ಬೆಂಗಳೂರು: ವಿದ್ಯುತ್ ಚಾಲಿತ ಬಸ್ ಸೇರಿದಂತೆ ಬಿಎಂಟಿಸಿಗೆ ಹೊಸದಾಗಿ 6 ಸಾವಿರ ಬಸ್ಗಳ ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ. ಅಲ್ಲದೆ ಬಸ್ ದರ ಇಳಿಕೆ ಮೂಲಕ ಖಾಸಗಿ ವಾಹನದಲ್ಲಿ ಸಂಚರಿಸುವವರನ್ನು ಸಾರಿಗೆ ಬಸ್ಗಳಲ್ಲಿ ಪ್ರಯಾಣಿಸುವಂತೆ ಉತ್ತೇಜಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೂರು ಗಂಟೆಗಳ ಕಾಲ ಬೆಂಗಳೂರು ನಗರದ ಮೂಲಸೌಕರ್ಯ ಸುಧಾರಣೆ, ಸಂಚಾರದಟ್ಟಣೆ ನಿವಾರಿಸಲು, ತಜ್ಞರು ಮತ್ತು ಸಚಿವರ ಜೊತೆ ಸುದೀರ್ಘ ಚರ್ಚೆ ನಡೆಸಿ ಹಲವು ನಿರ್ಧಾರ ಕೈಗೊಂಡು ಡಿಸೆಂಬರ್ 15 ರ ನಂತರ ಮತ್ತೊಮ್ಮೆ ಸಭೆ ನಡೆಸಿ ಅನುಷ್ಠಾನಕ್ಕೆ ಸಂಬಂಧಪಟ್ಟ ಪರಿಶೀಲನೆ ನಡೆಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ನಗರದ ಮೂಲಸೌಕರ್ಯ ಸುಧಾರಣೆ, ಸಂಚಾರದಟ್ಟಣೆ ನಿವಾರಿಸಿ ವಾಯು ಮಾಲಿನ್ಯ ತಗ್ಗಿಸುವ ಸಂಬಂಧ ಬೆಂಗಳೂರು ಮೊಬಿಲಿಟಿ ಮ್ಯಾನೇಜ್ಮೆಂಟ್ ಅಥಾರಿಟಿ ರಚಿಸಲು ನಿರ್ಧರಿಸಲಾಯಿತು. ನಗರದ ದಟ್ಟಣೆಯುಳ್ಳ 12 ಕಾರಿಡಾರ್ ರಸ್ತೆಗಳನ್ನು ಗುರುತಿಸಿ ಪ್ರತ್ಯೇಕ ಬಸ್ ಪಥ ನಿರ್ಮಿಸಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ನಿರ್ಧರಿಸಲಾಗಿದೆ ಎಂದರು.
ಸಧ್ಯ ಬಿಎಂಟಿಸಿಯಲ್ಲಿ 6 ಸಾವಿರದ 500 ಬಸ್ ಇವೆ. ಈ ಬಸ್ ಗಳಲ್ಲಿ 1000 ಬಸ್ ಗುಜರಿಗೆ ಹಾಕಬೇಕಿದ್ದು, ಉಳಿದ ಬಸ್ಗಳನ್ನು ಬೇರೆಡೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಹಂತ ಹಂತವಾಗಿ ಹೊಸದಾಗಿ 6 ಸಾವಿರ ಬಸ್ಗಳನ್ನು ಬಿಎಂಟಿಸಿಗೆ ಸೇರಿಸಲು ನಿರ್ಧಾರಿಸಿದ್ದೇವೆ. ಖಸಗಿಯವರಿಂದ ಒಪ್ಪಂದದ ಮೇಲೆ ಬಸ್ ಬಾಡಿಗೆ ಪಡೆಯಲಿದ್ದೇವೆ. ಹೊಸ ಬಸ್ ನಲ್ಲಿ ಶೇ. 50 ವಿದ್ಯುತ್ ಚಾಲಿತ ಬಸ್ಗಳು ಇರಲಿದ್ದು, ಇದರಂದ ಶೇ.50 ರಷ್ಟು ಮಾಲಿನ್ಯ ನಿಯಂತ್ರಣಕ್ಕೆ ತರಬೇಕು ಎನ್ನುವ ಉದ್ದೇಶ ಹೊಂದಲಾಗಿದೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.
