ಬೆಂಗಳೂರು: "ಈ ಸರ್ಕಾರ ಪಾಪರ್ ಆಗಿದೆ, ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ, ಭ್ರಷ್ಟಾಚಾರ, ವರ್ಗಾವಣೆ ದಂಧೆಯಲ್ಲಿ ಮುಳುಗಿದೆ. ಅಭಿವೃದ್ಧಿ ಕಾರ್ಯ ಸ್ಥಗಿತಗೊಳಿಸಿ ಭ್ರಷ್ಟಾಚಾರದಲ್ಲಿ ಮುಳುಗಿರುವ ಸರ್ಕಾರದ ವಿರುದ್ಧ ಆಗಸ್ಟ್ 23 ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದು, ಸರ್ಕಾರ ನಮ್ಮ ಪ್ರತಿಭಟನೆಗೆ ಮಣಿಯದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುತ್ತದೆ" ಎಂದು ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿಂದು ಶಾಸಕರ ಸಭೆ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಈ ಬಗ್ಗೆ ಇಂದಿನ ಬೆಂಗಳೂರು ಶಾಸಕರ ಸಭೆಯಲ್ಲಿ ಸವಿಸ್ತಾರವಾಗಿ ಚರ್ಚೆ ಮಾಡಿದ್ದೇವೆ. ಈ ಹಿನ್ನೆಲೆಯಲ್ಲಿ ಈ ತಿಂಗಳ 23ರಂದು ಬುಧವಾರ ಐದಾರು ಸಾವಿರ ಜನ ಸೇರಿಸಿ ಈ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಮೂಡಿಸುವ ದೃಷ್ಟಿಯಿಂದ ಹೋರಾಟವನ್ನು ಮಾಡುತ್ತಿದ್ದೇವೆ. ಪ್ರತಿನಿತ್ಯ ವರ್ಗಾವಣೆ ದಂಧೆ ನಡೆಯುತ್ತಿದೆ, ಅಧಿಕಾರಿಗಳಿಂದ ಪ್ರತಿ ತಿಂಗಳು ಇಷ್ಟು ಹಣ ಕೊಡಬೇಕು ಎಂದು ವಸೂಲಿ ಮಾಡುವ ಕೆಲಸ ನಡೆಯುತ್ತಿದೆ" ಎಂದು ಆರೋಪಿಸಿದರು.
"ಸರ್ಕಾರ ಸರ್ವಾಧಿಕಾರಿಯಂತೆ ವರ್ತನೆ ಮಾಡುತ್ತಿದೆ. ಸಾಮಾಜಿಕ ಜಾಲತಾಣ ಕಾರ್ಯಕರ್ತರಿಗೆ ಹೆದರಿಸುತ್ತಿದ್ದಾರೆ, ಮಾಧ್ಯಮದವರಿಗೂ ಕಿರುಕುಳ ಕೊಡುವ ಕೆಲಸ ನಡೆಯುತ್ತಿದೆ. ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ತಮಗಿಷ್ಟ ಬಂದಂತೆ ಬೆಂಗಳೂರಿನ ವಾರ್ಡ್‌ಗಳನ್ನು ಕೂಡ ಹಂಚಿಕೆ ಮಾಡುತ್ತಿದ್ದಾರೆ, ಇದೆಲ್ಲವನ್ನೂ ಖಂಡಿಸಿ ನಾವು ಹೋರಾಟ ಮಾಡಲಿದ್ದೇವೆ" ಎಂದರು.