ಬೆಂಗಳೂರು :ರಾಜ್ಯ ರಾಜಕೀಯದಲ್ಲಿ ಕಳೆದ ಕೆಲ ದಿನಗಳಿಂದ ನಾಯಕತ್ವ ಬದಲಾವಣೆ ಕೂಗು ಜೋರಾಗಿಯೇ ಕೇಳಿ ಬರುತ್ತಿತ್ತು. ಅದರಲ್ಲೂ ಬಿ ಎಸ್ ಯಡಿಯೂರಪ್ಪ ದೆಹಲಿ ಪ್ರವಾಸದಿಂದ ಮರಳಿದ ಬಳಿಕ ಈ ಮಾತಿಗೆ ಪುಷ್ಠಿ ಸಿಕ್ಕಂತಾಗಿತ್ತು. ಕೆಲವರು ಬಿಎಸ್‌ವೈ ಪದತ್ಯಾಗ ಮಾಡುತ್ತಾರೆಂದರೆ, ಇನ್ನೂ ಒಂದಿಷ್ಟು ಜನ ಇದೆಲ್ಲಾ ಊಹಾಪೋಹವೆಂದು ಅಲ್ಲಗಳೆದಿದ್ದರು. ಈ ಎಲ್ಲ ವಿಚಾರಕ್ಕೆ ಇಂದು ಅಂತಿಮ ಉತ್ತರ ದೊರೆತಿದೆ. ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ.
ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಸಿಎಂ ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದ್ದಾರೆ. ರಾಜ್ಯ ಸರ್ಕಾರ ಎರಡು ವರ್ಷದ ಆಡಳಿತಾವಧಿ ಪೂರೈಸಿದ ಹಿನ್ನೆಲೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಆಯೋಜಿಸಲಾಗಿದ್ದ ಸಾಧನಾ ಸಮಾಶವೇಶದಲ್ಲಿ ಬಿಎಸ್‌ವೈ ಪದತ್ಯಾಗದ ನಿರ್ಧಾರ ತಿಳಿಸಿದರು.
ಸರ್ಕಾರಕ್ಕೆ 2 ವರ್ಷದ ತುಂಬಿದ ದಿನವೇ ಸಿಎಂ ಸ್ಥಾನಕ್ಕೆ ಬಿಎಸ್‌ವೈ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಗೂ ಮುನ್ನ ಬಿ ಎಸ್ ಯಡಿಯೂರಪ್ಪ ಭಾವುಕ ಭಾಷಣ ಮಾಡಿದರು. ಮಾತನಾಡುತ್ತಾ ವೇದಿಕೆಯ ಮೇಲೆಯೇ ಗದ್ಗದಿತರಾದ ಅವರ ಕಣ್ಣಂಚಿನಲ್ಲಿ ನೀರು ತುಂಬಿತ್ತು.