ಸ್ವಂತ ಮತ್ತು ಖಾಸಗಿ ವಾಹನ ಬಳಕೆಯಿಂದ ಬಿಎಂಟಿಸಿಗೆ ಬಾರದ ಜನರನ್ನು ಸೆಳೆಯಲು ಯತ್ನಿಸಲಾಗುತ್ತದೆ. ಅದಕ್ಕಾಗಿಯೇ ಬಿಎಂಟಿಸಿಗೆ ಆರ್ಥಿಕ ನೆರವು ನೀಡಿ ಬಸ್ ದರ ಇಳಿಕೆ ಮಾಡಿ ಜನರನ್ನ ಸೆಳೆಯಲಾಗುವುದು ಎಂದು ಹೇಳಿದರು.
ಮೆಟ್ರೋ 2 ಹಂತ 2020ರ ಡಿಸೆಂಬರ್ ವೇಳೆಗೆ ಮುಕ್ತಾಯಕ್ಕೆ ಸೂಚನೆ ನೀಡಲಾಗಿದ್ದು, 2022 ರ ವೇಳೆಗೆ ವೈಟ್ ಫೀಲ್ಡ್ ಹೊರ ವರ್ತುಲ ರಸ್ತೆ ಪೀಣ್ಯ ಹಬ್ಗೆ ಸೇರಿಸಲು ತೀರ್ಮಾನಿಸಲಾಗಿದೆ. ಅಲ್ಲದೆ, 2023ಕ್ಕೆ ವಿಮಾನ ನಿಲ್ದಾಣದ ಹೊರ ವರ್ತುಲ ರಸ್ತೆ ಮುಗಿಸಲು ಸೂಚಿಸಿದ್ದಾರೆ. ಅಲ್ಲದೆ ಹೊಸಕೋಟೆ, ಸರ್ಜಾಪುರಕ್ಕೆ ಮೆಟ್ರೋ 3ನೇ ಹಂತ ಸಂಪರ್ಕ ಕಲ್ಪಿಸಲು ಸೂಚನೆ ನೀಡಲಾಗಿದೆ.
ವೈಜ್ಞಾನಿಕ ಕಸ ವಿಲೇವಾರಿ ಪದ್ಧತಿ ಅಳವಡಿಕೆ, ಕಸ ವಿಲೇವಾರಿ ವಾಹನಗಳಿಗೆ ಜಿಪಿಎಸ್ ಅಳವಡಿಕೆ, ಬಿಬಿಎಂಪಿಗೆ ಕೆರೆ ನಿರ್ವಹಣೆ ಜವಾಬ್ದಾರಿ ಸೇರಿದಂತೆ ಹಲವು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ನೂರು ದಿನ ನೆರೆಗೆ ಹೆಚ್ಚು ಒತ್ತು ಕೊಟ್ಟ ಕಾರಣ ಹಣವನ್ನು ಆಕಡೆ ವಿನಿಯೋಗ ಮಾಡಿದ್ದೇವೆ. ಇನ್ನು ನೂರು ದಿನಗಳಲ್ಲಿ ಸಾಕಷ್ಟು ಬದಲಾವಣೆ ಮಾಡಲಿದ್ದೇವೆ. ಬೆಂಗಳೂರು ಅಭಿವೃದ್ಧಿ, ಜನ ಮೆಚ್ಚುವ ರೀತಿ ಬದಲಾವಣೆ ಮಾಡಲು ಹೆಜ್ಜೆ ಇಡಲಿದ್ದೇವೆ. ಮೂರು ತಿಂಗಳಲ್ಲಿ ಬದಲಾವಣೆ ಕಾಣಬಹುದು ಎಂದು ಸಿಎಂ ನಗರದ ಜನತೆಗೆ ಅಭಯ ನೀಡಿದ್ರು.