ಬೆಂಗಳೂರು: ಕಲಬುರಗಿ ರೈತನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಬಿಎಸ್ವೈ, ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ಘೋಷಣೆ ಮಾಡಿದ್ದಾರೆ.
ಕಲ್ಲಂಗಡಿ ಬೆಳೆ ನಷ್ಟಕ್ಕೊಳಗಾಗಿ ಮನನೊಂದ ರೈತ ಆತ್ಮಹತ್ಯೆಗೆ ಶರಣಾಗಿದ್ದ. ಆತನ ಕುಟುಂಬದ ನೆರವಿಗೆ ಧಾವಿಸಿರುವ ಸಿಎಂ ಆರ್ಥಿಕ ನೆರವು ಘೋಷಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಕೃಷಿ ಸಚಿವ ಬಿ.ಸಿ ಪಾಟೀಲ್, ತೋಟಗಾರಿಕೆ ಸಚಿವ ನಾರಾಯಣ ಗೌಡ, ಸಹಕಾರಿ ಸಚಿವ ಎಸ್.ಟಿ ಸೋಮಶೇಖರ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಬಿಎಸ್ವೈ ತುರ್ತು ಸಭೆ ನಡೆಸಿದರು.
ರೈತರ ಹಿತ ಕಾಯಲು ತಿಳಿಸಿರುವ ಪ್ರತಿಪಕ್ಷ ನಾಯಕರ ಸಲಹೆಗಳು, ರೈತರ ಬೆಳೆ ನಷ್ಟಕ್ಕೆ ಪರಿಹಾರ, ಬೆಳೆ ಬೆಲೆ ನಿಗದಿ, ರಸಗೊಬ್ಬರ, ಬೀಜ ವಿತರಣೆ ಕುರಿತು ಸಮಾಲೋಚನೆ ನಡೆಸಲಾಗಿದೆ ಎಂದು ತಿಳಿಸಿದರು.
ಕರ್ನಾಟಕದಿಂದ ರಫ್ತಾಗುತ್ತಿರುವ ಹಣ್ಣು, ತರಕಾರಿಗಳ ವಾಹನಗಳಿಗೆ ಪೊಲೀಸರು ತಡೆ ಹಾಕಬಾರದು. ಸರಕು-ಸಾಗಣೆ ವಾಹನಗಳನ್ನು ತಡೆಯದಂತೆ ಸೂಚಿಸಿದ್ದೇವೆ. ತಡೆದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಅಗತ್ಯ ವಸ್ತುಗಳ ಖರೀದಿಗೆ ಜನರಿಗೆ ಅವಕಾಶ ಇದೆ. ಅಗತ್ಯ ವಸ್ತುಗಳು, ತರಕಾರಿ, ಹಣ್ಣಿನ ಮಾರಾಟಕ್ಕೆ ಯಾವುದೇ ತೊಂದರೆ ಇಲ್ಲ. ಈ ಸಭೆಯಲ್ಲಿ ರೈತರು ಮತ್ತು ಗ್ರಾಹಕರ ಹಿತ ಕಾಪಾಡಲು ಕೆಲ ತೀರ್ಮಾನ ಕೈಗೊಳ್ಳಲಾಗಿದೆ. ಸರಕು ಸಾಗಾಣೆ ರೈಲುಗಳ ಮೂಲಕ ಹೊರ ರಾಜ್ಯಗಳಿಗೆ ಹಣ್ಣು, ತರಕಾರಿ ಸಾಗಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.