಟ್ಮೆಂಟ್ ಹಾಲಿ ಬಿಜೆಪಿ ಶಾಸಕರ ಹೃದಯ ಬಡಿತ ಹೆಚ್ಚಾಗುವ ಹಾಗೆ ಮಾಡಿದೆ. ಐದಾರು ಹಾಲಿ ಶಾಸಕರಿಗೆ ಈ ಬಾರಿ ಟಿಕೆಟ್ ಕೈ ತಪ್ಪಬಹುದು ಎಂಬ ಹೇಳಿಕೆ ಬಿಜೆಪಿ ಪಾಳಯದಲ್ಲಿ ಕಂಪನ ಮೂಡಿಸಿದೆ.
ಈ ಬಾರಿ ಐದಾರು ಹಾಲಿ ಶಾಸಕರಿಗೆ ಟಿಕೆಟ್ ಸಿಗುವುದಿಲ್ಲ ಎಂಬ ಬಿಎಸ್ವೈ ಹೇಳಿಕೆ ತೀವ್ರ ಸದ್ದು ಮಾಡಿದೆ. ಅವರು ಏಕಾಏಕಿ ಕೊಟ್ಟ ಈ ಹೇಳಿಕೆ ಹಲವು ಹಾಲಿ ಶಾಸಕರ ಎದೆ ಬಡಿತ ಹೆಚ್ಚಾಗುವಂತೆ ಮಾಡಿದೆ. ಯಡಿಯೂರಪ್ಪನವ್ರೇ ಈ ಮಾತನ್ನ ಹೇಳಿದ್ರೋ ಇಲ್ಲಾ ಅವರ ಬಾಯಿಂದ ಹೈಕಮಾಂಡ್ ಹೇಳಿಸಿದ್ಯೋ ಎಂಬ ಅನುಮಾನ ಹಲವರಲ್ಲಿ ಕಾಡತೊಡಗಿದೆ.
ಬಿಎಸ್ವೈ ಹೇಳಿಕೆಯಿಂದ ಚುನಾವಣೆ ಸನಿಹದಲ್ಲಿರುವ ಹಲವು ಹಾಲಿ ಶಾಸಕರಿಗೆ ಆಘಾತ ನೀಡಿದಂತಾಗಿದೆ. ಎಲ್ಲಿ ಈ ಬಾರಿ ನಮ್ಮ ಟಿಕೆಟ್ ಮಿಸ್ಸಾಗುತ್ತೋ ಎಂಬ ಆತಂಕ ಎದುರಾಗಿದೆ. ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯರೂ ಆಗಿರುವ ಯಡಿಯೂರಪ್ಪ ಹೇಳಿಕೆ ಮೂಲಕವೇ ಹಾಲಿ ಶಾಸಕರಿಗೆ ಬಲವಾದ ಸಂದೇಶ ರವಾನೆಯಾಗಿದೆ. ಈಗಾಗಲೇ ರಾಜ್ಯದಲ್ಲಿ ಗುಜರಾತ್ ಮಾಡೆಲ್ ಟಿಕೆಟ್ ಹಂಚಿಕೆ ಅನುಸರಿಸಲಾಗುವುದು ಎಂಬ ಸುದ್ದಿ ಹಲವರಲ್ಲಿ ಆತಂಕ ಮೂಡಿಸಿತ್ತು. ಇದೀಗ ಬಿಎಸ್ವೈ ಹೇಳಿಕೆ ಅವರ ಆತಂಕವನ್ನು ಇನ್ನಷ್ಟು ಇಮ್ಮಡಿಗೊಳಿಸಿದೆ.
