ಬೆಂಗಳೂರು: ಕರ್ನಾಟಕದ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಆಸಕ್ತಿ ಬಿಆರ್ಎಸ್ (ಭಾರತ್ ರಾಷ್ಟ್ರ ಸಮಿತಿ)ಗೆ ಇಲ್ಲ. ಆದರೆ, ಜೆಡಿಎಸ್ ಅಭ್ಯರ್ಥಿಗಳನ್ನೇ ಬೆಂಬಲಿಸುವ ನಿರ್ಧಾರಕ್ಕೆ ತೆಲಂಗಾಣ ಮುಖ್ಯಮಂತ್ರಿಗಳು ಬಂದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2024ರ ಲೋಕಸಭೆಯಲ್ಲಿ 150 ಕ್ಷೇತ್ರದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೆಲಂಗಾಣ ಸಿಎಂ ಚಂದ್ರಶೇಖರ ರಾವ್ ಚಿಂತನೆ ನಡೆಸಿದ್ದಾರೆ. ಅದರಂತೆ ರಾಜ್ಯದ ಗಡಿ ಭಾಗದಲ್ಲಿ ಎರಡು ಮೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕಲಿದ್ದಾರೆ. ತಮ್ಮ ಶಾಸಕರ ಜೊತೆ ಸೇರಿ ಕೆಸಿಆರ್ ಅವರೊಂದಿಗೆ ಹಲವಾರು ವಿಷಯಗಳ ಕುರಿತು ಚರ್ಚೆ ನಡೆಸಿದ್ದೇನೆ. ಎಲ್ಲವೂ ಹೇಳಲು ಆಗುವುದಿಲ್ಲ ಎಂದರು.
2006ರ 20 ತಿಂಗಳ ಆಡಳಿತ ನೋಡಿದ್ದೇನೆ. ಈಗಿನ ಸರ್ಕಾರಗಳು ನಿಮ್ಮ ವಿರುದ್ಧ ಏನೇ ಆರೋಪ ಮಾಡಿದರೂ ನಿಮಗೆ ಯಾವುದೇ ಕಪ್ಪು ಚುಕ್ಕೆ ಇಲ್ಲದ ರೀತಿ ಆಡಳಿತ ನಡೆಸಿದ್ದೀರಿ. ಅದೇ ರೀತಿ ಮುಂದುವರೆಯಿರಿ ಎಂದು ಅವರು ಹೇಳಿದ್ದಾರೆ. 2023ರ ಕರ್ನಾಟಕ ವಿಧಾನಸಭೆ ಚುನಾವಣೆ ಹಾಗೂ 2024ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಆರ್ಎಸ್ ಪಕ್ಷಗಳು ಒಟ್ಟಾಗಿ ಕೆಲಸ ಮಾಡಲಿವೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಹೊರತಾದ ಪೂರ್ಣ ಬಹುಮತದ ಸರ್ಕಾರ ರಚನೆ ಮಾಡುವ ಬಗ್ಗೆ ಎರಡೂ ಪಕ್ಷಗಳು ಸದೃಢವಾಗಿ ಕೆಲಸ ಮಾಡಲಿವೆ. ಸಂಪೂರ್ಣ ಬೆಂಬಲ ನೀಡುವುದಾಗಿ ಕೆಸಿಆರ್ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಲೋಕಸಭೆ ಚುನಾವಣೆಗೆ ಹೊಸ ದಿಕ್ಸೂಚಿ: 2023ರ ಚುನಾವಣೆಯಲ್ಲಿ ಫಲಿತಾಂಶ ಜೆಡಿಎಸ್ ಪರವಾಗಿ ಬಂದರೆ, ಅದು 2024ರ ಲೋಕಸಭೆ ಚುನಾವಣೆಗೆ ಹೊಸ ದಿಕ್ಸೂಚಿಯಾಗಲಿದೆ. ಕರ್ನಾಟಕವೂ ರಾಷ್ಟ್ರ ರಾಜಕಾರಣದಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಲಿದೆ. ಕರ್ನಾಟಕದಲ್ಲಿ ಕನ್ನಡಿಗರದ್ದೇ ಆದ ಸ್ವಾಭಿಮಾನದ ಸರ್ಕಾರ ತರುವ ನಿಟ್ಟಿನಲ್ಲಿಯೂ ನಾವಿಬ್ಬರೂ ಚರ್ಚೆ ನಡೆಸಿದ್ದೇವೆ ಎಂದು ಹೆಚ್ಡಿಕೆ ಹೇಳಿದರು.
ದೃಢ ನಾಯಕತ್ವದ ಕೆಸಿಆರ್ ತಮ್ಮ ಸಂಕಲ್ಪ ಬಲದಿಂದಲೇ ತೆಲಂಗಾಣದ ಜನರನ್ನು ಒಟ್ಟಾಗಿ ಕರೆದೊಯ್ದು ಪ್ರತ್ಯೇಕ ರಾಜ್ಯದ ಸಾಧನೆ ಮಾಡಿದರು. ನಂತರ ತಮ್ಮ ಆಡಳಿತಾವಧಿಯಲ್ಲಿ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ರೈತಬಂಧು, ದಲಿತ ಬಂಧು ದಂತಹ ಕ್ರಾಂತಿಕಾರಿ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದು ಸರ್ಕಾರದ ಕಾರ್ಯಕ್ರಮಗಳು ಪ್ರತಿ ಜನರಿಗೂ ತಲುಪುವಂತೆ ಮಾಡಿದರು. ಇದೇ ರೀತಿಯಲ್ಲಿ ಕರ್ನಾಟಕದಲ್ಲಿ ಜೆಡಿಎಸ್ ಕೂಡ ಮಾಡಿತ್ತು. ಮುಂದಿನ ದಿನಗಳಲ್ಲಿ ಅಂತಹ ಜನಪರ ಕಾರ್ಯಕ್ರಮಗಳನ್ನು ಕರ್ನಾಟಕದಲ್ಲೂ ಜಾರಿಗೆ ತರಲಾಗುವುದು ಎಂದು ತಿಳಿಸಿದರು.