ಬೆಂಗಳೂರು:ನೆರೆಯ ರಾಜ್ಯ ತೆಲಂಗಾಣದಿಂದ ಬೀದರ್ ಮೂಲಕ ಬೆಂಗಳೂರಿಗೆ ಗಾಂಜಾ ತಂದು, ಮಾರಾಟ ಮಾಡುತ್ತಿದ್ದ ಅತಿಥಿ ಉಪನ್ಯಾಸಕ ಸೇರಿದಂತೆ ಮೂವರನ್ನು ಜೆ.ಪಿ. ನಗರ ಪೊಲೀಸರು ಬಂಧಿಸಿದ್ದಾರೆ.
ತೆಲಂಗಾಣ ಮೂಲದ ಆಸ್ಗರ್ ಖಾನ್, ಕಿರಣ್ ಹಾಗೂ ಮಣಿಪಾಲ್ ಬಂಧಿತರಾಗಿದ್ದು, ಆರೋಪಿಗಳಿಂದ 76 ಲಕ್ಷದ ಮೌಲ್ಯದ ಸುಮಾರು 127 ಕೆ.ಜಿ ಗಾಂಜಾ, ಒಂದು ಕಾರು, ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.
ಸರ್ಜಾಪುರ ರಸ್ತೆಯ ಬಿಲ್ಲಾಪುರದ ವಾಸವಾಗಿದ್ದ ಅಸ್ಗರ್ ಖಾನ್ ಡ್ರಗ್ಸ್ ಸಾಗಾಟ ಮಾಡುತ್ತಿದ್ದ ಮಾಹಿತಿ ಮೇರೆಗೆ, ದಾಳಿ ಮಾಡಿದ ಪೊಲೀಸರು 640 ಗ್ರಾಂ.ತೂಕದ ಗಾಂಜಾ ಹಾಗೂ ಒಂದು ಮೊಬೈಲ್ ಪೋನ್ ಜಪ್ತಿ ಮಾಡಿಕೊಂಡಿದ್ದಾರೆ.
ಆತ ನೀಡಿದ ಮಾಹಿತಿ ಮೇರೆಗೆ ಪೊಲೀಸರು ತೆಲಂಗಾಣದಿಂದ ಗಾಂಜಾ ತರಿಸಿಕೊಂಡು ಬೀದರ್ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಾರಾಟ ಮಾಡುತ್ತಿದ್ದ ಕಿರಣ್ ಹಾಗೂ ಮಣಿಪಾಲ್ನನ್ನು ಬಂಧಿಸಿ ಗಾಂಜಾ ಜಪ್ತಿ ಮಾಡಿಕೊಂಡಿದ್ದಾರೆ.
ಲಾಕ್ಡೌನ್ ತಂದ ನಿರುದ್ಯೋಗ: ಬಂಧಿತ ಆರೋಪಿಗಳೆಲ್ಲರೂ ಕೊರೊನಾ ಪ್ರೇರಿತ ಲಾಕ್ಡೌನ್ನಿಂದ ನಿರುದ್ಯೋಗಿಗಳಾಗಿದ್ದು, ಹಣ ಸಂಪಾದನೆಗಾಗಿ ಅಕ್ರಮ ಮಾರ್ಗ ಹಿಡಿದಿದ್ದರು. ಆರೋಪಿಗಳ ಪೈಕಿ ಕಿರಣ್ ತೆಲಂಗಾಣದ ನಿವಾಸಿಯಾಗಿದ್ದು, ಕೃಷ್ಣಾಪುರದಲ್ಲಿರುವ ಐಟಿಐ ಕಾಲೇಜಿನಲ್ಲಿ ಅತಿಥಿ ಶಿಕ್ಷಕರಾಗಿ ಕೆಲಸ ಮಾಡಿಕೊಂಡಿದ್ದ.
ಜಹಿರಾಬಾದ್‌ನಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿ ಮಾಡಿಕೊಂಡು ಬಂದು, ಬೀದರ್ ಜಿಲ್ಲೆಯ ಹೆದ್ದಾರಿಗಳಲ್ಲಿ ಮಾರಾಟ ಮಾಡುತ್ತಿದ್ದು, ನಂತರ ಹೆಚ್ಚಿನ ಹಣವನ್ನು ಗಳಿಸುವ ಉದ್ದೇಶದಿಂದ ಬೆಂಗಳೂರಿಗೆ ಬಂದು ಮಾರಾಟ ಮಾಡುತ್ತಿದ್ದ. ಈ ಕೃತ್ಯಕ್ಕೆ ಇಬ್ಬರು ಸಾಥ್ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.