ಬೆಂಗಳೂರು:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸಚಿವ ಸಂಪುಟ ಮೂರನೇ ಸಲ ವಿಸ್ತರಣೆಗೊಂಡಿದ್ದು, ಒಟ್ಟು ಏಳು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯ್ ವಾಲಾ ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಮೊದಲಿಗರಾಗಿ ದೇವರು ಹಾಗೂ ರೈತರ ಹೆಸರಿನಲ್ಲಿ ಹಿರಿಯ ಶಾಸಕ ಉಮೇಶ್ ಕತ್ತಿ ಪ್ರಮಾಣ ವಚನ ಸ್ವೀಕಾರ ಮಾಡಿದರು.
ಎರಡನೆಯವರಾಗಿ ದೇವರ ಹೆಸರಿನಲ್ಲಿ ಅರವಿಂದ ಲಿಂಬಾವಳಿ ಪ್ರಮಾಣವಚನ ಸ್ವೀಕಾರ ಮಾಡಿದರು. ನಂತರ ಅವರು ರಾಜ್ಯಪಾಲರು, ಸಿಎಂ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು.
ಅರವಿಂದ್ ಲಿಂಬಾವಳಿ ಪ್ರಮಾಣ ವಚನ ನಂತರ ಎಂಟಿಬಿ ನಾಗರಾಜ್, ಸಿ.ಪಿ ಯೋಗೇಶ್ವರ್ ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಎಂಟಿಬಿ ನಾಗರಾಜ್ ಪ್ರಮಾಣ ವಚನ ಇದೇ ವೇಳೆ ದೇವರ ಹೆಸರಿನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದ ಆರ್. ಶಂಕರ್ ವಿಶೇಷ ಉಡುಪಿನಿಂದ ಗಮನ ಸೆಳೆದರು.
ಮುರುಗೇಶ್ ನಿರಾಣಿ ದೇವರು ಹಾಗೂ ರೈತರ ಹೆಸರಿನಲ್ಲಿ ಪ್ರತಿಜ್ಞೆ ಪಡೆದರು. ಬಳಿಕ ಅವರು ರಾಜ್ಯಪಾಲರು ಮತ್ತು ಸಿಎಂ ಕಾಲಿಗೆ ನಮಸ್ಕರಿಸಿದರು.
ಮುರುಗೇಶ್ ನಿರಾಣಿ ಪ್ರಮಾಣ ವಚನ ವಿಧಾನ ಪರಿಷತ್ ಸದಸ್ಯರಾಗಿರುವ ಸಿ.ಪಿ.ಯೋಗೇಶ್ವರ್ (ಎರಡನೇ ಸಲ ಸಚಿವರಾಗಿ) ದೇವರ ಹೆಸರಲ್ಲಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ಸ್ವೀಕರಿಸಿದರು.
ಎಸ್.ಅಂಗಾರ (ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭೆ ಕ್ಷೇತ್ರ) ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಅಂಗಾರ ಅವರ ಹೆಸರು ಹೇಳುತ್ತಿದ್ದಂತೆ ಜೋರಾಗಿ ಚಪ್ಪಾಳೆ ಹೊಡೆದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಂಭ್ರಮಿಸಿದರು.
ಅಂಗಾರ ಪ್ರಮಾಣ ವಚನ ಸ್ವೀಕರಿಸಲು ವೇದಿಕೆಗೆ ಆಗಮಿಸಿದಾಗ ಹರ್ಷೋದ್ಘಾರ ಮುಗಿಲು ಮುಟ್ಟಿತು. ಈ ವೇಳೆ ಸುಮ್ಮನಿರುವಂತೆ ಕೈ ತೋರಿಸಿದ ಸಿಎಂ ಬಿಎಸ್‌ವೈ ಸಭೆಯನ್ನು ನಿಯಂತ್ರಿಸಿದರು. ಆದರೂ ಮತ್ತೆ ಅಂಗಾರ.. ಅಂಗಾರ, ಕರ್ನಾಟಕದ ಬಂಗಾರ.. ಎಂದು ಘೊಷಣೆ ಮೊಳಗಿತು. ನಂತರ ರಾಜ್ಯಪಾಲರು, ಬಿಎಸ್‌ವೈ ಕಾಲಿಗೆರಗಿದ ಅಂಗಾರ ಆಶೀರ್ವಾದ ಪಡೆದುಕೊಂಡರು.
ಸಂಜೆ 3.50ಕ್ಕೆ ಶುರುವಾದ ಸಮಾರಂಭ 4.14 ರವರೆಗೆ ನಡೆಯಿತು. 24 ನಿಮಿಷಗಳಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ಮುಕ್ತಾಯವಾಯಿತು.
ಸಂಪುಟ ಸೇರಿದ ಏಳು ಮಂದಿ ನೂತನ ಸಚಿವರು ರಾಜ್ಯಪಾಲ ವಜುಭಾಯ್ ವಾಲಾ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಗುಂಪು ಫೋಟೋ ತೆಗೆಯಿಸಿಕೊಂಡರು.