ಬೆಂಗಳೂರು: ಆನ್ಲೈನ್ ಮೂಲಕ ಹಣಕಾಸು ವಂಚನೆ ನಡೆಸುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಸರ್ಕಾರದ ಅಧೀನ ಸ್ಟಾರ್ಟ್ ಅಪ್ ಸಂಸ್ಥೆ ಸೈಸೆಕ್ ಹೊಸ ಆ್ಯಪ್ ಸಿದ್ದಪಡಿಸಿದೆ. ಈ ಆ್ಯಪ್ ಬಳಸಿದರೆ ಲಿಂಕ್ಗಳನ್ನು ಒತ್ತಿ ಹಣ ಕಳೆದುಕೊಳ್ಳುವುದಕ್ಕೆ ಬ್ರೇಕ್ ಬೀಳಲಿದೆ.
ಹೌದು, ಇತ್ತೀಚೆಗೆ ಸೈಬರ್ ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ ಬಹುತೇಕ ದೂರುಗಳಲ್ಲಿ ಹಣ ಕಳೆದುಕೊಂಡಿರುವ ಪ್ರಕರಣಗಳೇ ಹೆಚ್ಚು. ಅದರಲ್ಲೂ ಮೊಬೈಲ್ಗೆ ಬಂದ ಯಾವುದೋ ಲಿಂಕ್ ಕ್ಲಿಕ್ ಮಾಡಿ ಹಣ ಕಳೆದುಕೊಂಡವರೇ ಹೆಚ್ಚಿನವರಾಗಿರುತ್ತಾರೆ. ನಿಮಗೆ ಲೋನ್ ಸ್ಯಾಂಕ್ಷನ್ ಆಗಿದೆ, ಯಾವುದೇ ದಾಖಲಾತಿ ಬೇಕಿಲ್ಲ, ಮಾಹಿತಿ ಖಚಿತಪಡಿಸಿ ಸಾಕು ಎನ್ನುವ ಲಿಂಕ್, ಲಾಟರಿ ಬಂದಿದೆ ಕ್ಲೈಮ್ ಮಾಡಿ ಎನ್ನುವ ಲಿಂಕ್, ಕೆವೈಸಿ ಅಪ್ ಡೇಟ್ ಮಾಡಿ ಎನ್ನುವ ಲಿಂಕ್ ಮೊಬೈಲ್ಗಳಿಗೆ ಬರುತ್ತಲೇ ಇರುತ್ತವೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ಈ ಲಿಂಕ್ ಒತ್ತಿ ಒಟಿಪಿ ದಾಖಲಿಸಿದರೆ ಅವರ ಖಾತೆಯಲ್ಲಿ ಹಣ ಯಾರಿಗೋ ವರ್ಗಾವಣೆಯಾಗಿರುತ್ತದೆ, ಹಣ ಕಡಿತಗೊಂಡ ಸಂದೇಶ ಬಂದಿರುತ್ತದೆ, ಆನ್ಲೈನ್ ಪೇಮೆಂಟ್, ಆನ್ಲೈನ್ ಹಣ ವರ್ಗಾವಣೆಯ ಸೌಲಭ್ಯವನ್ನು ಈ ರೀತಿಯಾಗಿ ದುರುಪಯೋಗ ಮಾಡಿಕೊಳ್ಳಲಾಗುತ್ತದೆ, ಜನರು ಇದರ ಬಗ್ಗೆ ಮಾಹಿತಿ ಇಲ್ಲದೇ ಲಿಂಕ್ ಕ್ಲಿಕ್ ಮಾಡಿ ಹಣ ಕಳೆದುಕೊಂಡು ದೂರು ಕೊಡುತ್ತಾರೆ.
ಬ್ರೌಸ್ ಸೇಫ್ ಆ್ಯಪ್: ಈ ರೀತಿ ವಂಚನೆಗೆ ಒಳಗಾಗುವುದನ್ನು ತಡೆಯಲೆಂದೇ ಸರ್ಕಾರದ ಅಧೀನದಲ್ಲೇ ಕಾರ್ಯನಿರ್ವಹಿಸುವ ಸೈಸೆಕ್ ಎನ್ನುವ ಸ್ಟಾರ್ಟ್ ಆ್ಯಪ್ ಕಂಪನಿ ಬ್ರೌಸ್ ಸೇಫ್ ಎನ್ನುವ ಆ್ಯಪ್ ಸಿದ್ದಪಡಿಸಿದೆ. ಮೊಬೈಲ್ ಮತ್ತು ಡೆಸ್ಕ್ ಟಾಪ್ ಎರಡಕ್ಕೂ ಉಚಿತವಾಗಿ ಈ ಆ್ಯಪ್ ಬಳಸಿಕೊಳ್ಳಬಹುದಾಗಿದೆ. ಆ ಮೂಲಕ ಸೈಬರ್ ವಂಚನೆಯಿಂದ ಹಣ ಕಳೆದುಕೊಳ್ಳುವುದು ತಪ್ಪಲಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಕ್ಲಾಸ್ಗಳ ಸಂಖ್ಯೆ ಹೆಚ್ಚಾಗಿದ್ದು, ಮಕ್ಕಳು ಸ್ಮಾರ್ಟ್ ಫೋನ್ ಬಳಕೆ ಮಾಡುವುದು ಅನಿವಾರ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
ಸ್ಮಾರ್ಟ್ ಫೋನ್ಗಳಿಗೆ ಬರುವ ಕೆಲವೊಂದು ಅಡಲ್ಟ್ ಕಂಟೆಂಟ್ ಇರುವ ವೆಬ್ಗಳ ಲಿಂಕ್ ಒತ್ತಿ ಮಕ್ಕಳು ಅಡಲ್ಟ್ ಕಂಟೆಂಟ್ ನೋಡುವುದು ವರದಿಯಾಗಿತ್ತಲೇ ಇದೆ. ಇದಕ್ಕೂ ಈ ಆಪ್ ಬ್ರೇಕ್ ಹಾಕಲಿದೆ. ಸೈಬರ್ ಸೇಫ್ ಎನ್ನುವ ಒಂದೇ ಆ್ಯಪ್ ಬಳಸಿ ಎರಡು ಉಪಯೋಗ ಪಡೆದುಕೊಳ್ಳುವ ಅವಕಾಶವನ್ನು ಸರ್ಕಾರವೇ ಒದಗಿಸಿಕೊಟ್ಟಿದೆ. ಬೆಂಗಳೂರು ಟೆಕ್ ಸಮ್ಮಿಟ್ನಲ್ಲಿ ಬ್ರೌಸ್ ಸೇಫ್ ಕುರಿತು ಪ್ರದರ್ಶನ ಮಳಿಗೆ ತೆರದು ಮಾಹಿತಿ ನೀಡಲಾಗುತ್ತಿದೆ.