ಬೆಂಗಳೂರು: ಕೊರೊನಾ ಬಿಕ್ಕಟ್ಟು ಹಿನ್ನೆಲೆ ಬಟ್ಟೆ ವ್ಯಾಪಾರದಿಂದ ಆದ ನಷ್ಟ ತುಂಬಿಕೊಳ್ಳಲು, ವಾಸವಾಗಿದ್ದ ಮನೆಯ ಮಾಲೀಕರನ್ನೇ ಗುರಿಯಾಗಿಸಿಕೊಂಡು ಅವರ ಕೈ ಕಾಲು ಕಟ್ಟಿ ಹಾಡಹಗಲೇ ದರೋಡೆ ಮಾಡಿದ್ದ ಇಬ್ಬರು ಸಹೋದರರನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.
ಅವಿನಾಶ್ ಹಾಗೂ ಅರವಿಂದ್ ಬಂಧಿತ ಆರೋಪಿಗಳು. ಅವಿನಾಶ್ ಬಸವನಗುಡಿಯಲ್ಲಿ ವಾಸವಾಗಿದ್ದರೆ, ಅರವಿಂದ್ ವಿದ್ಯಾರಣ್ಯಪುರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಬಟ್ಟೆ ವ್ಯಾಪಾರ ಮಾಡುತ್ತಿದ್ದ ಅರವಿಂದ್ ಲಾಕ್ಡೌನ್ದಿಂದ ನಷ್ಟ ಅನುಭವಿಸಿದ್ದರು. ಸಾಲಗಾರರ ಕಾಟಕ್ಕೆ ಬೇಸತ್ತಿದ್ದ ಸಹೋದರರು, ಅರವಿಂದ್ ವಾಸವಿದ್ದ ಬಾಡಿಗೆ ಮನೆಯ ಓನರ್ ಮನೆಯಲ್ಲಿ ದರೋಡೆ ಮಾಡಲು ಸಂಚು ರೂಪಿಸಿದ್ದರು.
ಪೀಣ್ಯದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮನೆ ಮಾಲೀಕ ಸುಭಾಷ್ ವಿದ್ಯಾರಣ್ಯಪುರದಲ್ಲಿ ಪತ್ನಿ ಜಯಶ್ರೀ ಜತೆ ವಾಸಿಸುತ್ತಿದ್ದರು. ಕಳೆದ ಶನಿವಾರ ಬೆಳಗ್ಗೆ ಎಂದಿನಂತೆ ಸುಭಾಷ್ ಕೆಲಸಕ್ಕೆ ಹೋಗಿದ್ದರು. ದರೋಡೆಗೆ ಸಕಾಲ ಎಂದು ಅರಿತು ಅಂದು ಬೆಳಗ್ಗೆ ಸುಮಾರು 10 ಗಂಟೆಗೆ ಮನೆಗೆ ನುಗ್ಗಿದ ಅರವಿಂದ್ ಹಾಗೂ ಅವಿನಾಶ್ ಏಕಾಏಕಿ ಜಯಶ್ರೀ ಅವರ ಹಿಂಭಾಗದಿಂದ ತಲೆಯನ್ನು ಬಗ್ಗಿಸಿ ತಮ್ಮ ಸುಳಿವು ಸಿಗದಂತೆ ಎಚ್ಚರಿಕೆ ವಹಿಸಿ ದರೋಡೆಗೆ ಮುಂದಾದರು.