ಕರ್ನಾಟಕ

karnataka

ETV Bharat / state

ಯಡಿಯೂರಪ್ಪ ನಮ್ಮ ರೋಲ್ ಮಾಡೆಲ್: ಸಿಎಂ ಬಸವರಾಜ ಬೊಮ್ಮಾಯಿ - veershaiv lingayat global business conclave

ಬೆಂಗಳೂರಲ್ಲಿ ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್ ಕಾನ್‍ಕ್ಲೇವ್ ಹಾಗೂ ಬೃಹತ್ ಉದ್ಯೋಗ ಮೇಳದಲ್ಲಿ ಯಡಿಯೂರಪ್ಪ ಅವರನ್ನು ಹಾಡಿಹೊಗಳಿದ ಸಿಎಂ ಬಸವರಾಜ ಬೊಮ್ಮಾಯಿ.

ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ

By

Published : Jan 21, 2023, 8:19 AM IST

ಬೆಂಗಳೂರು: ನಮ್ಮ‌ ನಾಯಕ ಯಡಿಯೂರಪ್ಪ ಪರಿಶ್ರಮದಿಂದ ಬೆಳೆದಿದ್ದಾರೆ‌. ಅವರು ಕೇವಲ ಮುಖ್ಯಮಂತ್ರಿಯಷ್ಟೇ ಆದವರಲ್ಲ, ಅವರೊಬ್ಬ ನಾಯಕ, ಜನರ ಮನಸಿನಲ್ಲಿ ಉಳಿಯುವವರೇ ನಿಜವಾದ ನಾಯಕ. ಯಡಿಯೂರಪ್ಪ ಅವರೇ ನಮ್ಮ ರೋಲ್ ಮಾಡೆಲ್ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೊಗಳಿದರು. ನಗರದ ಅರಮನೆ ಮೈದಾನದಲ್ಲಿ ಇಂಟರ್ ನ್ಯಾಷನಲ್ ಲಿಂಗಾಯತ್ ಯೂತ್ ಫೋರಮ್ ವತಿಯಿಂದ ಆಯೋಜಿಸಿದ್ದ ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್ ಕಾನ್‍ಕ್ಲೇವ್ -2023 ಹಾಗೂ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾನ್ಯವಾಗಿ ಒಂದು ಸಮುದಾಯವನ್ನು ಕಟ್ಟುವಾಗ ಬಹುತೇಕ ಹಿರಿಯರು ಇರುತ್ತಾರೆ. ಆದರೆ, ಇಲ್ಲಿ ಯುವಕರೇ ಮುಂದೆ ಬಂದು ಸಮುದಾಯ ಕಟ್ಟುವ ಕೆಲಸ ಮಾಡುತ್ತಿದ್ದಾರೆ.
ಈ ಸಂಘ ಪ್ರಾಂಜಲ ಮನಸಿನಿಂದ ಸ್ಥಾಪಿಸಿದ್ದಾರೆ. ಅವರಿಗೆ ಯಾವುದೇ ಮಾರ್ಗದರ್ಶನ ಬೇಕಿಲ್ಲ. ನಿಮ್ಮ ಆತ್ಮಸಾಕ್ಷಿಗೆ ತಕ್ಕಹಾಗೆ ಕೆಲಸ ಮಾಡಿ, ಬಸವಣ್ಣನವರು ಕಾಯಕವೇ ಕೈಲಾಸ ಅಂದರು. ಕಾಯಕ ಮತ್ತು ಕರ್ತವ್ಯದ ನಡುವೆ ವ್ಯತ್ಯಾಸ ಇದ್ದು, ಕರ್ತವ್ಯ ನಮಗೋಸ್ಕರ ಮಾಡುವುದು. ನಮ್ಮೊಂದಿಗೆ ಬೇರೆಯವರಿಗೂ ಅವಕಾಶ ಕಲ್ಪಿಸಿ ಎಲ್ಲರೂ ಒಟ್ಟಾಗಿ ಬೆಳೆಯುವುದು ಕಾಯಕ. ಬಸವಣ್ಣನವರು ಕಾಯಕವೇ ಕೈಲಾಸ ಎಂಬುದು ಇದೇ ಚಿಂತನೆಯನ್ನು ಒಳಗೊಂಡಿದೆ. ದುಡ್ಡೆ ದೊಡ್ಡಪ್ಪ ಅಲ್ಲ ದುಡಿಮೆಯೇ ದೊಡ್ಡಪ್ಪ ಎಂದರು.

