ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ನವೆಂಬರ್ 25 ಹಾಗೂ 26 ರಂದು ಹಮ್ಮಿಕೊಂಡಿರುವ ಕಂಬಳ ಉತ್ಸವಕ್ಕೆ ಅತಿಥಿಯಾಗಿ ಭಾರತೀಯ ಕುಸ್ತಿ ಸಂಸ್ಥೆಯ ನಿರ್ಗಮಿತ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರಿಗೆ ಆಹ್ವಾನ ನೀಡಲಾಗಿತ್ತು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಬೆಂಗಳೂರು ಕಂಬಳ ಸಮಿತಿ ವಿವಾದಕ್ಕೆ ತೆರೆ ಎಳೆದಿದೆ.
ಕಂಬಳ ಉತ್ಸವಕ್ಕೆ ಬ್ರಿಜ್ ಭೂಷಣ್ ಗೆ ಆಹ್ವಾನದ ಹಿನ್ನೆಲೆಯಲ್ಲಿ ಭಾರೀ ವಿರೋಧ ಕೇಳಿ ಬಂದಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು. ವಿವಾದದ ಉರುಳು ಸುತ್ತಿಕೊಳ್ಳುತ್ತಿದ್ದಂತೆ ಎಚ್ಚೆತ್ತಿಕೊಂಡಿರುವ ಬೆಂಗಳೂರು ಕಂಬಳ ಸಮಿತಿಯ ನೇತೃತ್ವ ವಹಿಸಿರುವ ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಶೋಕ್ ರೈ ಈ ಬಗ್ಗೆ ವಿವಾದಕ್ಕೆ ಇತಿಶ್ರೀ ಹಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರೈ, ಕಂಬಳ ಒಂದು ಕ್ರೀಡೆಯಾಗಿದೆ. ನ.25 ರಿಂದ ಎರಡು ದಿನಗಳ ಕಂಬಳ ಉತ್ಸವ ಹಮ್ಮಿಕೊಂಡಿದ್ದು, ಇದು ದೊಡ್ಡ ಕಾರ್ಯಕ್ರಮ ಆಗಿದೆ. ಅತಿಥಿಗಳನ್ನು ಆಹ್ವಾನಿಸುವ ವಿಚಾರದಲ್ಲಿ ಕೆಲ ಸಂಘಟನೆಗಳು ಇಂತಹವರನ್ನ ಕರೆಸಬೇಕು ಎಂದು ಮನವಿ ಮಾಡುತ್ತವೆ. ಪುನೀತ್ರಾಜ್ ಕುಮಾರ್ ಅಭಿಮಾನಿಗಳು ಬಂದು ವೇದಿಕೆಗೆ ಅವರ ಹೆಸರನ್ನು ಇಡಲು ಹೇಳುತ್ತಾರೆ, ಅದೇ ರೀತಿ ಸಿದ್ದಿ ಜನಾಂಗದವರು ಬ್ರಿಜ್ ಭೂಷಣ್ ಅವರ ಹೆಸರು ಸೂಚಿಸಿದ್ದರು. ಗೋವಾದಲ್ಲಿ ಸಿದ್ದಿ ಹಾಗೂ ಕುಡುಬಿ ಜನಾಂಗದವರಿಗೆ ಬ್ರಿಜ್ ಭೂಷಣ್ ಕುಸ್ತಿ ತರಬೇತಿ ನೀಡಿದ್ದರು. ಅವರ ಸೇವೆ ಪರಿಗಣಿಸಿ ಕಂಬಳ ಉತ್ಸವಕ್ಕೆ ಅವರನ್ನ ಆಹ್ವಾನಿಸಲಾಗಿತ್ತು. ಈ ಬಗ್ಗೆ ಮತ್ತೆ ಅವರನ್ನು ಸಂಪರ್ಕಿಸಿದಾಗ ಕಂಬಳ ಉತ್ಸವಕ್ಕೆ ಬರುವುದಿಲ್ಲ ಎಂದಿದ್ದರು. ಆದರೆ, ಆಹ್ಬಾನ ಪತ್ರಿಕೆಯಲ್ಲಿ ಅವರ ಹೆಸರಿದ್ದು ಅದನ್ನು ತೆಗೆಯುತ್ತೇವೆ ಎಂದು ಸ್ಪಷ್ಟಪಡಿಸಿದರು.