ಬೆಂಗಳೂರು: ’’ಬಜರಂಗದಳ ನಿಷೇಧ ಮಾಡಲು ಯಾವನಿಂದಲೂ ಸಾಧ್ಯವಿಲ್ಲ, ಕಾಂಗ್ರೆಸ್‌ನವರು ಹುಚ್ಚುಹುಚ್ಚಾಗಿ ಮಾತನಾಡುತ್ತಿದಾರೆ, ಜನ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ‘‘ ಎಂದು ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕೃತ ನಿವಾಸ ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜರಂಗದಳ ನಿಷೇಧ ಮಾಡುವುದಾಗಿ ಕಾಂಗ್ರೆಸ್ ಮೂರ್ಖ ನಿರ್ಧಾರ ತಗೊಂಡಿದೆ. ಕಾಂಗ್ರೆಸ್ನವರ ಈ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಬಜರಂಗದಳವನ್ನು ಯಾವನಿಂದಲೂ ಬ್ಯಾನ್ ಮಾಡೋಕೆ ಸಾಧ್ಯ ಇಲ್ಲ ಹುಚ್ಚುಚ್ಚರ ತರ ಆಡುತ್ತಿರುವ ಕಾಂಗ್ರೆಸ್ ನಾಯಕರಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಈಗ ಮಂಡ್ಯ, ಕೆಆರ್ ಪೇಟೆಗೆ ಹೋಗುತ್ತಿದ್ದೇನೆ ಸಂಜೆ ದಾವಣಗೆರೆ ಮೂಲಕ ನಾಳೆ ನನ್ನ ಪ್ರವಾಸ ಮುಂದುವರಿಯಲಿದೆ, ವಾತಾವರಣ ನಮ್ಮ ನಿರೀಕ್ಷೆ ಮೀರಿ ಚೆನ್ನಾಗಿದೆ. 135 ಸೀಟು ಗೆದ್ದು ಸರ್ಕಾರ ರಚಿಸೋದು ನಿಶ್ಚಿತ. ನಾವು ಯಾರ ಬೆಂಬಲವೂ ಇಲ್ಲದೇ ಸರ್ಕಾರ ರಚಿಸುತ್ತೇವೆ. ಮೋದಿ ಅಮಿತ್ ಶಾ ಅವರ ಪ್ರವಾಸದಿಂದ ವಾತಾವರಣ ಪಕ್ಷದ ಪರ ಮತ್ತಷ್ಟು ಹೆಚ್ಚಾಗಿ ಕಂಡು ಬರುತ್ತಿದೆ. ಬೆಂಗಳೂರಲ್ಲಿ ಮೋದಿ ರೋಡ್ ಶೋ ಮಾಡುತ್ತಿದ್ದಾರೆ. ಇದರಿಂದ ಪಕ್ಷದ ಮೇಲೆ ಪರಿಣಾಮ ಆಗಿ, ಪಕ್ಷ ಗೆಲುವಿಗೆ ಸಹಕಾರಿ ಆಗಲಿದೆ ಎಂದರು.
ನರೇಂದ್ರ ಮೋದಿ ಅವರ ಬೆಂಗಳೂರು ರೋಡ್ ಶೋ ಬದಲಾವಣೆ ಆಗಿದೆ, ಶನಿವಾರ ಸಂಜೆ ಇದ್ದ ರೋಡ್ ಶೋ ಭಾನುವಾರ ಬೆಳಗ್ಗೆ ನಡೆಯಲಿದೆ ಎಂದು ಬಿ ಎಸ್ ಯಡಿಯೂರಪ್ಪ ಅವರು ಮಾಹಿತಿ ನೀಡಿದರು. ಶನಿವಾರ ನಡೆಸಬೇಕಿದ್ದ ರೋಡ್ ಶೋ ಭಾನುವಾರಕ್ಕೂ ಮುಂದೂಡಿಕೆ ಮಾಡಲಾಗಿದೆ. ಶನಿವಾರ ಸಂಜೆ ಮಳೆ ಬರುವ ಕಾರಣಕ್ಕಾಗಿ ಮತ್ತು ಬೆಂಗಳೂರು ಟ್ರಾಫಿಕ್ ಸಮಸ್ಯೆ ತಪ್ಪಿಸಲು ಸ್ವತಃ ಮೋದಿ ಸೂಚನೆ ಮೇರೆಗೆ ರೋಡ್ ಶೋ ಬದಲಾವಣೆ ಮಾಡಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ:ಮೋದಿ ಬೆಂಗಳೂರು ರೋಡ್ ಶೋ ಅವಧಿಯಲ್ಲಿ ಬದಲಾವಣೆ