ಬಿಎಸ್​ವೈರನ್ನು ಹೊಗಳಿದ ಸಿಎಂ:ಯಡಿಯೂರಪ್ಪ ಅವರು ನಮ್ಮ ನಾಯಕರು. ಅವರು ಜನರ ಮನಸ್ಸಿನಲ್ಲಿ ಉಳಿಯುವ ನಿಜವಾದ ನಾಯಕ. ನಮಗೆಲ್ಲ ಮಾದರಿ ನಾಯಕರು ಎಂದು ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಸಿಎಂ ಬೊಮ್ಮಾಯಿ ಹೊಗಳಿದರು.

ನಿರಂತರ ಪರಿಶ್ರಮಕ್ಕೆ ಪ್ರತಿಫಲ ಸಿಗುತ್ತದೆ:ನಮ್ಮ ಸಮುದಾಯದಲ್ಲಿ ಅನೇಕ ಉದ್ಯಮಿಗಳಿದ್ದಾರೆ. ವಿಜಯ್ ಸಂಕೇಶ್ವರ್, ಮುರುಗೇಶ್ ನಿರಾಣಿ, ಪ್ರಭಾಕರ್ ಕೊರೆ ಎಲ್ಲರೂ ದೊಡ್ಡ ಮಟ್ಟದ ಸಾಧನೆ ಮಾಡಿದ್ದಾರೆ. ಸಣ್ಣ ಸಣ್ಣ ಉದ್ಯಮ ‌ಮಾಡಿ ದೊಡ್ಡ ಮಟ್ಟದಲ್ಲಿ ಬೆಳೆದಿದ್ದಾರೆ‌. ನಮ್ಮದು ರೈತಾಪಿ ಸಮಾಜ, ಮಣ್ಣಿನ ಜೊತೆ ನಮ್ಮ ಸಂಬಂಧ, ಯಾರು ಮಣ್ಣಿನ ಜೊತೆ ಸಂಬಂಧ ಇಟ್ಟುಕೊಂಡಿರುತ್ತಾರೊ ಅವರು ಪ್ರಾಮಾಣಿಕರಾಗಿರುತ್ತಾರೆ‌. ಗುಡ್ಡಗಾಡು ಜನರು ಬಲಿಷ್ಠರಾಗಿರುತ್ತಾರೆ. ಕರಾವಳಿ ಜನರು ಸಾಹಸಿಗಳಾಗಿರುತ್ತಾರೆ. ಲಿಂಗಾಯತ ಸಮುದಾಯವನ್ನು ದುಡಿಮೆಯೇ ಕಾಪಾಡುತ್ತದೆ. ಲಕ್ ಅನ್ನುವುದು ಇಲ್ಲ. ನಿರಂತರ ಶ್ರಮ ವಹಿಸಿದಾಗ ಮಾತ್ರ ಪ್ರತಿಫಲ ಸಿಗುತ್ತದೆ. ಸಮಾಜಕ್ಕೆ ಏನು ಬೇಕೋ ಅದಕ್ಕೆ ಸರ್ಕಾರ ಬೆಂಬಲವಾಗಿ ನಿಲ್ಲುತ್ತದೆ. ಬಸವ ಕಲ್ಯಾಣ, ಕೂಡಲ ಸಂಗಮ ಅಭಿವೃದ್ಧಿ ಮಾಡುತ್ತಿದ್ದೇವೆ. ಸಮಾಜಕ್ಕೆ ಏನು ಬೇಕೋ ಎಲ್ಲವನ್ನು ನೀಡಲು ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಿಎಂ ಬಿ‌.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಭಗವಂತ ಖೂಬಾ, ಸಚಿವರಾದ ಮುರುಗೇಶ್ ನಿರಾಣಿ, ಬಿ.ಸಿ.ಪಾಟೀಲ್, ಶಾಸಕರಾದ ಅರವಿಂದ ಬೆಲ್ಲದ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.

(ಇದನ್ನೂ ಓದಿ:ಬಜೆಟ್ ಅಧಿವೇಶನ ದಿನಾಂಕ ನಿಗದಿ: ಫೆ. 17ಗೆ ಸಿಎಂ ಬೊಮ್ಮಾಯಿ ಬಜೆಟ್ ಮಂಡನೆ)

(ಇದನ್ನೂ ಓದಿ:ವಿಶ್ವ ಮಾರುಕಟ್ಟೆಯಲ್ಲಿ ಸಿರಿಧಾನ್ಯಗಳಿಗೆ ಬಹುಬೇಡಿಕೆ: ಸಿಎಂ ಬಸವರಾಜ ಬೊಮ್ಮಾಯಿ)

ABOUT THE AUTHOR

...view details