ಹಿರಿಯ ಹಾಲಿ ಶಾಸಕರಿಗೆ ಕೊಕ್?:ಈಗಾಗಲೇ 70 ವರ್ಷ ಆಸುಪಾಸಿನ ಹಿರಿಯ ಹಾಲಿ ಶಾಸಕರಿಗೆ ಯಡಿಯೂರಪ್ಪ ಈ ಹೇಳಿಕೆ ಇನ್ನಷ್ಟು ಅನಿಶ್ಚಿತತೆ ಉಂಟು ಮಾಡಿದೆ. ಬಿಜೆಪಿಯಲ್ಲಿ ಸದ್ಯ ಏಳೆಂಟು ಹಾಲಿ ಶಾಸಕರು 70 ವಯೋಮಾನದಲ್ಲಿದ್ದು, ಅವರಿಗೆ ಈಗ ಟಿಕೆಟ್ ಸಿಗುತ್ತೋ ಇಲ್ವೋ ಎಂಬ ಆತಂಕ ಮೂಡಿಸಿದೆ. ಗುಜರಾತ್ ಮಾಡೆಲ್ ಕೂಡ ಇದೇ ಆಗಿದ್ದು ಹಿರಿಯರ ಬದಲು ಕಿರಿಯರಿಗೆ ಮಣೆ ಹಾಕಲಾಗಿದೆ. ಹೀಗಾಗಿ ಬಿಜೆಪಿ ಪಕ್ಷದಲ್ಲಿನ ಹಿರಿಯ ಶಾಸಕರು ಯಡಿಯೂರಪ್ಪ ಹೇಳಿಕೆಯಿಂದ ವಿಚಲಿತರಾಗಿದ್ದಾರೆ. ಈ ಬಾರಿ ಟಿಕೆಟ್ ಸಿಗುತ್ತೋ ಇಲ್ಲವೋ ಎಂಬ ಆತಂಕ ಇದೀಗ ಮನೆ ಮಾಡಲು ಶುರು ಮಾಡಿದೆ. ಪಕ್ಷದ ಅಲಿಖಿತ ನಿಯಮದಂತೆ 70 ವರ್ಷ ಪೂರ್ಣಗೊಂಡವರಿಗೆ ಟಿಕೆಟ್ ಇಲ್ಲವೆಂಬ ಮಾತಿದೆ. ಅದನ್ನ ಗುಜರಾತ್ ಚುನಾವಣೆಯಲ್ಲಿ ಜಾರಿಗೆ ತಂದಾಗಿದೆ. ಕರ್ನಾಟಕದಲ್ಲೂ ಅದನ್ನು ಅನುಸರಿಸಲಾಗುವುದು ಎಂಬ ಆಲೋಚನೆಯಿದೆ. ಯಡಿಯೂರಪ್ಪ ಹೇಳಿಕೆ ಈ ಅನುಮಾನಕ್ಕೆ ಮತ್ತೆ ಪುಷ್ಠಿ ನೀಡಿದೆ.
ಕಳಂಕಿತರಿಗೆ, ಸೋಲಿನ ಭೀತಿಯಲ್ಲಿರುವ ಶಾಸಕರಿಗೆ ಟಿಕೆಟ್ ಡೌಟ್:ಇದೇ ವೇಳೆ, ಈ ಬಾರಿ ಕಳಂಕಿತ ಹಾಲಿ ಬಿಜೆಪಿ ಶಾಸಕರಿಗೆ ಟಿಕೆಟ್ ಸಿಗುವುದು ಅನುಮಾನ ಎನ್ನಲಾಗಿದೆ. ಭ್ರಷ್ಟಾಚಾರ, ಇತರ ಗಂಭೀರ ಆರೋಪ ಹೊತ್ತಿರುವ ಹಾಲಿ ಬಿಜೆಪಿ ಶಾಸಕರಿಗೆ ಇದೀಗ ಟಿಕೆಟ್ ಕೈ ತಪ್ಪುವ ಆತಂಕಕ್ಕೆ ದೂಡಿದೆ. ಈಗಾಗಲೇ ಹಲವು ಶಾಸಕರ ಮೇಲೆ ಗುರುತರ ಆರೋಪಗಳು ಕೇಳಿಬಂದಿವೆ. ಒಂದಿಬ್ಬರ ಮೇಲೆ ಚೆಕ್ ಬೌನ್ಸ್ ಕೇಸ್ ಹಾಗೂ ಸಾರ್ವಜನಿಕ ಹಣ ದುರುಪಯೋಗದ ಮೇಲೆ ನ್ಯಾಯಾಲಯ ತೀರ್ಪು ಬಂದಿದೆ. ಇನ್ನೊಂದಿಷ್ಟು ಶಾಸಕರ ಮೇಲೆ ಶೇ 40ರಷ್ಟು ಕಮೀಷನ್ ಆರೋಪ ಕೇಳಿಬಂದಿದೆ. ಇವರಿಗೆ ಈ ಬಾರಿ ಹೈಕಮಾಂಡ್ ಮಣೆ ಹಾಕುವುದಿಲ್ಲ ಎಂಬ ಅನುಮಾನ ಹೆಚ್ಚಾಗಿದೆ.