ಬೆಂಗಳೂರು: ರಮಡ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿರುವ ಶಾಸಕರೊಂದಿಗೆ ಸಭೆ ನಡೆಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಗಮಿಸಿದ್ದಾರೆ. ಬಹಳ ನಗು ಮುಖದಿಂದಲೇ ಬಂದ ಬಿಎಸ್ವೈ ರೆಸಾರ್ಟ್ ಒಳಗಡೆ ಹೋದರು.
ನಗು ಮೊಗದಿಂದ ಸಭೆಗೆ ಆಗಮಿಸಿದ ಬಿಎಸ್ವೈ: ಇಂದು ರೆಸಾರ್ಟ್ನಲ್ಲೇ ವಾಸ್ತವ್ಯ ಬಿಎಸ್ವೈ ಜೊತೆಗೆ ಗೋವಿಂದ ಕಾರಜೋಳ, ಮಾಧುಸ್ವಾಮಿ ಮತ್ತು ಬಸವರಾಜ್ ಬೊಮ್ಮಾಯಿ ಕೂಡ ಆಗಮಿಸಿದರು. ಇದಕ್ಕೂ ಮುಂಚೆ ರೆಸಾರ್ಟ್ಗೆ ಆಗಮಿಸಿದ ಕೆ.ಎಸ್.ಈಶ್ವರಪ್ಪ ಸ್ವಲ್ಪ ಹೊತ್ತು ರೆಸಾರ್ಟ್ನಲ್ಲಿದ್ದು ವಾಪಾಸ್ ತೆರಳಿದರು.
ಬಿಜೆಪಿ ಶಾಸಕರೊಂದಿಗೆ ಸಭೆ ನಡೆಸಿ, ದೋಸ್ತಿಗಳು ವಿಶ್ವಾಸಮತ ಸಾಬೀತು ಪಡಿಸುತ್ತಾರೆಯೇ? ಇಲ್ಲ ವಿಫಲವಾಗುತ್ತಾರಾ? ಹೀಗೆ ಅನೇಕ ವಿಷಯಗಳ ಬಗ್ಗೆ ಚರ್ಚಿಸುವುದರ ಜೊತೆಗೆ ಮುಂದಿನ ರಾಜಕೀಯ ನಡೆಯ ಬಗ್ಗೆ ಕೂಲಂಕಶವಾಗಿ ಮಾತುಕತೆ ನಡೆಸಿ ಸರ್ಕಾರ ರಚಿಸಲು ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ ಎನ್ನಲಾಗಿದೆ.
ಶಾಸಕರೊಂದಿಗೆ ಸಭೆ ನಡೆಸಿದ ಬಳಿಕ ಎಲ್ಲಾ ಶಾಸಕರ ಜೊತೆ ಔತಣಕೂಟದಲ್ಲಿ ಪಾಲ್ಗೊಳ್ಳಲಿರುವ ಬಿಎಸ್ವೈ, ಇಂದು ರಾತ್ರಿ ರಮಡ ರೆಸಾರ್ಟ್ನಲ್ಲೇ ಉಳಿದುಕೊಳ್ಳಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಇಂದು ಶಾಸಕರ ಸಭೆ ನಡೆಸಿದ ಬಳಿಕ ಕಡಬಗೆರೆ ಮುನಿರಾಜು ಅವರ ತಂಡದಿಂದ ಸಂಗೀತಗೋಷ್ಠಿ ಏರ್ಪಡಿಸಲಾಗಿದೆ. ಇನ್ನು ಶಾಸಕರು ಹಾಗೂ ಬಿಜೆಪಿ ಮುಖಂಡರಿಗೆ ಭರ್ಜರಿ ಔತಣಕೂಟ ಏರ್ಪಡಿಸಲಾಗಿದೆ ಎಂದು ಗೊತ್ತಾಗಿದೆ.