ಬೆಂಗಳೂರು:ಯಾರು ಯಾರಿಗೇ ದೂರು ಕೊಡಲಿ, ನಮ್ಮ ರಾಜ್ಯದ ಹಿತ ಕಾಯುವ ಕೆಲಸ ನಾವು ಮಾಡುತ್ತೇವೆ ಎಂದು ಅಮಿತ್ ಶಾಗೆ ದೂರು ನೀಡಿದ ಮಹಾರಾಷ್ಟ್ರ ಸಂಸದರಿಗೆ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ಜೊತೆಗೆ, ಗಡಿ ವಿಚಾರದ ಕುರಿತು ಹೈಕಮಾಂಡ್ ನಾಯಕರ ಜೊತೆ ಮಾತುಕತೆ ನಡೆಸುತ್ತೇನೆ ಎಂದಿದ್ದಾರೆ.
ಗುಜರಾತ್ ಪ್ರವಾಸಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್ ಮುಖ್ಯಮಂತ್ರಿ ಆಯ್ಕೆ ಸಂಬಂಧ ಸಮಿತಿ ಮಾಡಿದ್ದಾರೆ. ನೀವೂ ಬರಬೇಕು ಅಂತ ನನಗೆ ಕರೆ ಬಂತು. ಹೀಗಾಗಿ ಅಹಮದಾಬಾದ್‌ಗೆ ಹೊರಟಿದ್ದೇನೆ. ನನ್ನೊಂದಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಅರ್ಜುನ್ ಮುಂಡಾ ಅವರನ್ನು ಸೇರಿಸಿ ಸಮಿತಿ ಮಾಡಿದ್ದಾರೆ. ನಾಳೆ ಸಭೆ ಮುಗಿಸಿ ಭಾನುವಾರ ವಾಪಸ್ ಬರುತ್ತೇನೆ ಎಂದರು.
ಗಡಿ ವಿವಾದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಮಹಾರಾಷ್ಟ್ರ ಸಂಸದರು ದೂರು ನೀಡಿರುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ಗಡಿ ವಿಚಾರ ಬಗ್ಗೆ ವರಿಷ್ಟರ ಜತೆ ಮಾತನಾಡುತ್ತೇನೆ. ನೆಲ, ಜಲ, ಗಡಿ, ಭಾಷೆ ವಿಚಾರದಲ್ಲಿ ರಾಜಿ ಆಗಲ್ಲ. ಯಾರು ಯಾರಿಗೇ ದೂರು ಕೊಟ್ಟರೂ ನಮಗೆ ಸಂಬಂಧ ಇಲ್ಲ. ನಮ್ಮ ರಾಜ್ಯದ ಹಿತ ಕಾಪಾಡುವುದು ಮುಖ್ಯ. ಹಾಗಾಗಿ ಆ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ ಎಂದು ಹೇಳಿದರು.